ಗೆಳೆಯ ಲಾಟರಿಯಲ್ಲಿ ಗೆದ್ದ 30 ಕೋಟಿ ರೂ. ಕದ್ದು ಲವ್ವರ್‌ ಜೊತೆ ಕೇಡಿ ಲೇಡಿ ಎಸ್ಕೇಪ್‌

Public TV
2 Min Read

ಒಟ್ಟಾವಾ: ವ್ಯಕ್ತಿಯೊಬ್ಬ ಲಾಟರಿಯಲ್ಲಿ (Lottery) ಗೆದ್ದಿದ್ದ ಸುಮಾರು 30 ಕೋಟಿ (CA$5) ರೂ. ಹಣವನ್ನು (Money) ಆತನ ಮಾಜಿ ಗೆಳತಿಯೇ ಕದ್ದು ತನ್ನ ಪ್ರಿಯಕರನೊಂದಿಗೆ ಪರಾರಿಯಾದ ಘಟನೆ ಕೆನಡಾದಲ್ಲಿ (Canada) ನಡೆದಿದೆ.

ವಿನ್ನಿಪೆಗ್‌ನ ಲಾರೆನ್ಸ್ ಕ್ಯಾಂಪ್‌ಬೆಲ್ ಎಂಬಾತ 2024 ರಲ್ಲಿ ಲಾಟರಿ ಟಿಕೆಟ್ ಖರೀದಿಸಿ, ಹಣ ಗೆದ್ದಿದ್ದ. ಈ ವೇಳೆ ಆತನ ಬಳಿ ಸರಿಯಾದ ಗುರುತಿನ ಚೀಟಿ ಇಲ್ಲದ ಕಾರಣ ಬಹುಮಾನವನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ಈ ವೇಳೆ ಲಾಟರಿ ವಿಭಾಗದ ಅಧಿಕಾರಿಗಳ ಸಲಹೆಯ ಪಡೆದು, ತನ್ನ ಗೆಳತಿ ಕ್ರಿಸ್ಟಲ್ ಆನ್ ಮೆಕ್ಕೇಯ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದ.

ಸುಮಾರು ಒಂದುವರೆ ವಷಕ್ಕೂ ಹೆಚ್ಚು ಕಾಲ ಕ್ರಿಸ್ಟಲ್, ಕ್ಯಾಂಪ್‌ಬೆಲ್‌ನ ಜೊತೆಗೆ ಲಿವಿಂಗ್‌-ಟುಗೆದರ್‌ನಲ್ಲಿದ್ದು ವಿಶ್ವಾಸಗಳಿಸಿದ್ದಳು. ಇನ್ನೂ, ಆತನ ಬ್ಯಾಂಕ್‌ ಖಾತೆ ಇಲ್ಲದ ಕಾರಣ ಆಕೆಯ ಖಾತೆಯಲ್ಲೇ ಲಾಟರಿಯ ಹಣವನ್ನು ಕ್ಯಾಂಪ್‌ಬೆಲ್‌ ಇರಿಸಿದ್ದ. ಈಗ ಈ ಹಣವನ್ನೆಲ್ಲ ತೆಗೆದುಕೊಂಡು ಕ್ರಿಸ್ಟಲ್ ತನ್ನ ಹೊಸ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ.

ಇದಕ್ಕೂ ಮುನ್ನ ಇಬ್ಬರೂ ಶಾಪರ್ಸ್ ಡ್ರಗ್ ಮಾರ್ಟ್‌ನಲ್ಲಿ ಲಾಟರಿಯ ಚೆಕ್‌ ಹಿಡಿದು ವೀಡಿಯೋ ಮಾಡಿ ಬಿಟ್ಟಿದ್ದರು. ಅಲ್ಲದೇ ಸೋಶಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು. ಫೋಟೋ ತೆಗೆಯುವಾಗ ಕ್ರಿಸ್ಟಲ್‌ ಮುಖದಲ್ಲಿ ಲವಲವಿಕೆ ಇರಲಿಲ್ಲ ಎಂದು ಕ್ಯಾಂಪ್‌ಬೆಲ್‌ ಹೇಳಿಕೊಂಡಿದ್ದಾನೆ. ಇನ್ನೂ ಕ್ರಿಸ್ಟಲ್‌ ನಾಪತ್ತೆಯಾದ ಬಳಿಕ, ಆಕೆಯ ಹುಡುಕಾಟ ನಡೆಸಿದ್ದ ಕ್ಯಾಂಪ್‌ಬೆಲ್‌, ಅವಳು ಇನ್ನೊಬ್ಬ ವ್ಯಕ್ತಿಯೊಂದಿಗೆ ಹೋಟೆಲ್‌ ಒಂದರ ಬೆಡ್‌ ಮೇಲೆ ಇರುವುದನ್ನು ಪತ್ತೆ ಮಾಡಿದ್ದ. ಈ ವಿಚಾರವನ್ನು ಆತ ದೂರಿನಲ್ಲಿ ಉಲ್ಲೇಖಿಸಿದ್ದಾನೆ.

ಕ್ರಿಸ್ಟೆಲ್‌ ಸಂಪರ್ಕಕ್ಕೆ ಯತ್ನಿಸಿದಾಗ, ಆಕೆ ಕ್ಯಾಂಪ್‌ಬೆಲ್‌ನ ಫೋನ್‌ ಕರೆ ಹಾಗೂ ಅವನ ಸಂದೇಶಗಳಿಗೆ ಉತ್ತರಿಸಿರಲಿಲ್ಲ. ಆಕೆ ಸೋಶಿಯಲ್‌ ಮಾಧ್ಯಮಗಳ ಖಾತೆಗಳಲ್ಲಿ ಅವನನ್ನು ಬ್ಲ್ಯಾಕ್‌ ಮಾಡಿದ್ದಳು ಎಂದು ಆರೋಪಿಸಲಾಗಿದೆ. ಇದೆಲ್ಲದರ ನಡುವೆ ಕ್ರಿಸ್ಟೆಲ್‌ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾಳೆ.

ಕ್ಯಾಂಪ್‌ಬೆಲ್‌ ನೀಡಿರುವ ದೂರಿನಡಿ ದಾಖಲಾಗಿರುವ ಮೊಕದ್ದಮೆಯ ವಿಚಾರಣೆ ನಡೆಸಿರುವ ಮ್ಯಾನಿಟೋಬಾದ ಕೋರ್ಟ್ ಆಫ್ ಕಿಂಗ್ಸ್ ಬೆಂಚ್‌, ವೆಸ್ಟರ್ನ್ ಕೆನಡಾ ಲಾಟರಿ ಕಾರ್ಪೊರೇಷನ್ (WCLC) ಮತ್ತು ಮ್ಯಾನಿಟೋಬಾ ಲಿಕ್ಕರ್ ವಿರುದ್ಧ ಅಸಮಾಧಾನ ಹೊರಹಾಕಿದೆ. ಅಲ್ಲಿನ ಅಧಿಕಾರಿಗಳು ಸೂಕ್ತ ಮಾಹಿತಿ ನೀಡದೇ, ಲಾಟರಿ ಹಣವನ್ನು ಬೇರೊಬ್ಬರ ಖಾತೆಗೆ ವರ್ಗಾಯಿಸಲಾಗಿದೆ. ಇದರಿಂದ ಗೆದ್ದ ವ್ಯಕ್ತಿಗೆ ಎದುರಾಗಬಹುದಾದ ಸಮಸ್ಯೆಯ ಬಗ್ಗೆ ಮನವರಿಕೆ ಮಾಡುವಲ್ಲಿ ಸಂಸ್ಥೆ ವಿಫಲವಾಗಿದೆ ಎಂದು ಹೇಳಿದೆ.

Share This Article