ಇನ್ನೂ ಅಳಿಯಂದಿರಿಗೆ ಸ್ಥಾನ ನೀಡ್ಬೇಕು, ನಮ್ಮದೇನು ಬಹುಮತದ ಸರ್ಕಾರವೇ? – ಕತ್ತಿಗೆ ಈಶ್ವರಪ್ಪ ಟಾಂಗ್

Public TV
2 Min Read

ಬೆಂಗಳೂರು: ಅದೇ ಬೇಕು, ಇದೇ ಬೇಕು ಎನ್ನಲು ನಮ್ಮದೇನು ಬಹುಮತದ ಸರ್ಕಾರವೇ? ಇನ್ನೂ 17, 18 ಜನ ಅಳಿಯಂದಿರಿದ್ದಾರೆ. ಅವರಿಗೂ ಸೂಕ್ತ ಸ್ಥಾನಮಾನ ನೀಡುವುದು ನಮ್ಮ ಕರ್ತವ್ಯ ಎಂದು ಹೇಳುವ ಮೂಲಕ ಪರೋಕ್ಷವಾಗಿ ಅತೃಪ್ತ ಶಾಸಕರಿಗೂ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎನ್ನುವುದನ್ನು ಸಚಿವ ಈಶ್ವರಪ್ಪ ಖಚಿತಪಡಿಸಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸಚಿವ ಸ್ಥಾನ ಕೇಳಲು ನಮ್ಮ ಬಳಿ ಪೂರ್ಣ ಬಹುಮತವಿದೆಯೇ? ಇನ್ನು 17, 18 ಜನ ಅಳಿಯಂದಿರಿದ್ದಾರೆ. ಅಳಿಯಂದಿರ ಬೆಂಬಲ ಇರದಿದ್ದರೆ ಈ ಸರ್ಕಾರವೇ ಬರುತ್ತಿರಲಿಲ್ಲ. ಅವರನ್ನು ತೃಪ್ತಿಪಡಿಸಬೇಕಿರುವುದು ನಮ್ಮ ಕರ್ತವ್ಯ. ಇಂತಹ ಸಂದರ್ಭದಲ್ಲಿ ನನಗೆ ಇದೇ ಖಾತೆ ಬೇಕು, ಅದೇ ಖಾತೆ ಬೇಕು, ಸಚಿವ ಸ್ಥಾನ ಬೇಕು ಎಂದು ಕೇಳುವುದು ಸರಿಯಲ್ಲ ಎಂದು ಹೇಳಿ ಉಮೇಶ್ ಕತ್ತಿ ಅವರಿಗೆ ಟಾಂಗ್ ನೀಡಿದ್ದಾರೆ.

ಎಲ್ಲರಿಗೂ ಸಚಿವರಾಗುವ ಆಸೆ ಇರುತ್ತದೆ. ಆದರೆ, ಹಿರಿಯರ ತೀರ್ಮಾನಕ್ಕೆ ಬದ್ಧರಾಗಿರಬೇಕು. ಅನರ್ಹ ಶಾಸಕರು ನಮಗೆ ಹೊರೆಯೆನಿಸುವುದಿಲ್ಲ. ಏಕೆಂದರೆ ಅವರಿಲ್ಲದಿದ್ದರೆ ನಮ್ಮ ಸರ್ಕಾರವೇ ಇಲ್ಲ. ಪೂರ್ಣ ಬಹುಮತ ಬಂದಿದ್ದರೆ ಈ ಸಮಸ್ಯೆಗಳು ಇರುತ್ತಿರಲಿಲ್ಲ. ಪೂರ್ಣ ಬಹುಮತ ಬಾರದ್ದರಿಂದ ಎಲ್ಲ ಶಾಸಕರು ಇದನ್ನು ಅರಿತುಕೊಳ್ಳಬೇಕು. ಸುಖಾಸುಮ್ಮನೆ ಅಸಮಾಧಾನ ವ್ಯಕ್ತಪಡಿಸಬಾರದು. ಸಂದರ್ಭ ಬಂದಾಗ ಸೂಕ್ತ ಸ್ಥಾನ ಸಿಗುತ್ತದೆ. ನಾನೂ ಸಹ ಯಾವುದೇ ಖಾತೆಗೆ ಬೇಡಿಕೆ ಇಟ್ಟಿಲ್ಲ, ನನಗೆ ಖಾತೆ ಬಗ್ಗೆ ಗೊಂದಲವಿಲ್ಲ, ಯಾವುದೇ ಖಾತೆ ನೀಡಿದರೂ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಸಚಿವ ಸ್ಥಾನ ಸಿಗದ್ದಕ್ಕೆ ಉಮೇಶ್ ಕತ್ತಿ ಬೇಸರವಾಗಿರುವುದು ನಿಜ. ಈ ಕುರಿತು ನಿರಂತರವಾಗಿ ಉಮೇಶ್ ಕತ್ತಿ ಬಳಿ ಮಾತನಾಡುತ್ತಿದ್ದೇನೆ. ಫೋನ್ ಮಾಡಿ ಮಾತನಾಡಿದ್ದೇನೆ, ಖುದ್ದು ಭೇಟಿಯಾಗಿ ಮಾತನಾಡಿದ್ದೇನೆ. ಅವರು ಸಹ ಈ ಕುರಿತು ಸ್ಪಷ್ಟಪಡಿಸಿ, ಯಾವುದೇ ಅಪೇಕ್ಷೆ ಇಲ್ಲ ಸರ್ಕಾರ ಬೀಳಿಸಲ್ಲ. ಸಚಿವ ಸ್ಥಾನ ಸಿಕ್ಕರೆ ಕೆಲಸ ಮಾಡುತ್ತೇನೆ ಇಲ್ಲದಿದ್ದರೆ ಬೇಸರವಿಲ್ಲ ಎಂದು ಹೇಳಿದ್ದಾರೆ. ಹಿರಿತನದ ಆಧಾರ ಮೇಲೆ ಅವರು ಸಚಿವ ಸ್ಥಾನ ಕೇಳುವುದು ತಪ್ಪಲ್ಲ. ಆದರೆ, ಇಂದು ಸಂದರ್ಭ ಬೇರೆ ಇದೆ. ಹೀಗಾಗಿ ಸಹಕರಿಸಬೇಕು ಎಂದು ಹೇಳಿದರು.

ಚುನಾವಣೆಗೆ ನಾವು ರೆಡಿ
ಯಾವಾಗ ಚುನಾವಣೆ ಬಂದರೂ ನಾವ್ ರೆಡಿಯಾಗಿದ್ದೇವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಚುನಾವಣೆಯ ನಡೆಯುವ ಸೂಚನೆಯನ್ನು ಈಶ್ವರಪ್ಪ ನೀಡಿದ್ದು, ಎಲೆಕ್ಷನ್ ಯಾವಾಗ ಬೇಕಾದ್ರೂ ಬರಬಹುದು. ನಾನು ಮಧ್ಯಂತರ ಚುನಾವಣೆ ಬಗ್ಗೆ ಹೇಳುತ್ತಿಲ್ಲ. ಈಗ ಸಮಸ್ಯೆ ಬಹುಮತದ ಸರ್ಕಾರ ಬಾರದಿರುವುದರಿಂದ ಉದ್ಭವವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಪಕ್ಷವನ್ನು ಸಂಘಟಿಸುತ್ತೇವೆ. ಆ ಮೂಲಕ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತೇವೆ ಎಂದು ತಿಳಿಸಿದ್ದಾರೆ.

ಮೈತ್ರಿ ಸರ್ಕಾರ ಇದ್ದಾಗ ಕಾಂಗ್ರೆಸ್ ಹಾಗೂ ಜೆಡಿಎಸ್‍ನವರು ಒಳಗೊಳಗೆ ಚಾಕು ಹಾಕಿಕೊಳ್ಳುತ್ತಿದ್ದರು. ಲೋಕಸಭಾ ಚುನಾವಣೆಯಲ್ಲಿಯೂ ಇದನ್ನು ಕಂಡಿದ್ದೇವೆ. ಇದರಲ್ಲಿ ಏನೂ ಆಶ್ಚರ್ಯವಿಲ್ಲ. ಹಿಂದೆ ತೆರೆ ಮರೆಯಲ್ಲಿ ಬಡಿದಾಡುತ್ತಿದ್ದರು. ಈಗ ಬಹಿರಂಗವಾಗಿಯೇ ಬಡಿದಾಡುತ್ತಿದ್ದಾರೆ. ಯಾವ ವಿಚಾರದಲ್ಲಿ ಇಬ್ಬರೂ ಒಂದಾಗುತ್ತಾರೆ? ಜಾತಿ, ವೈಚಾರಿಕವಾಗಿ ಒಂದಾಗಿರುತ್ತಾರಾ? ಇವರಿಗೆ ಅಧಿಕಾರ ಮಾತ್ರ ಬೇಕು. ಸಿದ್ದರಾಮಯ್ಯನವರಿಗೂ ಅಧಿಕಾರ ಬೇಕು, ದೇವೇಗೌಡರ ಮಕ್ಕಳಿಗೂ ಅಧಿಕಾರ ಬೇಕು. ಇದು ದೇಶದಲ್ಲೇ ನಡಿಯುವುದಿಲ್ಲ. ವೈಚಾರಿಕವಾಗಿ ಸೈದ್ಧಾಂತಿಕವಾಗಿ ಸರ್ಕಾರಗಳು ಬರಬೇಕು. ಇಲ್ಲವೇ ಜನರ ಅಭಿವೃದ್ಧಿಗಾಗಿ ಸರ್ಕಾರ ಬರಬೇಕು. ಎರಡೂ ಇಲ್ಲದೆ ಸುಮ್ಮನೇ ಬಡಿದಾಡುವುದರಲ್ಲಿ ಅರ್ಥವಿಲ್ಲ. ಹೀಗಾಗಿ ಇವರಿಬ್ಬರ ಬಡಿದಾಟಕ್ಕೆ ಕೊನೆ ಇಲ್ಲ, ಇಬ್ಬರೂ ಬಡಿದಾಡಿಕೊಂಡು ಕೊನೆಗೆ ಬಿಜೆಪಿ ಮೇಲೆ ಹಾಕುತ್ತಾರೆ ಎಂದು ಮೈತ್ರಿ ನಾಯಕರ ವಿರುದ್ಧ ಈಶ್ವರಪ್ಪ ಹರಿಹಾಯ್ದರು.

Share This Article
Leave a Comment

Leave a Reply

Your email address will not be published. Required fields are marked *