ಕಲಬುರಗಿಯಲ್ಲಿ ದಶಕದ ಬಳಿಕ ಸಚಿವ ಸಂಪುಟ ಸಭೆ – ಮಿನಿವಿಧಾನಸೌಧದಲ್ಲಿ ಸರ್ಕಾರದಿಂದ ಭರ್ಜರಿ ಸಿದ್ಧತೆ!

Public TV
2 Min Read

– 2ನೇ ಬಾರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಶೇಷ ಸಚಿವ ಸಂಪುಟ ಸಭೆ

ಕಲಬುರಗಿ: ದಶಕದ ಬಳಿಕ ಕಲ್ಯಾಣ ಕರ್ನಾಟಕ ವಿಭಾಗೀಯ ಕೇಂದ್ರ ಸ್ಥಾನ ಕಲಬುರಗಿಯಲ್ಲಿ (Kalaburagi) ಸಚಿವ ಸಂಪುಟ ಸಭೆ ನಡೆಯಲು ಕ್ಷಣಗಣನೆ ಶುರುವಾಗಿದೆ.

ಸೆ.17ರಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅಧ್ಯಕ್ಷತೆಯಲ್ಲಿ ಸಂಪುಟ ಸಭೆ ನಡೆಯುವ ಹಿನ್ನೆಲೆಯಲ್ಲಿ ಸಭೆ ನಡೆಯುವ ಸ್ಥಳ ಮಿನಿವಿಧಾನಸೌಧ (Mini Vidhana Soudha) ಕಟ್ಟಡದಲ್ಲಿ ಭರಪೂರ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ನಡೆಯಲಿರುವ ಸಚಿವ ಸಂಪುಟ ಸಭೆಯಿಂದಾಗಿ ಈ ಭಾಗದ ಜನರ ಆಸೆಗಳು ಗರಿಗೆದರಿವೆ.ಇದನ್ನೂ ಓದಿ: ದಿನ ಭವಿಷ್ಯ 16-09-2024

ಕಳೆದ ಒಂದು ದಶಕದ ಹಿಂದೆ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆದಿತ್ತು. ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯ ಹಿನ್ನೆಲೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಕಟ್ಟಡಕ್ಕೆ ಬಣ್ಣ ಹಚ್ಚುವುದರ ಜೊತೆಗೆ ಗ್ರಿಲ್, ಗೇಟ್‌ಗಳಿಗೆ ಪೇಂಟ್ ಮಾಡಲಾಗುತ್ತಿದೆ. ಆವರಣದಲ್ಲಿ ಡಾಂಬರೀಕರಣ ಸಹ ಮಾಡಲಾಗುತ್ತಿದೆ. ಇನ್ನೂ ಸಭೆ ನಡೆಯುವ ಸ್ಥಳ, ಪ್ರಾದೇಶಿಕ ಆಯುಕ್ತರ ಸಭಾಂಗಣಕ್ಕೆ ಹೈಟೆಕ್ ಟಚ್ ನೀಡಲಾಗುತ್ತಿದೆ. ಟೇಬಲ್, ಮೈಕ್, ಎಸಿ ಸೇರಿದಂತೆ ಪ್ರತಿಯೊಂದು ವಸ್ತುಗಳನ್ನು ಹೊಸದಾಗಿ ನವೀಕರಣ ಮಾಡಲಾಗುತ್ತಿದೆ. ಇನ್ನು ದಶಕದ ಬಳಿಕ ಕ್ಯಾಬಿನೆಟ್ ಸಭೆ ಹಿನ್ನೆಲೆ ಆಡಳಿತ ಪಕ್ಷದ ಶಾಸಕರು ಕ್ಷೇತ್ರದ ಅಭಿವೃದ್ಧಿ ಪಟ್ಟಿಯನ್ನು ಸಿದ್ದಪಡಿಸಿ ಸರ್ಕಾರಕ್ಕೆ ನೀಡಿದ್ದಾರೆ.

ಕಲಬುರಗಿಯಲ್ಲಿ ಮೊದಲ ಬಾರಿಗೆ 1982ರಲ್ಲಿ ಆರ್.ಗುಂಡೂರಾವ್ ಸಿಎಂ ಆಗಿದ್ದ ವೇಳೆ ಸಚಿವ ಸಂಪುಟ ಸಭೆ ನಡೆದಿತ್ತು. ಆ ಬಳಿಕ 2008ರಲ್ಲಿ ಬಿ.ಎಸ್ ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಸಚಿವ ಸಂಪುಟ ಸಭೆ ನಡೆದಿತ್ತು. ಇನ್ನೂ 2014ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಕಲಬುರಗಿಯಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆದಿತ್ತು, ಇದೀಗ 2024 ರಲ್ಲಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಎರಡನೇ ಬಾರಿ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ. ಇನ್ನೂ ದಶಕದ ಬಳಿಕ ಸಚಿವ ಸಂಪುಟ ಸಭೆ ನಡೆಯುತ್ತಿರುವ ಹಿನ್ನಲೆಯಲ್ಲಿ ಈ ಭಾಗದ ಜನರ ಬೇಡಿಕೆಗಳು ಈಡೇರುವ ನಿರೀಕ್ಷೆ ದುಪ್ಪಟ್ಟಾಗಿವೆ.

371(ಜೆ) ಅಡಿಯಲ್ಲಿ ಖಾಲಿಯಿರುವ ಎಲ್ಲಾ ಹುದ್ದೆಗಳು ಭರ್ತಿಯಾಗಬೇಕು. ವಿಶೇಷ ಸ್ಥಾನಮಾನ ಅಡಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಿಗಬೇಕಿರುವ ಸೌಲಭ್ಯಗಳು ಸಿಗಬೇಕು. ಕೈಗಾರಿಕೆಗಳ ಸ್ಥಾಪನೆ, ರೋಗಗ್ರಸ್ಥವಾಗಿರುವ ತೊಗರಿ ಅಭಿವೃದ್ಧಿ ಮಂಡಳಿಗೆ ಬಲ ತುಂಬಬೇಕೆಂಬ ಬೇಡಿಕೆ ಹೆಚ್ಚಾಗಿದೆ. ಇನ್ನೂ ಜಿಲ್ಲೆಯಲ್ಲಿ ಪ್ರತಿವರ್ಷ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಶಾಶ್ವತ ಕುಡಿಯುವ ನೀರಿಗಾಗಿ ಆಲಮಟ್ಟಿಯಿಂದ ಕಲಬುರಗಿಗೆ ಪೈಪ್‌ಲೈನ್ ಮಾಡುವುದರ ಜೊತೆಗೆ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಹೆಚ್ಚಿನ ನೀರು ಸಂಗ್ರಹವಾಗಲೂ ಜಲಾಶಯಗಳನ್ನು ನಿರ್ಮಿಸಲು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.ಇದನ್ನೂ ಓದಿ: ರಾಜ್ಯದ ಹವಾಮಾನ ವರದಿ: 16-09-2024

ಅದೆಲ್ಲಾ ಒಂದೆಡೆಯಾದರೆ, ದಶಕದ ಬಳಿಕ ಕಲ್ಯಾಣ ಕರ್ನಾಟಕ ವಿಭಾಗೀಯ ಕೇಂದ್ರ ಸ್ಥಾನ ಕಲಬುರಗಿಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಯುತ್ತಿರುವುದು ಈ ಭಾಗದ ಜನರ ಖುಷಿ ದುಪ್ಪಟ್ಟಾಗುವಂತೆ ಮಾಡಿದೆ. ಒಟ್ಟಿನಲ್ಲಿ ಹಿಂದುಳಿದ ಭಾಗದಲ್ಲಿ ಐತಿಹಾಸಿಕ ಸಭೆ ಕೇವಲ ನಾಮಕಾವಸ್ಥೆ ಆಗದೇ ಈ ಭಾಗದ ಸಮಗ್ರ ಅಭಿವೃದ್ಧಿಗೆ ಪೂರಕವಾಗಬೇಕು ಎನ್ನುವುದು ಜನರ ಆಶಯವಾಗಿದೆ.

Share This Article