ರಜಪೂತ್‌ ಕರ್ಣಿ ಸೇನಾ ಮುಖ್ಯಸ್ಥನ ಹಣೆಗೆ ಗುಂಡಿಟ್ಟು ಹತ್ಯೆ – ರೊಚ್ಚಿಗೆದ್ದ ಬೆಂಬಲಿಗರಿಂದ ರಾಜಸ್ಥಾನ ಬಂದ್‌ಗೆ ಕರೆ

Public TV
3 Min Read

ಜೈಪುರ: ರಾಜಸ್ಥಾನದ ಪ್ರಮುಖ ರಜಪೂತ ನಾಯಕ (Rajput Leader), ಹಾಗೂ ವಿವಾದಾತ್ಮಕ ಸಂಘಟನೆಯನ್ನು ಮುನ್ನಡೆಸುತ್ತಿದ್ದ ಸುಖದೇವ್ ಸಿಂಗ್ ಗೊಗಾಮೇದಿಯನ್ನು (Sukhdev Singh Gogamedi) ತಡರಾತ್ರಿ ಹತ್ಯೆ ಮಾಡಲಾಗಿದೆ. ಸುಖದೇವ್ ಮೇಲೆ ಆತನ ಜೈಪುರ ನಿವಾಸದ ಒಳಗೆ ಗುಂಡಿನ ದಾಳಿ ನಡೆಸಿ ಕೊಲ್ಲಲಾಗಿದೆ. ಘಟನೆಯಿಂದ ರೊಚ್ಚಿಗೆದ್ದ ಬೆಂಬಲಿಗರು ರಾಜಸ್ಥಾನ ಬಂದ್‌ಗೆ ಕರೆ ನೀಡಿದ್ದಾರೆ.

ಸುಖದೇವ್ ಸಿಂಗ್ ಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಬೆಂಬಲಿಗರು ರಸ್ತೆಗಿಳಿದು ಪ್ರತಿಭಟನೆ (Protest) ಶುರು ಮಾಡಿದ್ದಾರೆ. ವಾಹನಗಳ ಟಯರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಹೈರಾಣಾಗಿದ್ದಾರೆ. ಇದನ್ನೂ ಓದಿ: ಮಿಚಾಂಗ್‌ ಚಂಡಮಾರುತ ಅಬ್ಬರ, ಕಾಳಹಸ್ತಿಗೆ ಜಲದಿಗ್ಬಂಧನ – ಕರ್ನಾಟಕದಲ್ಲೂ ಮುಂದಿನ 5 ದಿನ ಮಳೆ ಸಾಧ್ಯತೆ

ಸುಖದೇವ್ ಮೇಲೆ ಆತನ ಜೈಪುರ ನಿವಾಸದ ಒಳಗೆ ಗುಂಡಿನ ದಾಳಿ ನಡೆಸಿ ಹತ್ಯೆಗೈಯಲಾಗಿದೆ. ರಾಷ್ಟ್ರೀಯ ರಜಪೂತ ಕರ್ಣಿ ಸೇನಾದ ಮುಖ್ಯಸ್ಥನಾಗಿದ್ದ ಸುಖದೇವ್ ಮೇಲೆ ಸ್ಕೂಟರ್‌ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಇದು ತನ್ನ ಕೃತ್ಯ ಎಂದು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ (Lawrence Bishnoi Gang) ಹೇಳಿಕೊಂಡಿದೆ.

ಸುಖದೇವ್ ಸಿಂಗ್ ಮತ್ತು ಆತನ ಇಬ್ಬರು ಸಹವರ್ತಿಗಳಿಗೆ ಗುಂಡೇಟಿನಿಂದ ಗಾಯಗಳಾಗಿದ್ದವು. ಮೂವರನ್ನೂ ಆಸ್ಪತ್ರೆಗೆ (Hospital_ ದಾಖಲಿಸಲಾಗಿತ್ತು. ಆದ್ರೆ ಸುಖದೇವ್ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು. ಗಾಯಾಳುಗಳಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: ವಿಭಜನೆಯ ಸಿದ್ಧಾಂತ 70 ವರ್ಷದಿಂದ ಬಂದ ಅಭ್ಯಾಸ, ಜನ ಈಗ ಎಚ್ಚೆತ್ತಿದ್ದಾರೆ: ಕಾಂಗ್ರೆಸ್ಸನ್ನು ಕುಟುಕಿದ ಮೋದಿ

ಬಾಲಿವುಡ್ ಸಿನಿಮಾ ಪದ್ಮಾವತ್ ವಿರುದ್ಧ ಪ್ರತಿಭಟನೆ ನಡೆಸಿದ್ದ ರಜಪೂತ್ ಕರ್ಣಿ ಸೇನಾಕ್ಕಿಂತ ವಿಭಿನ್ನವಾದ ಸಂಘಟನೆಯನ್ನು ಸುಖದೇವ್ ಮುನ್ನಡೆಸುತ್ತಿದ್ದ. ಲೋಕೇಂದ್ರ ಸಿಂಗ್ ಕಲ್ವಿ ನಾಯಕತ್ವದ ಕರ್ಣಿ ಸೇನಾದ ಭಾಗವಾಗಿದ್ದ ಸುಖದೇವ್, 2015ರಲ್ಲಿ ಸಂಘಟನೆಯಿಂದ ಹೊರಬಂದು ತನ್ನದೇ ಸಂಘಟನೆ ಸ್ಥಾಪಿಸಿದ್ದ.

ಸುಖದೇವ್ ಸಿಂಗ್‌ನ ಎದೆ ಮತ್ತು ತಲೆಗೆ ಗುಂಡು ಹಾರಿಸಲಾಗಿದೆ. ಸ್ಥಳದಲ್ಲಿ ಒಡೆದ ಬಾಗಿಲು ಹಾಗೂ ನೆಲದ ಮೇಲೆ ರಕ್ತ ಚೆಲ್ಲಾಡಿರುವ ದೃಶ್ಯಗಳು ವಿಡಿಯೋಗಳಲ್ಲಿ ಕಾಣಿಸಿದೆ. ಇದನ್ನೂ ಓದಿ: ಹಿಂಡೆನ್‌ಬರ್ಗ್‌ ಆರೋಪ ಅಪ್ರಸ್ತುತ – ಅಮೆರಿಕ ಹೇಳಿಕೆ ಬೆನ್ನಲ್ಲೇ ಅದಾನಿ ಕಂಪನಿಗಳ ಷೇರು ಮೌಲ್ಯ ಭಾರೀ ಏರಿಕೆ

ಸುಖದೇವ್ ಹಾಗೂ ಆತನ ಸಹವರ್ತಿಗಳ ಜತೆ ಮನೆಯ ಒಳಗೆ ಸೋಫಾ ಮೇಲೆ ಕುಳಿತು ಇಬ್ಬರು ಅಪರಿಚಿತ ದುಷ್ಕರ್ಮಿಗಳು ಮಾತನಾಡುವುದು ಹಾಗೂ ಇದ್ದಕ್ಕಿದ್ದಂತೆ ಗನ್ ಹೊರಗೆ ತೆಗೆದು ಗುಂಡು ಹಾರಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತನ್ನನ್ನು ಬಿಟ್ಟುಬಿಡುವಂತೆ ಸುಖದೇವ್‌ನ ಸಹಚರನೊಬ್ಬ ಬೇಡಿಕೊಂಡರೂ, ಆತನ ಮೇಲೆ ಗುಂಡು ಹಾರಿಸಲಾಗಿದೆ. ಮನೆಯಿಂದ ಹೊರಗೆ ಹೊರಟ್ಟಿದ್ದ ಒಬ್ಬ ಬಂದೂಕುಧಾರಿ, ಪುನಃ ಒಳಗೆ ಬಂದು ಸಮೀಪದಿಂದ ಸುಖದೇವ್ ಮೇಲೆ ಮತ್ತೊಂದು ಗುಂಡು ಹಾರಿಸಿದ್ದಾನೆ.

ಈ ಘಟನೆಯಿಂದ ಆಘಾತ ಉಂಟಾಗಿದೆ ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ. ನಾನು ಪೊಲೀಸ್ ಕಮಿಷನರ್ ಜೊತೆ ಮಾತನಾಡಿದ್ದು, ಆರೋಪಿಗಳನ್ನು ಆದಷ್ಟು ಶೀಘ್ರವೇ ಬಂಧಿಸುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ. ರಾಜಸ್ಥಾನವನ್ನು ಅಪರಾಧ ಮುಕ್ತ ರಾಜ್ಯವನ್ನಾಗಿ ಮಾಡುವುದು ಬಿಜೆಪಿ ಸರ್ಕಾರದ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.

Share This Article