ಆನ್‍ಲೈನ್ ನಲ್ಲಿ ನಿಮಗೆ ಬೇಕಾದ ತಳಿಯ ಹಸುಗಳನ್ನು ಖರೀದಿಸಿ!- ಏನಿದರ ವಿಶೇಷತೆ?

Public TV
2 Min Read

ನವದೆಹಲಿ: ರಾಸುಗಳ ವ್ಯಾಪಾರಕ್ಕೆ ಡಿಜಿಟಲ್ ಸ್ಪರ್ಷ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ “ಇ-ಪಶುಹಾತ್” ವೆಬ್‍ಸೈಟ್‍ವೊಂದನ್ನು ಅಭಿವೃದ್ಧಿ ಪಡಿಸಿದೆ. ಮಧ್ಯವರ್ತಿಗಳ ಹಾವಳಿ ತಡೆದು, ರೈತರ ಹಿತ ಕಾಯಲು ನಿಟ್ಟಿನಲ್ಲಿ ಇ-ಪಶುಹಾತ್ ವೆಬ್‍ಸೈಟ್ ಕೆಲಸ ಮಾಡಲಿದೆ.

ಫ್ಲಿಪ್‍ಕಾರ್ಟ್, ಅಮೆಜಾನ್, ಓಎಲ್‍ಎಕ್ಸ್ ನಂತಯೇ ಇ-ಪಶುಹಾತ್ ವೆಬ್ ಸೈಟ್ ಕಾರ್ಯನಿರ್ವಹಿಸಲಿದೆ. ಇಲ್ಲಿ ರಾಸುಗಳನ್ನು ಮಾರುವವರು ಹಾಗೂ ಖರೀದಿಸುವವರು ನೇರವಾಗಿ ಸಂಪರ್ಕ ಸಾಧಿಸುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದರೊಂದಿಗೆ ಪಶುಸಂಗೋಪನೆಗೆ ನೆರವಾಗುವ ಮಾಹಿತಿ, ವೈದ್ಯಕೀಯ ಸೇವೆ ಸೇರಿದಂತೆ ಅನೇಕ ಸೌಲಭ್ಯಗಳು ಇಲ್ಲಿ ದೊರೆಯಲಿದೆ.

ಏನೇನು ಅಭ್ಯವಿದೆ?
ಜಾನುವಾರು, ಹೋರಿ, ಎಮ್ಮೆ, ಒಂಟೆ, ಕುರಿ, ಆಡು, ಹಂದಿ, ಕುದುರೆ, ಕೋಳಿ, ಕೋನ, ಇತರೆ ಪ್ರಾಣಿಗಳು ಪಟ್ಟಿಯಿದ್ದು, ರಾಜ್ಯವಾರು ಪ್ರತಿಯೊಂದು ಪ್ರಾಣಿಯ ಸಂಖ್ಯೆಯನ್ನು ದಾಖಲಿಸಲಾಗಿದೆ. ಅಷ್ಟೇ ಅಲ್ಲದೇ ಜಾನುವಾರುಗಳ ಪ್ರಾಮಾಣಿಕರಣ ಪರಿಶೀಲನೆ ಸೇವೆ, ಪೌಷ್ಟಿಕತೆ ಸಲಹಾ ಸೇವೆ, ಸ್ವಚ್ಚ ಹಾಲು ಉತ್ಪಾದನೆ, ಆರೋಗ್ಯ ಕಾರ್ಡ್, ವೆಟರ್ ನರಿ ಸೇವೆ, ಕೃತಕ ಗರ್ಭಧಾರಣೆ, ಸಾರಿಗೆ ಸೌಲಭ್ಯಕ್ಕೆ ಸಂಪರ್ಕ ಕಲ್ಪಿಸುವುದು ರೋಗ ಪತ್ತೆ ಮತ್ತು ಪರೀಕ್ಷೆ, ಎಸ್‍ಎಂಎಸ್, ವಾಯ್ಸ್ ಕಾಲ್ ಹಾಗೂ ಇಮೇಲ್ ರಿಮೈಂಡರ್ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೇ ಸಲಹೆ, ದೂರು ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ಮೇಲ್ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ.

ವೆಬ್‍ಸೈಟ್ ನಲ್ಲಿ ಸ್ಥಳೀಯವಾಗಿ ನಡೆಯುವ ಕಾರ್ಯಕ್ರಮ, ವಿಚಾರ ಸಂಕಿರಣಗಳ ಬಗ್ಗೆಯೂ ನೋಂದಣಿ ಮಾಡಿಸಿಕೊಂಡಿರುವ ರೈತರಿಗೆ ಮಾಹಿತಿ ನೀಡಲಾಗುತ್ತದೆ. ಮಧ್ಯವರ್ತಿಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಇ-ಪಶುಹಾತ್ ಸಹಾಯಕವಾಗಲಿದ್ದು, ರಾಸುಗಳ ಮಾಲೀಕರಿಗೆ ಹಾಗೂ ಖರೀದಿ ಮಾಡುವವರಿಗೆ ಸೂಕ್ತ ಬೆಲೆ ದೊರೆಯಲಿದೆ. ಅಲ್ಲದೇ ರಾಜ್ಯದ ವಿವಿಧ ತಳಿಗಳ ಬಗ್ಗೆ ಮಾಹಿತಿ, ನೀಡುವ ಜೊತೆಗೆ ಅವುಗಳ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಒಂದು ಹೆಜ್ಜೆ ಮುಂದುವರೆದು ಹಸುಗಳಿಗೆ ಆನ್‍ಲೈನ್ ಟ್ರೇಡಿಂಗ್ ಒದಗಿಸುವ ಮಹತ್ವದ ಯೋಜನೆಯನ್ನು ಈ ವೆಬ್‍ಸೈಟ್ ಕಲ್ಪಿಸಲಿದೆ.

ಸದ್ಯ ಇ-ಪಶುಹಾತ್ ವೆಬ್‍ಸೈಟ್ ನಲ್ಲಿ ದೇಶದ 56 ವೀರ್ಯ ಸ್ಟೇಷನ್‍ಗಳೊಂದಿಗೆ ಸಂಪರ್ಕ ಸಾಧಿಸಲಾಗಿದೆ. ಹೀಗಾಗಿ ರೈತರು ಯಾವುದೇ ಅಧಿಕಾರಿಗಳ ಸಹಾಯ ಪಡೆಯದೇ ನೇರವಾಗಿ ರಾಜ್ಯದಲ್ಲಿರುವ ಖಾಸಗಿ ಸಂಸ್ಥೆ, ಕೃಷಿ ವಿಶ್ವವಿದ್ಯಾಲಯಗಳ ವಿಳಾಸ, ದೂರವಾಣಿ ಸಂಖ್ಯೆ, ಮಾಹಿತಿ ಪಡೆಯಬಹುದಾಗಿದೆ. ಕೇಂದ್ರ ಸರ್ಕಾರದ ಅಧಿಕೃತ ಜಾಲತಾಣದಲ್ಲಿ ಪ್ರಮುಖವಾಗಿ ರಾಸುಗಳ ಮಾರಾಟ, ಹೆಪ್ಪುಗಟ್ಟಿದ ದನಗಳ ವೀರ್ಯ (ಎಫ್‍ಎಸ್) ವ್ಯಹಾರಕ್ಕೆ ಅವಕಾಶವಿದೆ. ಇದಕ್ಕಾಗಿ ಅಧಿಕೃತ ಪೂರೈಕೆದಾರರ ಪಟ್ಟಿ ಕೂಡ ಲಭ್ಯವಿದೆ. ವೆಬ್‍ಸೈಟಿಗೆ ಭೇಟಿ ನೀಡಲು ಕ್ಲಿಕ್ ಮಾಡಿ: https://epashuhaat.gov.in/

ಇ-ಪಶುಹಾತ್ ವೆಬ್‍ಸೈಟ್‍ನಲ್ಲಿ ರೈತರು ಅಥವಾ ಪಶುಗಳ ಮಾಲೀಕರು ನೋಂದಣಿ ಮಾಡಿಕೊಂಡಲ್ಲಿ, ನೇರವಾಗಿ ಮಾರುವವರು ಹಾಗೂ ಖರೀದಿಗಾರರು ಸಂಪರ್ಕ ಸಾಧಿಸಬಹುದು. ದೇಶದಲ್ಲಿ ವಿವಿಧ ತಳಿಗಳನ್ನು ಅಭಿವೃದ್ಧಿಗೆ ಸಂಶೋಧನೆ ನಡೆಯುತತ್ತಿದ್ದು, ಈ ಕುರಿತು ಮಾಹಿತಿ ಕೂಡಾ ಕೇಂದ್ರ ಸರ್ಕಾರದ ಅಧಿಕೃತ ಜಾಲತಾಣದಲ್ಲಿ ಲಭ್ಯವಾಗಲಿದೆ.

ಕೇಂದ್ರ, ರಾಜ್ಯ ಸಹಕಾರಿ ಮತ್ತು ಖಾಸಗಿ ಸಂಸ್ಥೆಗಳ ಮಧ್ಯೆ ಕೊಂಡಿಯ ರೂಪದಲ್ಲಿ ಇದು ಕಾರ್ಯನಿರ್ವಹಿಸಲಿದೆ. ಇದರಿಂದ ರೈತರು, ಹೈನುಗಾರಿಕೆ, ಕುರಿ ಸಾಕಾಣಿಕೆ, ಕೋಳಿ ಫಾರ್ಮ್ ಸೇರಿದಂತೆ ಪಶುಸಂಗೋಪನೆ ಮಾಡುವವರಿಗೆ ಹೆಚ್ಚು ಅನುಕೂಲವಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *