ಬೆಂಗಳೂರು: ರಾಜ್ಯ ಸರ್ಕಾರದ 14ನೇ ಸಚಿವ ಸಂಪುಟ ಸಭೆ (Cabinet Meeting) ಇಂದು ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ನಡೆಯಲಿದೆ. ನಂದಿಬೆಟ್ಟದಲ್ಲಿ (Nandi Hills) ಸಚಿವ ಸಂಪುಟ ಸಭೆಗಾಗಿ ಅಂತಿಮ ಹಂತದ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.
ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂಸಿ ಸುಧಾಕರ್ ಅಧಿಕಾರಿಗಳೊಂದಿಗೆ ಮಂಗಳವಾರ ಸಿದ್ಧತೆ ಪರಿಶೀಲನೆ ನಡೆಸಿದ್ದಾರೆ. ನಂದಿಗಿರಿಧಾಮ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸೇರಿದಂತೆ ಸಂಪುಟ ಸಹೋದ್ಯೋಗಿಗಳು ಬೆಳಗ್ಗೆ 11:40ಕ್ಕೆ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗ್ರಾಮಕ್ಕೆ ಆಗಮಿಸಿಲಿದ್ದಾರೆ. ಗ್ರಾಮದ ಶ್ರೀ ಭೋಗನಂದೀಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಲಿದ್ದು, ದೇವರ ದರ್ಶನ ಪಡೆದ ನಂತರ ದೇವಾಲಯದ ವಸಂತ ಮಂಟಪ, ಪುಷ್ಕರಿಣಿಯಲ್ಲಿ ಸಚಿವ ಸಂಪುಟದ ಸಹೋದ್ಯೋಗಿಗಳ ಜೊತೆ ಫೋಟೋಶೂಟ್‌ನಲ್ಲಿ ಭಾಗಿಯಾಗಲಿದ್ದಾರೆ. ನಂತರ 11:50ಕ್ಕೆ ನಂದಿಬೆಟ್ಟಕ್ಕೆ ಬಸ್‌ನಲ್ಲಿ ಪ್ರಯಾಣ ಮಾಡಲಿದ್ದಾರೆ. ಇದನ್ನೂ ಓದಿ: ಚಾಮುಂಡಿ ತಾಯಿಗೆ ಶಿವಣ್ಣ ದಂಪತಿ ಪೂಜೆ
ಇನ್ನೂ ವಿಶೇಷ ಸಚಿವ ಸಂಪುಟ ಸಭೆ ಹಿನ್ನೆಲೆ ನಂದಿ ಗಿರಿಧಾಮದಲ್ಲಿರುವ ಕೆಎಸ್‌ಟಿಡಿಸಿ ಹೋಟೆಲ್‌ನ ಮಯೂರ ಸಭಾಂಗಣಕ್ಕೆ ಹೊಸ ಲುಕ್ ನೀಡಲಾಗಿದೆ. ಸಭಾಂಗಣವನ್ನು ನವೀಕರಿಸಿ ಸುಣ್ಣಬಣ್ಣ ಬಳಿದು ಹೊಸ ಹೊಸ ಚೇರ್ ಟೇಬಲ್‌ಗಳನ್ನು ಅಳವಡಿಸಲಾಗಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಸಾಮಾನ್ಯ ಹಾಲನ್ನು ಹವಾನಿಯಂತ್ರಿತ ಸಭಾಂಗಣವನ್ನಾಗಿ ಪರಿವರ್ತಿಸಲಾಗಿದೆ. ಸಚಿವರ ವಾಸ್ತವ್ಯ ಹಾಗೂ ವಿಶ್ರಾಂತಿಗೆ ರೂಂಗಳನ್ನು 7 ಸ್ಟಾರ್ ರೂಂಗಳಾಗಿ ಆಧುನೀಕರಣಗೊಳಿಸಲಾಗಿದೆ. ಮತ್ತೊಂದೆಡೆ ಪೊಲೀಸರು ಭೋಗನಂದೀಶ್ವರ ದೇವಸ್ಥಾನ, ನಂದಿಗಿರಿಧಾಮದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ. ಇದನ್ನೂ ಓದಿ: ರೈಲ್ವೆ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು: ಸಿಎಂ ಆಗ್ರಹ
ಇನ್ನು ನಂದಿಬೆಟ್ಟದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಸೇರಿದಂತೆ ಬಯಲು ಸೀಮೆಯ ಜಿಲ್ಲೆಗಳಿಗೆ ಭರಪೂರ ಕೊಡುಗೆ ಘೋಷಣೆ ಮಾಡುವ ನೀರೀಕ್ಷೆಯಿದ್ದು, ಜನಪ್ರತಿನಿಧಿಗಳು, ಜನರ ಚಿತ್ತ ಸಂಪುಟ ಸಭೆಯತ್ತ ನೆಟ್ಟಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಮಾಸ್ ಲೀಡರ್ – ಬಿಆರ್ ಪಾಟೀಲ್ ಸ್ಪಷ್ಟನೆ