ಬೆಂಗಳೂರು: ಆಡಳಿತ ರೂಢ ಕಾಂಗ್ರೆಸ್ (Congress) ಪಕ್ಷದಲ್ಲಿ ನವೆಂಬರ್ ಕ್ರಾಂತಿಯ ವದಂತಿಯ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ (CM Siddaramaiah) ಸಚಿವರ ಜೊತೆ ಡಿನ್ನರ್ ಸಭೆ (Dinner Meeting) ನಡೆಸಿ ಸಂಪುಟ ಪುನಾರಚನೆಯ ಬಗ್ಗೆ ಮಾತನಾಡಿದ್ದಾರೆ.
ಕಾವೇರಿ ನಿವಾಸದಲ್ಲಿ ಸಚಿವರ ಜೊತೆ ಸಭೆ ನಡೆಸುವ ಮೊದಲು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಜೊತೆ 30 ನಿಮಿಷ ಪ್ರತ್ಯೇಕ ಸಭೆ ನಡೆಸಿರುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿ ತಿಳಿದು ಬಂದಿದೆ.
ಮುಂಬರುವ ಪಂಚಾಯತ್ ಮತ್ತು ಜಿಬಿಎ ಚುನಾವಣೆ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ, ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳ ನಿಷೇಧ, ಸಂಪುಟ ಪುನಾರಚನೆಯ ಬಗ್ಗೆ ಇಬ್ಬರು ನಾಯಕರು ಮಾತನಾಡಿದರು. ಇದನ್ನೂ ಓದಿ: ಡಿಕೆಶಿ ಕನಸಿನ ಟನಲ್ ರೋಡ್ ಡಿಪಿಆರ್‌ನಲ್ಲಿ ಲೋಪದೋಷ!
ಡಿಕೆಶಿಯ ಜೊತೆ ಮಾತುಕತೆಯ ಬಳಿಕ ಸಚಿವರ ಜೊತೆ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಬಿಹಾರ ಚುನಾವಣೆಗೆ ಯಾವ ರೀತಿ ನಾವು ಸಹಕಾರ ನೀಡಬೇಕು? ಮತ್ತು ಪಕ್ಷದ ಪ್ರಚಾರಕ್ಕೆ ಸಂಬಂಧಿಸಿದಂತೆ ವಿಚಾರಗಳ ಬಗ್ಗೆ ಸಿಎಂ, ಡಿಸಿಎಂ ಸಲಹೆ ನೀಡಿದರು.
ಡಿಸಿಎಂ ಡಿಕೆಶಿ ತೆರಳಿದ ನಂತರ ಉಳಿದ ಸಚಿವರ ಜೊತೆ ಸಿಎಂ ಸಭೆ ನಡೆಸಿದರು. ಈ ಸಭೆಯಲ್ಲಿ ಕೆಲವು ಸಚಿವರು ಸಂಪುಟ ಪುನಾರಚನೆ ವಿಷಯ ಪ್ರಸ್ತಾಪ ಮಾಡಿದರು. ಇದಕ್ಕೆ ಸಂಪುಟ ಪುನಾರಚನೆ ಬಗ್ಗೆ ನನಗೂ ಆಸಕ್ತಿ ಇದ್ದು ಹೈಕಮಾಂಡ್ ಜೊತೆ ಮಾತನಾಡುತ್ತೇನೆ. ಎರಡೂವರೆ ವರ್ಷಕ್ಕೆ ಸಂಪುಟ ಸರ್ಜರಿ ಆಗಬೇಕಿದೆ. ಸಚಿವರ ಮೌಲ್ಯ ಮಾಪನ ಫಲಿತಾಂಶ ಹೈಕಮಾಂಡ್ ಬಳಿ ಇದೆ. ಯಾರನ್ನು ಕೈ ಬಿಡಿ ಎಂದು ನಾನು ಹೇಳುವುದಿಲ್ಲ. ಯಾರು ಇನ್? ಯಾರು ಔಟ್ ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ದೇಶದ ಮೊದಲ ಆದಾಯ ಸಮೀಕ್ಷೆ ಫೆಬ್ರವರಿಯಲ್ಲಿ ಆರಂಭ
ಈ ವೇಳೆ ಕೆಲ ಸಚಿವರು ಸಿಎಂ ಬಳಿ ಪ್ರತ್ಯೇಕ ಮಾತುಕತೆ ನಡೆಸಲು ಬೇಡಿಕೆ ಇಟ್ಟರು. ಸಚಿವರ ಒನ್ ಟು ಒನ್ ಮಾತುಕತೆಗೆ ಸಿಎಂ ಒಪ್ಪಿಗೆ ನೀಡಿ ಸಚಿವರಿಗೆ 5 ನಿಮಿಷ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.