ಗದಗ: ಸರ್ಕಾರಿ ಬಸ್ ಡಿಕ್ಕಿಯಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಬಸ್ ನಿಲ್ದಾಣದಲ್ಲಿ ನಡೆದಿದೆ.
48 ವರ್ಷದ ಚೆನ್ನಮ್ಮ ಹಡಪದ ಮೃತ ಮಹಿಳೆ. ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಡಕೋಳ ಗ್ರಾಮದ ನಿವಾಸಿ ಚೆನ್ನಮ್ಮ ಶಿರಹಟ್ಟಿಗೆ ಸಂಬಂಧಿಕ ಮನೆಗೆ ಹೊರಟಿದ್ದರು.
ಇಂದು ಮಧ್ಯಾಹ್ನ ಲಕ್ಷ್ಮೇಶ್ವರ ಬಸ್ ನಿಲ್ದಾಣದಲ್ಲಿ ಇಳಿದು, ಮೂತ್ರ ವಿಸರ್ಜನೆ ಹೋಗುವ ವೇಳೆ ವೇಗವಾಗಿ ನಿಲ್ದಾಣದೊಳಕ್ಕೆ ಬಂದ ಬಸ್ ಮಹಿಳೆಗೆ ಡಿಕ್ಕಿಯಾಗಿದೆ. ಹಿಂದಿನ ಎರಡು ಚಕ್ರಗಳು ಮಹಿಳೆ ಎರಡೂ ಕಾಲು ಮೇಲೆ ಹರಿದಿವೆ. ಇದನ್ನೂ ಓದಿ: ಬೈಕ್, ಪಿಕಪ್ ವ್ಯಾನ್‌ಗೆ ಸರ್ಕಾರಿ ಬಸ್ ಡಿಕ್ಕಿ – ಗರ್ಭಿಣಿ, ಮಗು ಸೇರಿ ಎಂಟು ಮಂದಿ ದುರ್ಮರಣ
ನೆಲಕ್ಕೆ ಬಿದ್ದ ರಭಸಕ್ಕೆ ತಲೆಗೆ ಗಂಭೀರ ಗಾಯವಾಗಿ ರಕ್ತ ಸ್ರಾವವಾಗಿದೆ. ಕೂಡಲೆ ಗಾಯಾಳು ಮಹಿಳೆಯನ್ನು ಲಕ್ಷ್ಮೇಶ್ವರ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ಮಹಿಳೆ ಮೃತಪಟ್ಟಿದ್ದಾಳೆ.
ಈ ಬಸ್ ಗದಗನ ಬೆಟಗೇರಿ ಡಿಪೋ ಸಂಬಂಧಿಸಿದ್ದು, ಗದಗನಿಂದ ಲಕ್ಷ್ಮೇಶ್ವರ ಹಾವೇರಿ ಮಾರ್ಗವಾಗಿ ಬೆಂಗಳೂರಿಗೆ ಹೊರಟಿತ್ತು. ಬಸ್ ಚಾಲಕನ ಅಜಾಗರೂಕತೆಯಿಂದ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಕುರಿತು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

