ಧೋನಿ ಭವಿಷ್ಯದ ಬಗ್ಗೆ ನಿಮ್ಮ ನಿಲುವೇನು?- ಸಂದರ್ಶನದಲ್ಲಿ ಸಿಎಸಿ ಟ್ರಿಕ್ಕಿ ಪ್ರಶ್ನೆ

Public TV
3 Min Read

ಮುಂಬೈ: ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಕನ್ನಡಿಗ ಸುನಿಲ್ ಜೋಶಿ ಆಯ್ಕೆಯಾಗಿರುವ ಸಂಗತಿ ಈಗಾಗಲೇ ತಿಳಿದಿದೆ. ಆದರೆ ಸಮಿತಿಯ ಸದಸ್ಯರ ಆಯ್ಕೆ ವೇಳೆ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಕೇಳಿರುವ ಕೆಲ ಪ್ರಶ್ನೆಗಳು ಬಹಿರಂಗವಾಗಿದ್ದು, ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿಯ ಬಗ್ಗೆ ಸಂದರ್ಶನದಲ್ಲಿ ಪ್ರಶ್ನಿಸಲಾಗಿದೆ.

ಆಯ್ಕೆ ಸಮಿತಿಗೆ ಆಯ್ಕೆಯ ಅಭ್ಯರ್ಥಿಗಳಾಗಿದ್ದ ಕರ್ನಾಟಕದ ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ, ವೆಂಕಟೇಶ್ ಪ್ರಸಾದ್, ರಾಜೇಶ್ ಚೌವ್ಹಾಣ್, ಸುನಿಲ್ ಜೋಶಿ, ಹರ್ವಿಂದರ್ ಸಿಂಗ್ ಸಂದರ್ಶನದಲ್ಲಿ ಭಾಗಿಯಾಗಿದ್ದರು.

ಆಯ್ಕೆ ಸಮಿತಿಯ ಸದಸ್ಯರು ಧೋನಿ ಅವರು ಟೀಂ ಇಂಡಿಯಾ ತಂಡಕ್ಕೆ ಕಮ್‍ಬ್ಯಾಕ್ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಆದ್ದರಿಂದ ಸಂದರ್ಶನದ ಸಂದರ್ಭದಲ್ಲಿ ಧೋನಿ 2020ರ ಐಸಿಸಿ ಟಿ20 ಟೂರ್ನಿಗೆ ಆಯ್ಕೆ ಮಾಡುವ ಕುರಿತು ಪ್ರಶ್ನೆ ಮಾಡಲಾಗಿದೆ. ಇದೇ ವೇಳೆ ಅವರಿಗೆ ಬಿಸಿಸಿಐ ಆಯ್ಕೆ ಸಮಿತಿ ಸದಸ್ಯ ಅಥವಾ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರಾಗ ಬೇಕೇ ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಅಂತಿಮವಾಗಿ ಕನ್ನಡಿಗ ಸುನಿಲ್ ಜೋಶಿ ಜೊತೆಗೆ ಹರ್ವಿಂದರ್ ಸಿಂಗ್ ಅವರಿಗೆ ಆಯ್ಕೆ ಸಮಿತಿಯಲ್ಲಿ ಅವಕಾಶ ನೀಡಲಾಗಿದೆ. ಅಂದಹಾಗೇ ದೇವಾಂಗ್ ಗಾಂಧಿ, ಶರಣ್‍ದೀಪ್ ಸಿಂಗ್, ಜತಿನ್ ಪರಾಂಜಪೆ ಆಯ್ಕೆ ಸಮಿತಿಯಲ್ಲಿದ್ದಾರೆ.

ಕಳೆದ ವರ್ಷ ನಡೆದಿದ್ದ ಐಸಿಸಿ ವಿಶ್ವಕಪ್ ಸೆಮಿ ಫೈನಲ್ ಪಂದ್ಯದ ಬಳಿಕ ಧೋನಿ ಟೀಂ ಇಂಡಿಯಾ ಪರ ಆಡಿಲ್ಲ. ತಿಂಗಳುಗಳು ಕಳೆದರು ಧೋನಿ ಅವರ ನಿವೃತ್ತಿ ಅಥವಾ ಕಮ್‍ಬ್ಯಾಕ್ ಬಗ್ಗೆ ಯಾವುದೇ ಸ್ಪಷ್ಟನೆ ಲಭಿಸಿಲ್ಲ. ಇಂತಹ ಸಮಯದಲ್ಲಿ ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರ ನೇಮಕ ನಡೆದಿದೆ. ಸದಸ್ಯರ ಸಾಮರ್ಥ್ಯ, ನೇರ ನಡೆ ತಿಳಿಯುವ ಸಲುವಾಗಿ ಸಿಎಸಿ ಕೆಲ ಸಾಮಾನ್ಯ ಪ್ರಶ್ನೆಗಳೊಂದಿಗೆ ಧೋನಿ ನಿವೃತ್ತಿಯ ಕುರಿತು ಪ್ರಶ್ನೆ ಮಾಡಿತ್ತು. ಸದಸ್ಯರು ಕೂಡ ಈ ಕುರಿತು ನೇರ ಉತ್ತರಗಳನ್ನು ನೀಡಿದ್ದಾರೆ.

38 ವರ್ಷದ ರಾಂಚಿ ಕ್ರಿಕೆಟಿಗ ಧೋನಿ ಅವರನ್ನು ಬಿಸಿಸಿಐ 2019-20ರ ಒಪ್ಪಂದದಿಂದಲೂ ಕೈಬಿಟ್ಟಿತ್ತು. ಇದರ ಬೆನ್ನಲ್ಲೇ ಧೋನಿ ನಿವೃತ್ತಿಯ ಕುರಿತು ಪ್ರತಿಕ್ರಿಯೆ ನೀಡಿದ್ದ ಟೀಂ ಇಂಡಿಯಾ ಹೆಡ್‍ಕೋಚ್ ರವಿಶಾಸ್ತ್ರಿ, 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ತೋರುವ ಪ್ರದರ್ಶನ ಮತ್ತೆ ಟೀಂ ಇಂಡಿಯಾಗೆ ಧೋನಿ ಕಮ್‍ಬ್ಯಾಕ್ ಮಾಡುವ ಬಗ್ಗೆ ಸ್ಪಷ್ಟಪಡಿಸುತ್ತದೆ ಎಂದು ಹೇಳಿದ್ದರು.

ಇತ್ತ ಸುನಿಲ್ ಜೋಶಿ ಅವರ ಆಯ್ಕೆ ಕುರಿತು ಪ್ರತಿಕ್ರಿಯೆ ನೀಡಿರುವ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಸದಸ್ಯ ಮದನ್ ಲಾಲ್, ಮುಂದಿನ 1 ವರ್ಷದವರೆಗೆ ಪ್ರಸ್ತುತ ಆಯ್ಕೆ ಸಮಿತಿಯ ಕಾರ್ಯವೈಖರಿಯನ್ನು ಸಿಎಸಿ ನಿರ್ಣಯಿಸುತ್ತದೆ. ನಂತರ ಒಪ್ಪಂದವನ್ನು ವಿಸ್ತರಿಸಲು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈ ಕೆಲಸಕ್ಕಾಗಿ ನಾವು ಇಬ್ಬರು ಅತ್ಯುತ್ತಮ ವ್ಯಕ್ತಿಗಳಾದ ಸುನಿಲ್ ಜೋಶಿ ಹಾಗೂ ಹರ್ವಿಂದರ್ ಸಿಂಗ್ ಆಯ್ಕೆ ಮಾಡಿದ್ದೇವೆ. ಸುನಿಲ್ ಜೋಶಿ ಅವರ ಆಲೋಚನೆ ಬಹಳ ಸ್ಪಷ್ಟವಾಗಿದೆ. ವಿಶೇಷವಾಗಿ ಅವರು ಬಹಳ ಅನುಭವಿ ಆಟಗಾರ. ಬಾಂಗ್ಲಾದೇಶದ ಕ್ರಿಕೆಟ್ ತಂಡದೊಂದಿಗೆ ಅವರು ಕೆಲಸ ಮಾಡಿದ್ದಾರೆ ಎಂದು ಮದನ್ ಲಾಲ್ ತಿಳಿಸಿದ್ದರು.

ಮಾಜಿ ಎಡಗೈ ಸ್ಪಿನ್ನರ್ ಸುನಿಲ್ ಜೋಶಿ ಭಾರತ ಪರ 15 ಟೆಸ್ಟ್ ಹಾಗೂ 69 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ನಲ್ಲಿ 41 ವಿಕೆಟ್ ಮತ್ತು ಏಕದಿನ ಪಂದ್ಯಗಳಲ್ಲಿ 69 ವಿಕೆಟ್‍ಗಳನ್ನು ಪಡೆದಿದ್ದಾರೆ. ಜೋಶಿ ಹೈದರಾಬಾದ್ ಹಾಗೂ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ತಂಡದ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ಬಾಂಗ್ಲಾದೇಶ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಉಳಿದಂತೆ ಹರ್ವಿಂದರ್ ಸಿಂಗ್ ಭಾರತದ ಪರ 3 ಟೆಸ್ಟ್ ಮತ್ತು 16 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು ಪಂಜಾಬ್ ಮತ್ತು ರೈಲ್ವೆ ಪರ ದೇಶೀಯ ಕ್ರಿಕೆಟ್ ಆಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *