ಸಂಪುಟ ಪುನಾರಚನೆಗೆ ಅನುಮತಿ ಸಿಕ್ಕಿದೆ ಅಂದರೆ ನಾಯಕತ್ವ ಬದಲಾವಣೆ ಇಲ್ಲ: ಪರಮೇಶ್ವರ್‌

Public TV
1 Min Read

ಬೆಂಗಳೂರು: ಸಂಪುಟ ಪುನಾರಚನೆಗೆ (Cabinet Reshuffle) ಹೈಕಮಾಂಡ್ ಒಪ್ಪಿಗೆ ಕೊಟ್ಟಿದೆ ಅಂದ ಮೇಲೆ ನಾಯಕತ್ವ ಬದಲಾವಣೆ ಇಲ್ಲ ಅಂತ ಅರ್ಥ ಎಂದು ಗೃಹ ಸಚಿವ ಪರಮೇಶ್ವರ್ (Parameshwar) ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಂಪುಟ ಪುನರ್ ರಚನೆ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರನ್ನು ಕೇಳಿದರೆ ಗೊತ್ತಾಗುತ್ತದೆ. ಸಿಎಂ‌ ದೆಹಲಿಗೆ ಹೋಗಿದ್ದು ಗೊತ್ತು. ಹೋಗುವಾಗ ನಾನು ಹೋಗಿ ಭೇಟಿಯಾಗಿ ಬಂದಿದ್ದೆ. ಹೋಗಿದ್ದು ಗೊತ್ತು ಆದ್ರೆ ಹೈಕಮಾಂಡ್ ಬಳಿ ಏನು ವಿದ್ಯಮಾನಗಳು ನಡೆದಿದೆ? ಯಾರನ್ನ ಭೇಟಿ ಮಾಡಿದರು ಅವೆಲ್ಲ ನನಗೆ ಗೊತ್ತಿಲ್ಲ ಎಂದರು.

 

ಪುನರಾಚನೆ ಅಂದಾಗ ಸಾಮಾನ್ಯವಾಗಿ ನಾಯಕತ್ವ ಬದಲಾವಣೆ ಆಗುವುದಿಲ್ಲ. ಸಂಪುಟ ಪುನರ್ ರಚನೆಗೆ ಒಪ್ಪಿಗೆ ಆಗಿದ್ದರೆ ನಾಯಕತ್ವ ಬದಲಾವಣೆ ಇಲ್ಲ ಎಂದರ್ಥ ಎಂದು ತಿಳಿಸಿದರು. ಇದನ್ನೂ ಓದಿ:  ಸಂಪುಟ ಪುನಾರಚನೆಗೆ ಹೈಕಮಾಂಡ್‌ ಒಪ್ಪಿಗೆ – ಯಾರು ಔಟ್‌? ಯಾರು ಇನ್‌?

15 ಜನರಿಗೆ ಅವಕಾಶ ಕೊಡುವ ವಿಚಾರವನ್ನು ಸಿಎಂ ಅವರೇ ಹೇಳಬೇಕು. ಸಂಪುಟ ಪುನರ್ ರಚನೆ ಮಾಡೋದು ಅಧಿಕಾರ ಸಿಎಂ ಮತ್ತು ಹೈಕಮಾಂಡ್ ಇದೆ. ನಾನು ಕೂಡಾ ಮಾಧ್ಯಮದಲ್ಲಿ ತಿಳಿದೇ ಸಂಪುಟ ಪುನಾರಚನೆಗೆ ಅನುಮತಿ ನೀಡಿದ್ದಾರೆ ಎನ್ನುವುದು ಗೊತ್ತಾಗಿದೆ. ಅಷ್ಟು ಬಿಟ್ಟರೆ ನನಗೆ ಬೇರೇನು ಗೊತ್ತಿಲ್ಲ ಎಂದರು.

ಹೈಕಮಾಂಡ್ ಜೊತೆ ಮಾತುಕತೆ ನಡೆಯುತ್ತಿದೆ ಎಂಬ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ‌ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಂಪುಟ ಪುನರ್ ರಚನೆ ಬಹಳ ದಿನದ ಬೇಡಿಕೆ. ಬಹಳ ಜನ ಮಂತ್ರಿಗಳು ಆಗಬೇಕು ಅಂತ ಅಪೇಕ್ಷೆ ಪಡುತ್ತಿದ್ದರು ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದೆಲ್ಲವನ್ನು ಹೈಕಮಾಂಡ್ ನಾಯಕರು ನಿರ್ಧಾರ ಮಾಡುತ್ತಾರೆ. ‌ಸಮಯ, ಸಂದರ್ಭ ನೋಡಿಕೊಂಡು ತೀರ್ಮಾನ ಮಾಡುತ್ತಾರೆ ಎಂದರು.

Share This Article