ಬೆಂಗಳೂರು: ಗ್ಯಾರಂಟಿ ಮೂಲಕ ಹೆಣ್ಣುಮಕ್ಕಳ ಮನಸು ಗೆದ್ದಿದ್ದ ಕಾಂಗ್ರೆಸ್ ಸರ್ಕಾರ (Congress Government) ಹೆಣ್ಣುಮಕ್ಕಳಿಗೆ ಮತ್ತೊಂದು ಗಿಫ್ಟ್ ಕೊಟ್ಟಿದೆ. ಋತುಚಕ್ರದ ಸಮಯದಲ್ಲಿ ಒಂದು ದಿನ ರಜೆ (Menstrual Leave) ಕೊಡುವ ಮಹತ್ವದ ತೀರ್ಮಾನಕ್ಕೆ ಇಂದಿನ ಕ್ಯಾಬಿನೆಟ್ ಒಪ್ಪಿದೆ.
ಕಾರ್ಮಿಕ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಋತು ಚಕ್ರ ರಜೆ ನೀತಿ 2025 (Menstrual Leave Policy, 2025)ಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ರಾಜ್ಯ ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್, MNC, ಐಟಿ ಮತ್ತು ಇತರೆ ಖಾಸಗಿ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಸಂಬಳ ಸಹಿತ ಋತು ಚಕ್ರ ರಜೆ ನೀಡಲಾಗುತ್ತದೆ. ವರ್ಷಕ್ಕೆ 12 ದಿನ ರಜೆ ನೀಡುವುದಾಗಿದ್ದು, ಯಾವ ದಿನ ರಜೆ ಪಡೆಬೇಕು ಅಂತ ಹೆಣ್ಣುಮಕ್ಕಳು ತೀರ್ಮಾನ ಮಾಡಲಿದ್ದಾರೆ. ಇದನ್ನೂ ಓದಿ: ಸಂಪುಟ ಪುನರ್ಚನೆ ವದಂತಿ ಬೆನ್ನಲ್ಲೇ ಮೂವರು ಸಚಿವರಿಂದ ಬ್ರೇಕ್ಫಾಸ್ಟ್ ಮೀಟಿಂಗ್
ಕ್ಯಾಬಿನೆಟ್ ಸಭೆಯ ಬಳಿಕ ಮಾತನಾಡಿದ ಸಚಿವ ಸಂತೋಷ ಲಾಡ್, ಹೆಣ್ಣು ಮಕ್ಕಳಿಗೆ ಋತು ಚಕ್ರ ರಜೆ ನೀಡಲು ಕ್ಯಾಬಿನೆಟ್ ನಲ್ಲಿ ಒಪ್ಪಿಗೆ ಆಗಿದೆ. ವರ್ಷದಲ್ಲಿ 12 ದಿನ ರಜೆ ಸಂಬಳ ಸಹಿತ ಕೊಡಲಾಗುತ್ತದೆ. ತಿಂಗಳಲ್ಲಿ ಋತುಚಕ್ರವಾದಾಗ ಯಾವ ದಿನ ಬೇಕಾದರೂ ಒಂದು ದಿನ ರಜೆ ತೆಗೆದುಕೊಳ್ಳಬಹುದು. ಕಾನೂನು ಇಲಾಖೆ ಜೊತೆ ಚರ್ಚೆ ಸೇರಿ ಅನೇಕ ಚರ್ಚೆಗಳು ಆಗಿದೆ. ಯಾವತ್ತು ರಜೆ ಬೇಕು ಅಂತ ಹೆಣ್ಣುಮಕ್ಕಳು ತೀರ್ಮಾನ ಮಾಡಿಕೊಳ್ಳಬೇಕು. ಹೆಣ್ಣು ಮಕ್ಕಳ ಪರ ಸರ್ಕಾರ ಈ ಮಹತ್ವದ ನಿರ್ಧಾರ ಮಾಡಿದೆ. ಕ್ಯಾಬಿನೆಟ್ ನಲ್ಲಿ ಒಪ್ಪಿಗೆಯಾಗಿದ್ದು, ಆದಷ್ಟೂ ಬೇಗ ಬಿಲ್ ತಂದು ದೊಡ್ಡ ಕಾರ್ಯಕ್ರಮ ಮಾಡಿ ಅನುಷ್ಠಾನ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಒಂದು ಬಾರಿ ನೋಟಿಸ್ ಕೊಟ್ಟ ಮೇಲೆ ಅದು ಸರಿ ಆಗೋವರೆಗೂ ಬೀಗ ತೆಗೆಯೋದು ಸರಿಯಲ್ಲ: ರಾಮಲಿಂಗಾರೆಡ್ಡಿ