ಅಭ್ಯರ್ಥಿ ಇಲ್ಲಿ ನೆಪ ಮಾತ್ರ, ನಾನು-ಡಿ.ಕೆ.ಸುರೇಶ್ ಇಲ್ಲಿನ ನಿಜವಾದ ಅಭ್ಯರ್ಥಿಗಳು ನೆನಪಿರಲಿ: ಚನ್ನಪಟ್ಟಣದಲ್ಲಿ ಡಿಕೆಶಿ ಅಬ್ಬರ

Public TV
3 Min Read

ರಾಮನಗರ: ಚನ್ನಪಟ್ಟಣದಲ್ಲಿ ನಡೆದ ರಾಜ್ಯ ಸರ್ಕಾರದ ಸಾಧನಾ ಸಮಾವೇಶದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅಬ್ಬರಿಸಿದ್ದಾರೆ.

ನಾವು ಸುಮ್ಮನೆ ಚನ್ನಪಟ್ಟಣಕ್ಕೆ ಬಂದಿಲ್ಲ. ಒಳ್ಳೆ ಗಳಿಗೆ, ಸಮಯ ಎಲ್ಲಾ ನೋಡಿಕೊಂಡು ಬಂದಿದ್ದೀವಿ. ರಾಮಕೃಷ್ಣ ಪರಮಹಂಸರು ಹೇಳಿದ್ದಾರೆ. ದರೋಡೆ ಮಾಡಿದವರನ್ನ, ರೇಪ್ ಮಾಡಿದವರನ್ನ, ಕಳ್ಳತನ ಮಾಡಿದವರನ್ನ, ಸುಳ್ಳು ಹೇಳಿದವರನ್ನ ಯಾರನ್ನ ಬೇಕಾದರು ಕ್ಷಮಿಸು. ಆದ್ರೆ ಉಪಕಾರ ಪಡೆದು ದ್ರೋಹ ಮಾಡಿದವರನ್ನು ಮಾತ್ರ ಕ್ಷಮಿಸಬೇಡ ಅಂತ ಶಾಸಕ ಸಿ.ಪಿ ಯೋಗೇಶ್ವರ್ ವಿರುದ್ಧ ಕಿಡಿಕಾರಿದ್ರು. ಪಕ್ಷಕ್ಕೆ ದ್ರೋಹ ಮಾಡುವುದು ಅಂದರೆ ತಾಯಿಗೆ ದ್ರೋಹ ಮಾಡಿದಂತೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು.

ಹೈಕಮಾಂಡ್ ಹೇಳಿದವರು ಇಲ್ಲಿ ಅಭ್ಯರ್ಥಿ ಆಗ್ತಾರೆ. ಆದರೆ ಅಭ್ಯರ್ಥಿ ಇಲ್ಲಿ ನೆಪ ಮಾತ್ರ. ನಾನು ಹಾಗೂ ಡಿ.ಕೆ.ಸುರೇಶ್ ಇಲ್ಲಿನ ನಿಜವಾದ ಅಭ್ಯರ್ಥಿಗಳು ನೆನಪಿರಲಿ. 30 ವರ್ಷದಿಂದ ನನ್ನನ್ನು ನೋಡಿದಿರಾ ಅಂತ ಡಿಕೆಶಿ ಹೇಳಿದ್ರು.

ಬುದ್ಧ, ಬಸವ ಉತ್ತಮ ಸಮಾಜ ಉದ್ಧಾರಕ್ಕಾಗಿ ಮನೆ ಬಿಟ್ಟ ಘಳಿಗೆ, ಗಾಂಧೀಜಿ ಕಾಂಗ್ರೆಸ್ ಗೆ ಬಂದ ಘಳಿಗೆ, ಅಂಬೇಡ್ಕರ ಸಂವಿಧಾನ ಬರೆದ ಘಳಿಗೆ, ಕೆಂಪೇಗೌಡ ಬೆಂಗಳೂರು ನಗರ ಕಟ್ಟಿದ ಘಳಿಗೆ, ಸೋನಿಯಾ ಗಾಂಧಿ ಪ್ರಧಾನ ಮಂತ್ರಿ ಹುದ್ದೆ ತ್ಯಜಿಸಿದ ಘಳಿಗೆ, ಹಾಗೆಯೇ ಚನ್ನಪಟ್ಟಣದಲ್ಲಿ ಬದಲಾವಣೆ ಘಳಿಗೆಯಲ್ಲಿ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ ಎಂದು ಡಿಕೆ ಶಿವಕುಮಾರ್ ಹಾಡಿ ಹೊಗಳಿದ್ರು.

ಅಂದು ಮುಖ್ಯಮಂತ್ರಿಗಳ ಕಾಲಿಗೆ ಬಿದ್ದು 900 ಕೋಟಿ ಅನುದಾನ ಪಡೆದು ಕೆಲಸಗಳನ್ನ ಮಾಡಿ ಈಗ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರ್ತಾರೆ ಇಲ್ಲಿನ ಶಾಸಕರು ಅಂದ್ರೆ ಇದೇನಾ ಉಪಕಾರದ ಸ್ಮರಣೆ? ನಮ್ಮ ಸರ್ಕಾರದಿಂದ ಲಾಭ ಪಡೆದು ಈಗ ಸದಾನಂದಗೌಡ, ಯಡಿಯೂರಪ್ಪ ಅವರಿಗಾಗಿ ಕಾಯ್ತಾ ಕೂರ್ತಾರಲ್ಲ ಏನಿದು? ಇವನು ಮಂತ್ರಿಯಾಗಿದ್ದಾಗ ಏನ್ಮಾಡಿದ ಯೋಗೀಶಣ್ಣಾ? ಯಡಿಯೂರಪ್ಪ ಸೀರೆ, ಸೈಕಲ್ ಕೊಟ್ಟಿದ್ದು ಬಿಟ್ರೆ ಏನ್ರಿ ಕೊಟ್ರು ಅಂದ್ರು.

ಸಿಎಂ ಸಿದ್ದರಾಮಯ್ಯ ಮಾತನಾಡಿ, ಚನ್ನಪಟ್ಟಣ ಕ್ಷೇತ್ರಾಭಿವೃದ್ಧಿಗೆ ಅನುದಾನ ಕೊಟ್ಟಿದ್ದು ನಮ್ಮ ಸರ್ಕಾರ. ಇಲ್ಲಿನ ಶಾಸಕರು ತಾವೇ ಅಭಿವೃದ್ಧಿ ಮಾಡಿರುವರೆಂದು ಹೇಳ್ಕೊಳ್ತಿದ್ದಾರೆ. ನಮ್ಮ ಸರ್ಕಾರ ಹಣ ಕೊಡ್ಲಿಲ್ಲ ಅಂದ್ರೆ ಅಭಿವೃದ್ಧಿ ಮಾಡ್ತಿದ್ರಾ ಅವರು? ಇವತ್ತಿನ ಕಾರ್ಯಕ್ರಮಕ್ಕೆ ಇಲ್ಲಿನ ಶಾಸಕರನ್ನೂ ಕರೆದಿದ್ದೆವು. ಆದರೆ ಅವರು ಬರಲಿಲ್ಲ. ಜನರಿಗೆ ಸುಳ್ಳು ಹೇಳಿದ್ದಾರೆ ಇಲ್ಲಿನ ಶಾಸಕರು. ತಮ್ಮ ಸುಳ್ಳು ಬಯಲಾಗಿಬಿಡುತ್ತೆ ಅನ್ನೋ ಕಾರಣಕ್ಕೆ ಇಲ್ಲಿನ ಶಾಸಕರು ಕಾರ್ಯಕ್ರಮಕ್ಕೆ ಬರಲಿಲ್ಲ ಅಂದ್ರು.

ಇಲ್ಲಿನ ಶಾಸಕರು ಯಾವತ್ತಾದರೂ ಸದನಕ್ಕೆ ಬಂದಿದ್ದಾರಾ? ರಾಮನಗರ ಜಿಲ್ಲೆ, ಚನ್ನಪಟ್ಟಣಕ್ಕೆ ಸಂಬಂಧಿಸಿದ ಒಂದೇ ಒಂದು ಪ್ರಶ್ನೆ ಕೇಳಿಲ್ಲ ಇಲ್ಲಿನ ಶಾಸಕರು. ಮತ್ತೆ ನೀವೆಲ್ಲ ಅವರಿಗೆ ಓಟು ಕೊಟ್ಟಿರೋದು ಎಲ್ಲೋ ತಿರುಗಾಡಿಕೊಂಡಿರಲಿ ಅಂತಾನಾ? ಮತ್ತೆ ಇವರೆಂಥ ಜನಪರ, ಅಭಿವೃದ್ಧಿ ಪರ ಶಾಸಕರಾಗಲು ಅರ್ಹರು? ಅಂತ ಪ್ರಶ್ನಿಸಿದ್ರು. ಮುಂದಿನ ಬಾರಿ ಮತ್ತೆ ಕಾಂಗ್ರೆಸ್ ಗೇ ಆಶೀರ್ವಾದ ಮಾಡಿ ಅಂತ ಹೇಳಿದ್ರು.

ಈಗ ಚನ್ನಪಟ್ಟಣದ ಶಾಸಕರು ಬಿಜೆಪಿಗೆ ಹೋಗಿದ್ದಾರೆ. ದೇಶದಲ್ಲಿ 19 ರಾಜ್ಯಗಳಲ್ಲಿ ಬಿಜೆಪಿ ಇದೆ. ರಾಜ್ಯದ ಬಡವರಿಗೆ 7 ಕೆಜಿ ಉಚಿತ ಅಕ್ಕಿ ಕೊಡುವ ರಾಜ್ಯ ಇದೆಯಾ? ನಮ್ಮ ಸರಕಾರ ಮಾತ್ರ ಉಚಿತ ಅಕ್ಕಿ ಕೊಡ್ತಿದೆ ಅಂದ್ರು.

ಮುಂದಿನ ಮಾರ್ಚ್ ಒಳಗೆ ಪ್ರಣಾಳಿಕೆಯ ಎಲ್ಲ ಭರವಸೆಗಳೂ ಪೂರ್ಣವಾಗಲಿದೆ. ಇಲ್ಲಿನ ಶಾಸಕರ ಸಾಧನೆ ಏನು? ಏನೂ ಮಾಡದಿದ್ದ ಮೇಲೆ ಓಟ್ಯಾಕೆ ಕೊಡ್ತೀರಿ? ಸುಮ್ನೆ ಶೋಕಿ ಮಾಡ್ಕೊಂಡು ಓಡಾಡ್ಕೊಂಡಿರಲಿ ಅಂತ ಶಾಸಕರಾಗಿ ಆರಿಸಿದ್ರಾ? ಇಲ್ಲಿನ ಶಾಸಕರು ಏನೂ ಮಾಡ್ಲಿಲ್ಲ ಅಂತ ವಾಗ್ದಾಳಿ ನಡೆಸಿದ್ರು.

ಈ ನಡುವೆ ಸಿಎಂ ಸಾರ್ ನಾವು ನಿಮ್ಮ ಬಿಗ್ ಫ್ಯಾನ್. ನಿಮ್ಮ ಜೊತೆ ಫೋಟೋ ತಗೆಸಿಕೊಳ್ಳಬೇಕು ಎಂದು ಕೆಲವು ಸಭಿಕರು ಭಿತ್ತಿ ಪತ್ರ ಪ್ರದರ್ಶಿಸಿದ್ರು. ಏನ್ರಪ್ಪ ಅದು ಪೋಸ್ಟರ್ ಎಂದ ಸಿಎಂ, ಸರಿಯಾಗೆ ಗೊತ್ತಾಗದೆ ಹೊಸ ವರ್ಷದ್ದ..? ಇಳ್ಸಿ ಅದನ್ನ ಅಂದ್ರು.

Share This Article
Leave a Comment

Leave a Reply

Your email address will not be published. Required fields are marked *