– ಸದ್ಯದಲ್ಲೇ ಆಸ್ಪತ್ರೆ ನಿರ್ಮಾಣಕ್ಕೆ ಶಿಲಾನ್ಯಾಸ
ಬೆಂಗಳೂರು: ಹೆಬ್ಬಾಳ (Hebbal) ವಿಧಾನಸಭಾ ಕ್ಷೇತ್ರದ ನಾಗರಿಕರಿಗಾಗಿ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಸುಸಜ್ಜಿತವಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ (Multi Speciality Hospital) ನಿರ್ಮಾಣವಾಗಲಿದೆ. ಕ್ಷೇತ್ರದ ಶಾಸಕರು, ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ (Byrathi Suresh) ಅವರು ಸೋಮವಾರ (ಸೆ.1) ಆವರಣದಲ್ಲಿ ಆಸ್ಪತ್ರೆಗೆ ನಿಗದಿಪಡಿಸಿರುವ ಜಾಗದ ಪರಿಶೀಲನೆ ನಡೆಸಿದರು.
ಕಳೆದ ಹಲವು ದಶಕಗಳಿಂದಲೂ ಕ್ಷೇತ್ರಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಬೇಕೆಂಬ ಬೇಡಿಕೆ ಹೆಬ್ಬಾಳದ ನಾಗರಿಕರದ್ದಾಗಿತ್ತು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಬಳಿ ಚರ್ಚಿಸಿ ಸಭೆಗಳನ್ನೂ ನಡೆಸಲಾಗಿತ್ತು. ಕ್ಷೇತ್ರದ ಅಗತ್ಯತೆಯನ್ನು ಮನಗಂಡ ಮುಖ್ಯಮಂತ್ರಿಗಳು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲು 200 ಕೋಟಿ ರೂ. ಮಂಜೂರು ಮಾಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.ಇದನ್ನೂ ಓದಿ: ಭಾರೀ ಭ್ರಷ್ಟಾಚಾರ ಆರೋಪ – ಆನೇಕಲ್ ತಹಶೀಲ್ದಾರ್ ಕಚೇರಿಗೆ ರೈತರಿಂದ ಮುತ್ತಿಗೆ
ಕ್ಷೇತ್ರದ ಪ್ರತಿಯೊಬ್ಬ ಬಡ ಜನರಿಗೆ ಸುಲಭ ಮತ್ತು ಉಚಿತವಾಗಿ ಚಿಕಿತ್ಸೆ ದೊರೆಯಬೇಕೆಂಬುದು ಸರ್ಕಾರದ ಆಶಯವಾಗಿದೆ. ಇಲ್ಲಿನ ಜನರು ಹೆಚ್ಚಿನ ಚಿಕಿತ್ಸೆಗಾಗಿ ಕಿದ್ವಾಯಿ, ಜಯದೇವದಂತಹ ದೂರವಿರುವ ಹಲವಾರು ಸರ್ಕಾರಿ ಆಸ್ಪತ್ರೆಗಳಿಗೆ ಹೋಗಬೇಕಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕ್ಷೇತ್ರಕ್ಕೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭವಾಗಲಿದೆ ಎಂದು ಹೇಳಿದ್ದಾರೆ.
ಶೀಘ್ರದಲ್ಲೇ ಶಿಲಾನ್ಯಾಸ:
ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಎಲ್ಲಾ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಆವರಣದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಸುತ್ತಮುತ್ತಲಿನ ಎಲ್ಲಾ ವರ್ಗದ ಜನರಿಗೆ ಈ ಜಾಗ ಹತ್ತಿರವಾಗಲಿದೆ. ಈ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಸದ್ಯದಲ್ಲೇ ಶಿಲಾನ್ಯಾಸ ನೆರವೇರಲಿದ್ದು, ಹಂತಹಂತವಾಗಿ ಆಸ್ಪತ್ರೆ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಅತ್ಯುತ್ತಮ ಗುಣಮಟ್ಟದಲ್ಲಿ ಆಸ್ಪತ್ರೆ ಕಟ್ಟಡವನ್ನು ನಿರ್ಮಾಣ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಯಾವುದೇ ಲೋಪವಾಗದ ರೀತಿಯಲ್ಲಿ ಕಾಮಗಾರಿಯನ್ನು ಕೈಗೊಂಡು ರಾಜ್ಯದಲ್ಲಿ ಅತ್ಯುತ್ತಮ ಮತ್ತು ಉತ್ಕೃಷ್ಟ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮಾಡಲು ಸಂಕಲ್ಪ ಮಾಡಲಾಗಿದೆ ಎಂದು ಹೇಳಿದ್ದಾರೆ.
ಏನೆಲ್ಲಾ ಸೌಲಭ್ಯ?
ಈ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸಾ ಯಂತ್ರೋಪಕರಣಗಳು, ಡಯಾಲಿಸಿಸ್, ಹೃದ್ರೋಗ, ಮಹಿಳಾ ಮತ್ತು ಮಕ್ಕಳ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ, ತಜ್ಞ ವೈದ್ಯರು ಮತ್ತು ಶುಶ್ರೂಕರ ತಂಡ ಸೇರಿದಂತೆ ಹತ್ತು ಹಲವಾರು ಚಿಕಿತ್ಸಾ ಸೌಲಭ್ಯಗಳು ಕ್ಷೇತ್ರದ ಜನತೆಗೆ ದೊರೆಯಲಿವೆ ಎಂದು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ತೀವ್ರ ಮಳೆಯಿಂದಾಗಿ ಮಲೆನಾಡಾದ ರಾಯಚೂರು – ವೈರಲ್ ಫೀವರ್ ಪ್ರಮಾಣ ಹೆಚ್ಚಳ