ಸಿನಿಮಾದಂತೆ ಡ್ರಾಮಾ ಮಾಡಿದ್ರೆ ಬಹಳ ದಿನ ಉಳಿಯಲ್ಲ: ದರ್ಶನ್‍ಗೆ ಎಚ್‍ಡಿಕೆ ಟಾಂಗ್

Public TV
2 Min Read

– ಒಬ್ಬ ನಿಖಿಲ್ ಕುಮಾರಸ್ವಾಮಿ ವಿರುದ್ಧ ಒಂದಾಗಿದ್ದಾರೆ
– ಸುಮಲತಾಗೆ ಎಚ್‍ಡಿಡಿ ತಿರುಗೇಟು

ಮಂಡ್ಯ: ಸಿನಿಮಾದಲ್ಲಿ ಡ್ರಾಮಾ ಮಾಡಿದ ಹಾಗೆ ಮಾಡಿದರೆ ಬಹಳ ದಿನ ಉಳಿಯಲ್ಲ ಎಂದು ಸಿಎಂ ಕುಮಾರಸ್ವಾಮಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಜಿಲ್ಲೆಯ ಆದಿಚುಂಚನಗಿರಿ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಚಾಲೆಂಜಿಂಗ್ ಸ್ಟಾರ್ ಅಂತಾರಲ್ಲ ಆ ನಟ ದರ್ಶನ್ ಮನೆ ಮೇಲೆ ಕಲ್ಲು ಹೊಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಯಾರಾದರು ಮೂರು ಗಂಟೆಯಲ್ಲಿ ಕಲ್ಲು ತೂರುತ್ತಾರಾ? ಘಟನೆ ನಡೆದ ಮರುಕ್ಷಣವೇ ಆ ಭಾಗದ ಅಧಿಕಾರಿಗಳಿಗೆ ಸಿಸಿಟಿವಿ ಫೂಟೇಜ್ ಸೀಜ್ ಮಾಡಲು ಹೇಳಿದ್ದೆ. ಆದರೆ ಸಿಸಿಟಿವಿ ಆಫ್ ಆಗಿತ್ತಂತೆ. ಯಾರು ಆಫ್ ಮಾಡಿದ್ದು ಎಂದು ಪ್ರಶ್ನಿಸಿದರು.

ಒಬ್ಬ ನಿಖಿಲ್ ಕುಮಾರಸ್ವಾಮಿ ವಿರುದ್ಧ ಎಷ್ಟು ಜನ ಒಂದಾಗಿದ್ದಾರೆ ಎನ್ನುವುದು ನಮಗೆ ಗೊತ್ತಿದೆ. ಇದು ಜನರಿಗೆ ಅರ್ಥ ಆಗಲ್ವಾ? ಮಂಡ್ಯ ಜಿಲ್ಲೆ ಜನತೆ ನಮ್ಮ ಜೊತೆಗಿದ್ದಾರೆ. ಹಣ ಕೊಟ್ಟು ಕೊಂಡುಕೊಳ್ಳುವವರಿಗೆ ಎಲ್ಲಿಂದ ದುಡ್ಡು ಬರುತ್ತಿದೆ. ಪಾಪದ ಹಣದಿಂದ ಚುನಾವಣೆ ನಡೆಸಲು ಹೊರಟಿದ್ದಾರೆ. ಪಾಪದ ಹಣಕ್ಕೆ ಮಂಡ್ಯ ಜಿಲ್ಲೆಯ ಜನ ಮರುಳಾಗುವುದಿಲ್ಲ ಎಂದು ಗುಡುಗಿದರು.

ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಎಂಟು ಜನ ಶಾಸಕರು, ಮೂವರು ವಿಧಾನ ಪರಿಷತ್ ಸದಸ್ಯರು, ಒಬ್ಬರು ಸಂಸದರಿದ್ದಾರೆ. ಆದರೂ ಮೈತ್ರಿ ನಾಯಕರಲ್ಲಿ ಸೋಲುವ ಭಯವಿದೆ ಎಂದು ಹೇಳುತ್ತಿದ್ದಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವೆ. ಪ್ರಾಮಾಣಿಕತೆಯ ಬಗ್ಗೆ ಅವರಿಂದ ಪಾಠ ಕಲಿಬೇಕಾ? ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕುಟುಂಬ ಹಾಗೂ ಮಂಡ್ಯ ಜಿಲ್ಲೆಯ ಜನರ ಬಾಂಧವ್ಯಕ್ಕೆ ಯಾರು ಧಕ್ಕೆ ತರಲು ಸಾಧ್ಯವಿಲ್ಲ ಎಂದು ಸುಮಲತಾ ಅಂಬರೀಶ್ ಅವರಿಗೆ ತಿರುಗೇಟು ಕೊಟ್ಟರು.

ಮಾಜಿ ಸಚಿವ ಚಲುವರಾಯಸ್ವಾಮಿ ಆಡಿಯೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ, ಯಾರು ಯಾರಿಗೆ ಬೆಂಬಲ ಕೊಡುತ್ತಾರೆ ಎನ್ನುವ ಬಗ್ಗೆ ನಾನು ಮಾತನಾಡುವುದಿಲ್ಲ. ಇಲ್ಲಿಯ ಜನತೆ ಮತ್ತು ಕಾರ್ಯಕರ್ತರಿಂದ ಬೆನ್ನಿಗೆ ಚೂರಿ ಹಾಕುವವರಿಂದ ತೊಂದರೆ ಆಗಲ್ಲ. ನಿಖಿಲ್ ನಾಮಪತ್ರ ಸಲ್ಲಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ್ದೇನೆ. ಆದರೆ ಅವರು ಒಂದು ದಿನ ಸಮಾವೇಶಕ್ಕೆ ಬರುತ್ತೇನೆಂದು ತಿಳಿಸಿದ್ದಾರೆ ಎಂದರು.

ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಚುನಾವಣೆಗೆ ನಾಳೆ ಮಧ್ಯಾಹ್ನ 2ರಿಂದ 3 ಗಂಟೆಯೊಳಗೆ ನಾಮಪತ್ರ ಸಲ್ಲಿಸಲಿದ್ದಾರೆ. ನಾಳೆಯಿಂದ ನಿಜವಾದ ಚುನಾವಣೆ ಶುರುವಾಗಲಿದೆ. ಕೆಲವು ಕ್ಷೇತ್ರಗಳಲ್ಲಿ ಗೊಂದಲವೇ ಇಲ್ಲ ಎನ್ನಲ್ಲ. ಕಾರ್ಯಕರ್ತರ ಶಕ್ತಿ ಬೆನ್ನಿಗಿರುವಾಗ ಭಯ ಪಡುವ ಪ್ರಶ್ನೆ ಉದ್ಭವಿಸಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *