ಪ್ರಿಯಾಂಕ್ ಖರ್ಗೆ ತಪ್ಪು ಕಲ್ಪನೆ ದೂರ ಮಾಡಲು ನಾವು ಸಿದ್ಧ: ಸಿ.ಟಿ.ರವಿ

Public TV
2 Min Read

ಬೆಂಗಳೂರು: ಆರ್‌ಎಸ್‌ಎಸ್ ದೇಶಭಕ್ತಿಯ ಸಂಸ್ಕಾರವನ್ನು ಕೊಡುತ್ತದೆ. ಆರ್‌ಎಸ್‌ಎಸ್, ಹಿಂದೂಗಳನ್ನು ಸಂಘಟಿಸುವ ಕೆಲಸ ಮಾಡುತ್ತದೆ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವಕನೇ ಪ್ರಧಾನಮಂತ್ರಿ, ಸಂಘದ ಸೇವಕನೇ ಕೇಂದ್ರದ ಗೃಹ ಮಂತ್ರಿ, ಸಂಘದ ಸೇವಕನೇ ರಕ್ಷಣಾ ಸಚಿವ, ಸಂಘದ ಸೇವಕನೇ ಉಪರಾಷ್ಟ್ರಪತಿ ಇವೆಲ್ಲವೂ ಆಗಿರಬೇಕಾದರೆ ಪ್ರಿಯಾಂಕ್‌ ಖರ್ಗೆ ಅವರ ತಪ್ಪು ಕಲ್ಪನೆಯನ್ನು ದೂರ ಮಾಡುವುದಕ್ಕೆ ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ತಾಕತ್ತಿದ್ದರೆ RSS ನಿಷೇಧ ಮಾಡಿ ಚುನಾವಣೆಗೆ ಬನ್ನಿ: ಪ್ರಿಯಾಂಕ್‌ ಖರ್ಗೆಗೆ ಸುನಿಲ್‌ ಕುಮಾರ್‌ ಸವಾಲ್

ಅವರ ಪೂರ್ವಾಗ್ರಹದ ದ್ವೇಷವಾದರೆ ಅದಕ್ಕೆ ಕಾಲ ತಕ್ಕ ಉತ್ತರ ಕೊಡುತ್ತದೆ. ಸಂಘದ ವಿರೋಧ ಅದು ರಾಷ್ಟ್ರದ ವಿರೋಧವೇ ಆಗುತ್ತದೆ. ಯಾಕೆಂದರೆ ಸಂಘ ರಾಷ್ಟ್ರೀಯ ಹಿತದಲ್ಲಿ ಕೆಲಸ ಮಾಡುತ್ತಿರುವ ಒಂದು ಸಂಘಟನೆ. ರಾಷ್ಟ್ರದ್ರೋಹಿಗಳು ಮತ್ತು ಸಂಘವನ್ನು ಅರ್ಥ ಮಾಡಿಕೊಳ್ಳದವರು ಮಾತ್ರ ಅದನ್ನು ವಿರೋಧಿಸುತ್ತಾರೆ ಎಂದು ಹೇಳಿದರು.

ಹಿಂದೂ ಎಂಬುದಕ್ಕೂ ಸುಪ್ರೀಂ ಕೋರ್ಟ್ ಹೇಳಿರುವ ವ್ಯಾಖ್ಯಾನವನ್ನೇ ಆಧಾರವಾಗಿ ಸಂಘ ಬಳಕೆ ಮಾಡಿಕೊಳ್ಳುತ್ತದೆ. ಸ್ವದೇಶಿ ವಿಚಾರವನ್ನು ಮುಂದಿಟ್ಟಿದೆ. ಅಂದರೆ ಸ್ವಭಾಷೆ, ಸ್ವಭೂಷ, ಸ್ವಭೋಜನ ಮತ್ತು ಪರಿಸರ ಸಂರಕ್ಷಣೆ ಈ ವಿಚಾರವನ್ನು ದೇಶದ ಜನರ ಮುಂದೆ ಇಟ್ಟಿದೆ. ಇದರಲ್ಲಿ ಯಾವುದು ಇವರಿಗೆ ಅಪಥ್ಯವಾಗಿ ಕಾಣುತ್ತಿದೆ. ಅಂದರೆ ಮಾತೃ ಭಾಷೆಯಲ್ಲಿ ವ್ಯವಹರಿಸಿ ಎಂಬುದು ಅಪಥ್ಯವೇ? ಸ್ವದೇಶಿಗೆ ಒತ್ತು ನೀಡಬೇಕು ಎಂಬುದು ಅಪಥ್ಯವೇ ಎಂದು ಪ್ರಶ್ನಿಸಿದರು.

ಪ್ರತೀ ಗ್ರಾಮದಲ್ಲೂ ದೇವಾಲಯ ಸರ್ವರಿಗೂ ಮುಕ್ತವಾಗಬೇಕು. ಹಿಂದೂ ಸಮಾಜಕ್ಕೆ ಒಂದೇ ಸ್ಮಶಾನ ಇರಬೇಕು ಎಂದು ಆರ್‌ಎಸ್‌ಎಸ್ ಹೇಳಿದೆ. ಮತೀಯ ಓಲೈಕೆ ಮಾಡಿ ತನ್ನ ಬೇಳೆ ಬೇಯಿಸಿಕೊಳ್ಳುವ ಸ್ವಾರ್ಥಿಗಳಿಗೆ ಸಂಘ ಅರ್ಥವಾಗುವುದಕ್ಕೆ ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಅಪ್ಪನಿಂದಲೇ RSS ಬ್ಯಾನ್ ಮಾಡಲು ಆಗ್ಲಿಲ್ಲ, ಇವರಿಂದ ಆಗುತ್ತಾ?: ಯತ್ನಾಳ್ ಟಾಂಗ್

ಸಭ್ಯತೆಯ ಪಾಠ ಮರೆತ ಡಿ.ಕೆ.ಶಿವಕುಮಾರ್ ಎಷ್ಟೇ ಸ್ನೇಹವಿದ್ದರೂ ಸಾರ್ವಜನಿಕವಾಗಿ ಸಭ್ಯವಾಗಿ ನೆಡೆದುಕೊಳ್ಳಬೇಕು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಾರ್ವಜನಿಕವಾಗಿ ಶಾಸಕ ಮುನಿರತ್ನ ಅವರನ್ನು ಸಭ್ಯತೆಯಿಂದ ನಡೆಸಿಕೊಂಡಿಲ್ಲ. ಯಾಕೆಂದರೆ ಒಬ್ಬ ಶಾಸಕರಾದ ಮುನಿರತ್ನ ಅವರನ್ನು ಕರೆದಿರುವ ರೀತಿ ಸರಿಯಲ್ಲ. ಅವರು ಸಾರ್ವಜನಿಕ ಸಭ್ಯತೆಯ ಪಾಠವನ್ನು ಮರೆತಿದ್ದಾರೆ ಎಂದು ಟೀಕಿಸಿದರು.

ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರದ ಪ್ರಾಯೋಜಿತ ಯಾವುದೇ ಕಾರ್ಯಕ್ರಮವಾಗಲಿ ಶಿಷ್ಟಾಚಾರ ಪಾಲಿಸಲೇಬೇಕು. ಅದು ಸಂವಿಧಾನ ಶಾಸಕರಿಗೆ ನೀಡಿರುವ ಅಧಿಕಾರ. ಪಕ್ಷದ ಕಾರ್ಯಕ್ರಮವಾದರೆ ನಮ್ಮ ಆಕ್ಷೇಪಣೆ ಇಲ್ಲ. ಪಕ್ಷದ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಭಾಗವಹಿಸುವುದಿಲ್ಲ. ಈಗ ಅವರು ಸ್ಪಷ್ಟಪಡಿಸಲಿ. ಅದು ಸರ್ಕಾರದ ಕಾರ್ಯಕ್ರಮವೇ? ಅಥವಾ ಪಕ್ಷದ ಕಾರ್ಯಕ್ರಮವೇ ಎಂದು ಕೇಳಿದರು.

ಸರ್ಕಾರಿ ಕಾರ್ಯಕ್ರಮಕ್ಕೆ ಆದರೆ ಮುನಿರತ್ನ ಅವರ ಹಕ್ಕು ಹಾಗೂ ಶಾಸಕರ ಹಕ್ಕು. ಸರ್ಕಾರದ ಕಾರ್ಯಕ್ರಮದಲ್ಲಿ ಅವರನ್ನ ಆಮಂತ್ರಿಸಿಲ್ಲವೆಂದರೆ ಅದು ಅಪರಾಧ ಮತ್ತು ಹಕ್ಕುಚ್ಯುತಿ ಆಗುತ್ತದೆ. ಯಾರು ಪ್ರಜಾಪ್ರಭುತ್ವದ ಮೌಲ್ಯವನ್ನು ಅಳವಡಿಸಿಕೊಂಡಿದ್ದಾರೋ ಅವರಿಗೆ ಜನಪ್ರತಿನಿಧಿಯ ಭಾವನೆಗಳು ಅರ್ಥವಾಗುತ್ತದೆ ಎಂದು ತಿಳಿಸಿದರು.

ಕಾಂಗ್ರೆಸ್ ಪ್ರಜಾಪ್ರಭುತ್ವದಲ್ಲಿ ತಾನು ಸರ್ವಾಧಿಕಾರಿ ಎಂದು ಭಾವಿಸಿದೆ. ಆ ಕಾರಣದಿಂದಾಗಿ ಉಪಮುಖ್ಯಮಂತ್ರಿಗಳು ಶಾಸಕರ ಹಕ್ಕಿಗೆ ಕತ್ತರಿ ಹಾಕುವ ಕುಮ್ಮಕ್ಕಿಗೆ ಅವಕಾಶ ಕೊಟ್ಟಿದ್ದು ತಪ್ಪು. ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿರುವುದು ಸರ್ಕಾರಕ್ಕೆ ಕಪ್ಪುಚುಕ್ಕಿ. ಶಿಷ್ಟಾಚಾರ ಉಲ್ಲಂಘಿಸಿದವರ ಮೇಲೆ ಕ್ರಮವಾಗಬೇಕು ಎಂದು ಆಗ್ರಹಿಸಿದರು.

Share This Article