ಕಾರವಾರ| ಹುಲಿ ಸಮೀಕ್ಷೆಗೆ ಅಳವಡಿಸಿದ್ದ ಕ್ಯಾಮೆರಾ ಟ್ರ್ಯಾಪ್ ಕಳ್ಳತನ

1 Min Read

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನ ಕ್ಯಾಸಲ್ ರಾಕ್‌ನ ಕಾಳಿ ಹುಲಿ ಸಂರಕ್ಷಿತ ವಲಯದಲ್ಲಿ (Kali Tiger Reserve) ಅರಣ್ಯ ಇಲಾಖೆಯು ಹುಲಿ ಸರ್ವೆಗಾಗಿ ಅಳವಡಿಸಿದ್ದ ಕ್ಯಾಮೆರಾ ಟ್ರ್ಯಾಪ್ (Camera Trap) ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ.

ಹುಲಿ ಸಮೀಕ್ಷೆ ಹಾಗೂ ಕಾಡಿನ ಪ್ರಾಣಿಗಳ ಚಲನ-ವಲನ ಅಧ್ಯಯನಕ್ಕಾಗಿ ಅಳವಡಿಸಲಾಗಿದ್ದ ಸುಮಾರು 53 ಸಾವಿರ ರೂ. ಮೌಲ್ಯದ ಕ್ಯಾಮೆರಾ ಇದೀಗ ಕಾಣೆಯಾಗಿದ್ದು, ಹುಲಿ ಗಣತಿ ಕಾರ್ಯಕ್ಕೆ ವಿಘ್ನ ತಂದಿಟ್ಟಿದೆ. ಇದನ್ನೂ ಓದಿ: ಸಿ.ಜೆ ರಾಯ್ ಕಟ್ಟಿದ್ದು 8,500 ಕೋಟಿಯ ಸಾಮ್ರಾಜ್ಯ – ಬಿಲಿಯನೇರ್ ಆಗಿದ್ದೇ ರೋಚಕ!

ದೇಶಾದ್ಯಂತ ಜನವರಿ 13 ರಿಂದ ಹುಲಿ ಸಮೀಕ್ಷೆ ಕಾರ್ಯ ಆರಂಭವಾಗಿದ್ದು, ಇದರ ಭಾಗವಾಗಿ ಜೊಯಿಡಾ ಅರಣ್ಯ ಪ್ರದೇಶದಲ್ಲೂ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಅಳವಡಿಸಲಾಗಿತ್ತು. ಹುಲಿ ಮಾತ್ರವಲ್ಲದೆ ಕಾಡಿನಲ್ಲಿ ಸಂಚರಿಸುವ ಇತರೆ ವನ್ಯಜೀವಿಗಳ ಮಾಹಿತಿ ಸಂಗ್ರಹಿಸಲು ಈ ಕ್ಯಾಮೆರಾ ಪ್ರಮುಖ ಪಾತ್ರ ವಹಿಸುತ್ತಿತ್ತು. ಕ್ಯಾಸಲ್ ರಾಕ್ ವನ್ಯಜೀವಿ ವಲಯದ ಅವೇಡಾ–ಪೊಪ್ಪವಾಡಿ ಬೀಟ್ ವ್ಯಾಪ್ತಿಯ ವಜ್ರ ಪಾಲ್ಸ್ ಕಡೆಗೆ ಹೋಗುವ ರಸ್ತೆಯ ಬಳಿ ಅರಣ್ಯಾಧಿಕಾರಿಗಳು ಕ್ಯಾಮೆರಾವನ್ನು ಇರಿಸಿದ್ದರು.

ಜನವರಿ 21 ರ ಸಂಜೆ ಅರಣ್ಯ ಸಿಬ್ಬಂದಿ ಕ್ಯಾಮೆರಾ ಸ್ಥಳದಲ್ಲಿರುವುದನ್ನು ಗಮನಿಸಿದ್ದರು. ಮರುದಿನ ಬೆಳಗ್ಗೆ ಪರಿಶೀಲಿಸಿದಾಗ ಕ್ಯಾಮೆರಾ ಮತ್ತು ಅದರ ಮೆಮೋರಿ ಕಾರ್ಡ್ ಕಾಣೆಯಾಗಿರುವುದು ತಿಳಿದು ಬಂದಿದೆ. ಅರಣ್ಯದಲ್ಲಿ ತಮ್ಮ ಅಕ್ರಮ ಚಟುವಟಿಕೆಗಳು ದಾಖಲಾಗುವ ಭಯದಿಂದ ಕಿಡಿಗೇಡಿಗಳು ಈ ಕ್ಯಾಮೆರಾವನ್ನೇ ಅಪಹರಿಸಿರುವ ಶಂಕೆ ವ್ಯಕ್ತವಾಗಿದೆ. ಸುತ್ತಮುತ್ತಲ ಪ್ರದೇಶದಲ್ಲಿ ವ್ಯಾಪಕ ಹುಡುಕಾಟ ನಡೆಸಿದರೂ ಕ್ಯಾಮೆರಾ ಪತ್ತೆಯಾಗಿಲ್ಲ. ಇದನ್ನೂ ಓದಿ: ವಾಕಿಂಗ್ ಮಾಡೋವಾಗ ಏಕಾಏಕಿ ನಾಯಿ ದಾಳಿ – ಮುಖ, ಕತ್ತಿಗೆ ಗಾಯ, 50ಕ್ಕೂ ಹೆಚ್ಚು ಹೊಲಿಗೆ

ಈ ಹಿನ್ನೆಲೆಯಲ್ಲಿ ಬಜಾರಕೋಣ ಉಪವಲಯ ಅರಣ್ಯಾಧಿಕಾರಿ ಸಂದೀಪ್ ಅರ್ಕಸಾಲಿ ಅವರು ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ರಾಮನಗರ ಪೊಲೀಸರು ಕಳ್ಳರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

Share This Article