ಖಲಿಸ್ತಾನ್‌ ಪರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕೆನಡಾ ಪೊಲೀಸ್‌ ಅಧಿಕಾರಿ ಅಮಾನತು

Public TV
1 Min Read

ಒಟ್ಟೋವಾ: ಖಲಿಸ್ತಾನ್‌ ಪರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕೆನಡಾದ ಪೊಲೀಸ್‌ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

ಬ್ರಾಂಪ್ಟನ್‌ನಲ್ಲಿರುವ ಹಿಂದೂ ದೇವಾಲಯದ ಹೊರಗೆ ಪೊಲೀಸ್‌ ಅಧಿಕಾರಿ, ಖಲಿಸ್ತಾನ್ ಪರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇದರ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿತ್ತು. ಅದರ ಬೆನ್ನಲ್ಲೇ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

ಅಮಾನತುಗೊಂಡ ಪೀಲ್ ಪ್ರಾದೇಶಿಕ ಪೊಲೀಸ್ ಅಧಿಕಾರಿ ಹರಿಂದರ್ ಸೋಹಿ ಎಂದು ಗುರುತಿಸಲಾಗಿದ್ದು, ಈತ ಖಲಿಸ್ತಾನ್ ಧ್ವಜವನ್ನು ಹಿಡಿದಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರತಿಭಟನೆಯಲ್ಲಿ ಇತರರು ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ.

ಸೋಹಿ ಪೀಲ್ ಪ್ರಾದೇಶಿಕ ಪೊಲೀಸ್‌ನ ಸಾರ್ಜೆಂಟ್ ಆಗಿದ್ದರು. ‘ಸಮುದಾಯ ಸುರಕ್ಷತೆ ಮತ್ತು ಪೊಲೀಸ್ ಕಾಯಿದೆಯ ಪ್ರಕಾರ ಈ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ವೀಡಿಯೋದಲ್ಲಿ ಚಿತ್ರಿಸಲಾದ ಸಂದರ್ಭಗಳನ್ನು ನಾವು ತನಿಖೆ ಮಾಡುತ್ತಿದ್ದೇವೆ. ಈ ತನಿಖೆ ಪೂರ್ಣಗೊಳ್ಳುವವರೆಗೆ ಹೆಚ್ಚಿನ ಮಾಹಿತಿಯನ್ನು ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

Share This Article