ರಾಮನಗರ ಜಿಲ್ಲಾ ರಾಜಕೀಯಕ್ಕೆ ಸಿಪಿ ಯೋಗೇಶ್ವರ್ ರೀ ಎಂಟ್ರಿ

Public TV
1 Min Read

– ಸ್ವಗೃಹದ ಕಚೇರಿಯಲ್ಲಿ ಕಾರ್ಯಕರ್ತರ ಸಭೆ

ರಾಮನಗರ: ಉಪ ಚುನಾವಣೆಯ ವೇಳೆ ಹುಣಸೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಇದೀಗ ಮತ್ತೆ ರಾಮನಗರ ಜಿಲ್ಲಾ ರಾಜಕೀಯಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ವರ್ಷದ ಎರಡನೇ ದಿನ ಚನ್ನಪಟ್ಟಣದ ತಮ್ಮ ಸ್ವಗೃಹಕ್ಕೆ ಭೇಟಿ ನೀಡಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ವಿರುದ್ಧ ಸೋಲು ಅನುಭವಿಸಿದ ಬಳಿಕ ಮೈತ್ರಿ ಸರ್ಕಾರವನ್ನು ಬೀಳಿಸುವಲ್ಲಿ ಸಿ.ಪಿ ಯೋಗೇಶ್ವರ್ ಪ್ರಮುಖ ಪಾತ್ರ ವಹಿಸಿದ್ದರು. ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರನ್ನ ಕರೆದೊಯ್ದು ತೆರೆ ಮರೆಯಲ್ಲಿದ್ದುಕೊಂಡೇ ಸರ್ಕಾರವನ್ನ ಕೆಡವಿದ್ದರು.

ರಾಜೀನಾಮೆ ನೀಡಿದ್ದ 15 ಶಾಸಕರ ಕ್ಷೇತ್ರಗಳಿಗೆ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆ ಸಿ.ಪಿ.ಯೋಗೇಶ್ವರ್ ಹೊಂದಿದ್ದರು. ಅದಕ್ಕೆ ಸಂಬಂಧಪಟ್ಟಂತೆ ಸಮೀಕ್ಷೆ, ತಮ್ಮ ಬೆಂಬಲಿಗರ ಜೊತೆಗೆ ಕ್ಷೇತ್ರದ ಸಂಪೂರ್ಣ ಅಧ್ಯಯನದ ವರದಿ ಪಡೆದುಕೊಂಡಿದ್ದರೂ ಸಹ ಟಿಕೆಟ್ ಸಿಗದೇ ನಿರಾಶರಾಗಿದ್ದರು. ಚುನಾವಣೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದ ಸಿಪಿ ಯೇಗೇಶ್ವರ್ ಅವರು ಕ್ಷೇತ್ರದತ್ತ ಮುಖ ಮಾಡುವುದನ್ನು ಕಡಿಮೆ ಮಾಡಿದ್ದರು. ಇದೀಗ ಹೊಸ ವರ್ಷದಲ್ಲಿ ಹೊಸ ಹುರುಪಿನೊಂದಿಗೆ ಜಿಲ್ಲೆಗೆ ಎಂಟ್ರಿ ಕೊಟ್ಟಿದ್ದಾರೆ.

ಈಗಾಗಲೇ ದೇಶದಾದ್ಯಂತ ಸಿಎಎ, ಸಿಎಬಿ, ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆಗಳು ನಡೆದಿದ್ದು, ಈಗಲೂ ಸಹ ನಡೆಯುತ್ತಿವೆ. ಹೀಗಾಗಿ ಪೌರತ್ವ ಕಾಯ್ದೆ ಪರವಾಗಿ ಇದೇ ಶನಿವಾರ ರಾಮನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ವಿಚಾರವಾಗಿ ಸಿಪಿ ಯೋಗೇಶ್ವರ್ ಚನ್ನಪಟ್ಟಣದಲ್ಲಿನ ತಮ್ಮ ನಿವಾಸದ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿದರು. ಇದೇ ವೇಳೆ ಮಾತನಾಡಿದ ಅವರು, ಪೌರತ್ವ ಕಾಯ್ದೆ ವಿಚಾರವಾಗಿ ಎಲ್ಲೆಡೆ ತಪ್ಪು ತಿಳುವಳಿಕೆ ಮೂಡಿಸಲಾಗುತ್ತಿದೆ. ಈ ಬಗ್ಗೆ ಜಿಲ್ಲೆಯ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿ ಎಂದು ಪಕ್ಷ ಕಾರ್ಯಕರ್ತರು, ಬೆಂಬಲಿಗರಿಗೆ ಕರೆ ನೀಡಿದರು.

ಚನ್ನಪಟ್ಟಣದಲ್ಲಿನ ಕೆರೆಗಳಿಗೆ ಸರಿಯಾಗಿ ನೀರು ಹರಿಸುತ್ತಿಲ್ಲ. ಶಾಸಕರು ಸಹ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಅಮವಾಸ್ಯೆ, ಹುಣ್ಣಿಮೆ ಬಂದ ಹಾಗೇ ಬರುತ್ತಾರೆ, ಹೋಗುತ್ತಾರೆ. ಸ್ವಲ್ಪ ದಿನಗಳಲ್ಲೇ ಎಲ್ಲವನ್ನೂ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *