ಭ್ರಷ್ಟ-ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಕ್ಕೆ ಬಿಜೆಪಿ ನಿರ್ಧಾರ: ಗುಡುಗಿದ ವಿಜಯೇಂದ್ರ

Public TV
2 Min Read

– ಕುಸಿದ ಆಡಳಿತ; ಸಿಎಂ ಕುರ್ಚಿಗೆ ಪೈಪೋಟಿ ಬಿವೈವಿ ಟೀಕೆ

ಬೆಂಗಳೂರು: ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಇದರ ನಡುವೆ ಮುಖ್ಯಮಂತ್ರಿ ಕುರ್ಚಿಗೆ ಪೈಪೋಟಿ ದಿನೇದಿನೇ ಹೆಚ್ಚಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ (BY Vijayendra) ಅವರು ಟೀಕಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭ್ರಷ್ಟ-ಜನವಿರೋಧಿ ಕಾಂಗ್ರೆಸ್ ಸರ್ಕಾರದ (Congress Government) ವಿರುದ್ಧ ಅಧಿವೇಶನದಲ್ಲಿ ಮತ್ತು ಹೊರಗಡೆ ಹೋರಾಟ ಮಾಡಲು ಬಿಜೆಪಿ ನಿರ್ಧರಿಸಿದೆ. ಅಭಿವೃದ್ಧಿ ಕುರಿತು ಚಿಂತಿಸಬೇಕಾದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವ ಸಂಪುಟದವರು ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ. ಕಾಂಗ್ರೆಸ್ ಪಕ್ಷವು ತಾನು ನೀಡಿದ ಭರವಸೆಗಳನ್ನ ಈಡೇರಿಸಿಲ್ಲ, ಕಾಂಗ್ರೆಸ್ಸಿನ ಭರವಸೆ ನಂಬಿ ಮೋಸಹೋದ ಭಾವನೆ ಮತದಾರರಲ್ಲಿದೆ ಎಂದು ವಿವರಿಸಿದರು.

ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮಶತಾಬ್ದಿ ಸಂದರ್ಭದಲ್ಲಿ ಇಂದು ಅಭೂತಪೂರ್ವ ಕಾರ್ಯಕ್ರಮ ಇಲ್ಲಿ ಆಯೋಜಿಸಲಾಗಿದೆ ಎಂದ ಅವರು, ರಾಜ್ಯದ ರೈತರು (Farmers), ಕಬ್ಬು ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರವು ಖರೀದಿ ಕೇಂದ್ರ ತೆರೆದಿಲ್ಲವೆಂದು ಆಕ್ಷೇಪಿಸಿ ಮೆಕ್ಕೆ ಜೋಳ ಬೆಳೆಗಾರರೂ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ವಜಾಕ್ಕೆ ಆಗ್ರಹ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಅವರು ಒಂದು ಹೇಳಿಕೆ ನೀಡಿದ್ದಾರೆ. ಕರಾವಳಿ ಭಾಗದ ಯಕ್ಷಗಾನ ಕಲಾವಿದರು ಸಲಿಂಗಕಾಮಿಗಳು ಎಂಬ ಉದ್ಧಟತನದ ಹೇಳಿಕೆ ನೀಡಿದ್ದಾರೆ ಎಂದು ವಿಜಯೇಂದ್ರ ಅವರು ಖಂಡಿಸಿದರು.

ಬಿಳಿಮಲೆ ಅವರ ಹೇಳಿಕೆಗೆ ಯಕ್ಷಗಾನ ಕಲಾವಿದರು, ಕರಾವಳಿ ಭಾಗಕ್ಕೆ ಮಾತ್ರವಲ್ಲದೇ ಇಡೀ ಹಿಂದೂ ಸಮಾಜಕ್ಕೆ ಮಾಡಿದ ಅವಮಾನ ಎಂದು ಆಕ್ಷೇಪಿಸಿದರು. ಅವರ ಹೇಳಿಕೆಯು ಕಾಂಗ್ರೆಸ್ ಪಕ್ಷದ ಮನಸ್ಥಿತಿಯನ್ನ ಬಿಂಬಿಸುತ್ತದೆ ಎಂದು ಹೇಳಿದರು. ಮುಖ್ಯಮಂತ್ರಿ, ಸರ್ಕಾರಕ್ಕೆ ಇಲ್ಲಿನ ಕಲೆ, ಪರಂಪರೆ, ಸಂಸ್ಕೃತಿ ಬಗ್ಗೆ ಕಿಂಚಿತ್ತಾದರೂ ತಕ್ಷಣ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನ ಕಿತ್ತು ಬಿಸಾಕಬೇಕೆಂದು ಒತ್ತಾಯಿಸಿದರು. ಬಿಜೆಪಿ ಮಾತ್ರವಲ್ಲ. ಇಡೀ ಹಿಂದೂ ಸಮಾಜ ಇದನ್ನ ಖಂಡಿಸಬೇಕಿದೆ. ಪಕ್ಷಾತೀತವಾಗಿ ಇದರ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.

ಸ್ಪೀಕರ್ ಯು.ಟಿ ಖಾದರ್ ಅವರ ವಿರುದ್ಧ ಹಿಂದಿನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭ್ರಷ್ಟಾಚಾರದ ಕುರಿತು ಆಧಾರಸಹಿತ ಆರೋಪ ಮಾಡಿದ್ದಾರೆ. ಆ ಸ್ಥಾನದ ಗೌರವ ಉಳಿಸಲು ಅವರೇ ರಾಜೀನಾಮೆ ಕೊಟ್ಟರೆ ಒಳ್ಳೆಯದು ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.

Share This Article