ಸಿದ್ದು ವಿದೇಶ ಪ್ರವಾಸ ನಂತರ ಸಂಪುಟ ವಿಸ್ತರಣೆ

Public TV
2 Min Read

ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ನೂರು ದಿನ ಹಾಗೂ ಸಿದ್ದರಾಮಯ್ಯ ವಿರುದ್ಧ ರಾಹುಲ್ ಗಾಂಧಿಗೆ ಸಿಎಂ ಕುಮಾರಸ್ವಾಮಿ ದೂರು ನೀಡಿದ್ದಾರೆ ಅಂತ ಕೇಳಿ ಬಂದ ಕಾರಣ ಇವತ್ತಿನ ಸಮನ್ವಯ ಸಮಿತಿ ಸಭೆ ಭಾರೀ ಕುತೂಹಲ ಮೂಡಿಸಿತ್ತು. ಆದರೆ ಇಂದಿನ ಸಭೆಯಲ್ಲಿ ಮುಖಾಮುಖಿಯಾದ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಇಬ್ಬರೂ ಏನೂ ಆಗಿಲ್ಲ ಎನ್ನುವ ರೀತಿ ಪರಸ್ಪರ ಹಸ್ತಲಾಘವ ಮಾಡಿ ಒಗ್ಗಟ್ಟು ಪ್ರದರ್ಶಿಸಿದರು.

ಸಿಎಂ ಕುಮಾರಸ್ವಾಮಿ ಬೆನ್ನು ತಟ್ಟಿದ ಸಿದ್ದರಾಮಯ್ಯ ಅವರು ನಗುಮೊಗದಿಂದಲೇ ಸಭೆಗೆ ಬರಮಾಡಿಕೊಂಡರು. ಸುಮಾರು ಒಂದೂವರೆ ಗಂಟೆ ಕಾಲ ನಡೆದ ಸಭೆಯಲ್ಲಿ ಹಲವು ವಿಚಾರಗಳನ್ನು ಚರ್ಚೆ ಮಾಡಿದರು. ಸಭೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡದೆ ತೆರಳಿದ ಸಿಎಂ ಕುಮಾರಸ್ವಾಮಿ, ಸಭೆ ಬಗ್ಗೆ ಸಮಿತಿಯ ಅಧ್ಯಕ್ಷರು ಮಾಹಿತಿ ನೀಡುತ್ತಾರೆ ಎಂದು ತಿಳಿಸಿದರು.

ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಿದ್ದರಾಮಯ್ಯ ಅವರು, ಸೆಪ್ಟೆಂಬರ್ 3ನೇ ವಾರದಲ್ಲಿ ಸಂಪುಟ ವಿಸ್ತರಣೆ ಜೊತೆಗೆ ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೂ ನೇಮಕಾತಿ ಮಾಡಲಾಗುತ್ತದೆ. ಸಮ್ಮಿಶ್ರ ಸರ್ಕಾರದಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ನಾವು ಜಾರಿಗೆ ತರುತ್ತೇವೆ. ಈ ಸರ್ಕಾರ ಐದು ವರ್ಷ ಅಧಿಕಾರ ಪೂರೈಸಲಿದ್ದು, ಈ ಹಿಂದಿನ ಸರ್ಕಾರ ಘೋಷಣೆ ಮಾಡಿದ್ದ ಎಲ್ಲಾ ಯೋಜನೆಗಳು ಮುಂದುವರಿಯಲಿದೆ ಎಂದು ತಿಳಿಸಿದರು.

ಇದೇ ವೇಳೆ ಸ್ಥಳೀಯ ಸಂಸ್ಥೆ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈ ಚುನಾವಣೆಯಲ್ಲಿ ಕೆಲವು ಕಡೆ ಸ್ನೇಹಪೂರ್ವಕವಾಗಿ ಸ್ಪರ್ಧೆ ಮಾಡಿದ್ದೇವೆ. ಅತಂತ್ರ ಇರುವ ಸ್ಥಳಗಳಲ್ಲಿ ಎರಡು ಪಕ್ಷಗಳು ಸೇರಿ ಅಧಿಕಾರ ಹೊಂದಾಣಿಕೆ ಮಾಡಿಕೊಳ್ಳಲಿದೆ. ಅಲ್ಲದೇ ಸಭೆಯಲ್ಲಿ ವಿಧಾನಪರಿಷತ್‍ಗೆ ಮೂವರನ್ನು ಆಯ್ಕೆ ಮಾಡಲು ಚರ್ಚೆ ನಡೆಸಲಾಗಿದ್ದು, ಸ್ಥಳೀಯ ಸಂಸ್ಥೆ ಚುನಾವಣೆ ಮುಕ್ತಾಯವಾದ ಬಳಿಕ ಆಯ್ಕೆ ನಡೆಯಲಿದೆ ಎಂದು ತಿಳಿಸಿದರು.

ಇಂದಿನ ಸಮನ್ವಯ ಸಮಿತಿ ಸಭೆಯಲ್ಲಿ ಡಿಸಿಎಂ ಪರಮೇಶ್ವರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ ಭಾಗವಹಿಸಿದ್ದರು. ಎರಡು ಪಕ್ಷಗಳ ಅಧ್ಯಕ್ಷರು ಸಭೆಯಲ್ಲಿ ಭಾಗವಹಿಸುವ ಕುರಿತು ಯಾವುದೇ ಚರ್ಚೆ ನಡೆಸಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *