ಅವನೊಬ್ಬ ನಯವಂಚಕ, ಪ್ರಬುದ್ಧ ರಾಜಕಾರಣಿ ಅಲ್ಲ: ಎಚ್‍ಡಿಕೆ ವಿರುದ್ಧ ಏಕವಚನದಲ್ಲೇ ಸಿಪಿವೈ ಕಿಡಿ

Public TV
2 Min Read

ರಾಮನಗರ: ಕುಮಾರಸ್ವಾಮಿ ವಿಚಾರ ಇಡೀ ಕರ್ನಾಟಕದ ಜನರಿಗೆ ಗೊತ್ತಿದೆ. ಈ ವಿಚಾರವನ್ನು ನನ್ನ ಬಾಯಿಯಿಂದ ಕೇಳಬೇಡಿ. ಅವನೊಬ್ಬ ನಯವಂಚಕ, ಪ್ರಬುದ್ಧ ರಾಜಕಾರಣಿ ಅಲ್ಲ ಎಂದು ವೈಯಕ್ತಿಕವಾಗಿ ಏಕವಚನದಲ್ಲಿಯೇ  ಸಚಿವ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದ್ದಾರೆ.

ಚನ್ನಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಚನ್ನಪಟ್ಟಣಕ್ಕೆ ಆಕಸ್ಮಿಕವಾಗಿ ಅತಿಥಿಯಾಗಿ ಬಂದರು. ಚುನಾವಣೆಯಲ್ಲಿ ಗೆದ್ದರು ನಂತರ ಹೋದರು. ನಾನು ತಾಲೂಕಿನಲ್ಲಿ ಯಾರ ಜಮೀನನ್ನು ಹೊಡೆದಿಲ್ಲ, ಆ ರೀತಿಯ ಆಪಾದನೆ ನನ್ನ ಮೇಲಿಲ್ಲ. ಆದರೆ ಕುಮಾರಸ್ವಾಮಿ ಮೇಲೆ ಬಿಡದಿಯಲ್ಲಿ ದಲಿತರ ಜಮೀನು ಹೊಡೆದುಕೊಂಡರು ಎಂಬ ಅಪಾದನೆ ಇದೆ. ಬಿಡದಿಯಲ್ಲಿ ಬಂಗಲೆ ಕಟ್ಟಿದ್ದಾನಲ್ಲ ಅದು ದಲಿತರ ಜಮೀನು ಎಂಬ ಆಪಾದನೆ ಇದೆ. ನಾಲಿಗೆ ಬಿಗಿಹಿಡಿದು ಮಾತಾಡಪ್ಪ, ಇಲ್ಲ ಬಹಿರಂಗವಾಗಿ ಚರ್ಚೆಗೆ ಬಾ ಎಂದಿದ್ದೇನೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಅಂಥದ್ದೇನಿದೆ ಸಿನಿಮಾದಲ್ಲಿ? ದಳ್ಳುರಿಯಲ್ಲಿ ದಹನದ ಕಥನ!

ಡಿ.ಕೆ.ಬ್ರದರ್ಸ್ ಬಗ್ಗೆ ಏನಾದರೂ ಮಾತನಾಡಿಕೊಳ್ಳಲಿ, ಅದು ಅವರ ವಿಚಾರ. ನನ್ನ ಬಗ್ಗೆ ಮಾತನಾಡಿದರೆ ಅದು ಕುಮಾರಸ್ವಾಮಿಗೆ ಗೌರವ ಅಲ್ಲ. ನಾನು ನೀನು 2023ಕ್ಕೆ ಮತ್ತೆ ಚುನಾವಣೆಯಲ್ಲಿ ಮುಖಾಮುಖಿ ಆಗುತ್ತಿದ್ದೇನೆ. ನಿನ್ನ ಹೆಂಡತಿ ಮೇಲೆ ಗೆದ್ದಿದ್ದೇನೆ. ನಿನ್ನ ಮೇಲೆ ಸೋತಿದ್ದೇನೆ. ಆದರೆ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಭಾವನಾತ್ಮಕವಾಗಿ ಜನರನ್ನು ಯಾಮಾರಿಸುತ್ತಿದ್ದ ಕಾಲ ಹೋಯಿತು. ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ನಿನಗೆ ಗೌರವ ಅಲ್ಲ. ಮತ್ತೆ ಎಚ್ಚರಿಕೆ ಕೊಡುತ್ತಿದ್ದೇನೆ. ಬಹಿರಂಗವಾಗಿ ನಿನ್ನನ್ನ ಹಿಡಿದು ಅಡ್ಡಹಾಕಿ ಕೇಳುತ್ತೇನೆ ಎಂದು ಹರಿಹಾಯ್ದಿದ್ದಾರೆ.

ಅವನೊಬ್ಬ ನಯವಂಚಕ, ಪ್ರಬುದ್ಧ ರಾಜಕಾರಣಿ ಅಲ್ಲ. ನನ್ನ ಬಗ್ಗೆ ಹತಾಷೆಯಿಂದ ಮಾತನಾಡುತ್ತಿದ್ದಾನೆ. ಕುಮಾರಸ್ವಾಮಿಗೆ ನಮ್ಮ ಪಕ್ಷದವರೇ ರಾಜಕೀಯವಾಗಿ ಸಪೋರ್ಟ್ ಕೊಡುತ್ತಿದ್ದಾರೆ. ಅವನನ್ನು ಸಿಕ್ಕಾಪಟ್ಟೆ ಹೊಗಳುವ ಅವಶ್ಯಕತೆ ಇಲ್ಲ. ಅವನು ಜನಾಭಿಪ್ರಾಯ ಕಳೆದುಕೊಂಡಿರುವ ವ್ಯಕ್ತಿ. ನಮ್ಮ ಪಕ್ಷದ ನಾಯಕರಿಗೆ ಬುದ್ಧಿ ಇಲ್ಲ, ಅವನನ್ನ ಓಲೈಸುತ್ತಾರೆ, ಇದರಲ್ಲಿ ಅರ್ಥವಿಲ್ಲ ಎಂದಿದ್ದಾರೆ. ಇದನ್ನೂ ಓದಿ : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಬಿಜೆಪಿ ಧನ್ಯವಾದ

ಜೆಡಿಎಸ್ ಜೊತೆಗೆ ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ನಮಗೆ ಅಂತಹ ಅನಿವಾರ್ಯತೆ ಇಲ್ಲ. ಈ ಬಗ್ಗೆ ಅರುಣ್ ಸಿಂಗ್‍ರವರೇ ಸ್ಪಷ್ಟಪಡಿಸಿದ್ದಾರೆ. ಜೆಡಿಎಸ್ ಇವತ್ತು ನೆಲಕಚ್ಚಿದೆ. ಜನಾಭಿಪ್ರಾಯ ಕಳೆದುಕೊಂಡಿದೆ. ಅವರಿಗೆ ರಾಜಕೀಯ ಅಸ್ತಿತ್ವ ಇಲ್ಲ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬೆಳೆಯಬೇಕು. ಹಾಗಾಗಿ ಸ್ವತಂತ್ರವಾಗಿ ಇರಬೇಕು, ಜೆಡಿಎಸ್ ಜೊತೆಗೆ ಕೈಜೋಡಿಸಬಾರದು. ಕುಮಾರಸ್ವಾಮಿಗೆ ಶಕ್ತಿ ಕೊಟ್ಟರೆ ಮತ್ತೆ ಘಟಬಂಧನ್ ಮಾಡುತ್ತಾರೆ.

ಸಿಎಂ ಆಗಿದ್ದಾಗ 14 ತಿಂಗಳು ನಮ್ಮ ತಾಲೂಕಿಗೆ ಬರಲಿಲ್ಲ. ಮತ್ತೆ ಇನ್ನೇನು ಕೆಲಸ ಮಾಡುತ್ತಾನೆ. ಕೇವಲ ಒಂದು ಗಂಟೆ ಸಮಯ ಕೊಟ್ಟಿದ್ದರೆ ತಾಲೂಕಿನ, ಜಿಲ್ಲೆಯ ಸಮಸ್ಯೆ ಬಗೆಹರಿಯುತ್ತಿತ್ತು. ಆಗ ರಾಸಲೀಲೆ ಮಾಡಿಕೊಂಡು ಈಗ ಜನರ ಮುಂದೆ ಕಣ್ಣಿರು ಸುರಿಸುವುದು ಶೋಭೆ ಅಲ್ಲ. 14 ತಿಂಗಳು ಫೈವ್ ಸ್ಟಾರ್ ಹೋಟೆಲ್‍ನಲ್ಲಿದ್ರಲ್ಲ ರೀ.. ಅವಯ್ಯನಿಗೆ ಬಹುವಚನದಿಂದ ಗೌರವ ಕೊಡುವುದು ಸೂಕ್ತ ಅಲ್ಲ. ಇನ್ನು ಮುಂದೆ ಏಕವಚನದಲ್ಲಿಯೇ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ನಾವೇನು ಅವನಿಗೆ ಹಿಟ್ ಅಂಡ್ ರನ್ ಕೇಸ್ ಇಲ್ಲ, ನೇರವಾಗಿಯೇ ಹೇಳುತ್ತೇನೆ. 2023ಕ್ಕೆ ಮುಖಾಮುಖಿ ಆದಾಗ ವೈಯಕ್ತಿಕ ವಿಚಾರ ನೋಡೋಣ. ಕುಮಾರಸ್ವಾಮಿ ವಿಚಾರ ಇಡೀ ಕರ್ನಾಟಕದ ಜನರಿಗೆ ಗೊತ್ತಿದೆ. ಈ ವಿಚಾರವನ್ನು ನನ್ನ ಬಾಯಿಯಿಂದ ಕೇಳಬೇಡಿ, ನಿಮಗೂ ಗೊತ್ತಿದೆ. ನನ್ನಿಂದ ಯಾಕಪ್ಪ ಆ ಅಣಿಮುತ್ತುಗಳನ್ನು ಕೇಳಿಸುತ್ತೀರಿ. ಕುಮಾರಸ್ವಾಮಿ ಅವರನ್ನು ನನ್ನನ್ನು ಒಟ್ಟಿಗೆ ಕೂರಿಸಿ ವೈಯಕ್ತಿಕ ವಿಚಾರ, ಸಾರ್ವಜನಿಕ ವಿಚಾರದ ಬಗ್ಗೆ ನೇರವಾಗಿ ಚರ್ಚೆ ಮಾಡುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *