65 ಸಾವಿರ ರೂ. ಮರಳಿಸಿದ ಬಸ್ ಚಾಲಕ, ನಿರ್ವಾಹಕಿ

Public TV
2 Min Read

ಹುಬ್ಬಳ್ಳಿ: ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಬಿಟ್ಟು ಹೋಗಿದ್ದ 65 ಸಾವಿರ ರೂ. ನಗದು ಹಾಗೂ ಮಹತ್ವದ ದಾಖಲೆಗಳಿದ್ದ ಬ್ಯಾಗನ್ನು ಪ್ರಯಾಣಿಕರಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಚಾಲಕ, ನಿರ್ವಾಹಕಿನ್ನು ಹಿರಿಯ ಅಧಿಕಾರಿಗಳು ಅಭಿನಂದಿಸಿದ್ದಾರೆ.

ನಗರದ ಕಮರಿಪೇಟೆ ನಿವಾಸಿ ಸೀರೆ ವ್ಯಾಪಾರಿ ಶ್ರೀನಿವಾಸ್ ಹಬೀಬ ಎಂಬವರು ಬೆಳಗಾವಿಯಿಂದ ಹುಬ್ಬಳ್ಳಿಗೆ ಗ್ರಾಮಾಂತರ 3ನೇ ಘಟಕದ ಎಫ್ 3110 ಸಂಖ್ಯೆಯ ರಾಜಹಂಸ ಬಸ್ಸಿನಲ್ಲಿ ಬಂದಿದ್ದಾರೆ. ನಗರದ ಗೋಕುಲ ರಸ್ತೆಯ ಬಸ್ ನಿಲ್ದಾಣದಲ್ಲಿ ಇತರೆ ಲಗ್ಗೇಜ್‍ನೊಂದಿಗೆ ಇಳಿಯುವಾಗ ಅಪಾರ ನಗದು ಹಣ ಹಾಗೂ ಮಹತ್ವದ ದಾಖಲೆಗಳಿದ್ದ ಒಂದು ಬ್ಯಾಗನ್ನು ಬಸ್ಸಿನಲ್ಲಿಯೆ ಮರೆತು ಬಿಟ್ಟಿದ್ದಾರೆ.

ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸಿದ ಚಾಲಕ ಜಗದೀಶ್ ಹಾಗೂ ನಿರ್ವಾಹಕಿ ಎಸ್.ವಿ.ಹಳ್ಳಿಕಟ್ಟಿಮಠ ಬೆಳಗಾವಿಯಿಂದ ಹುಬ್ಬಳ್ಳಿಗೆ ಬಂದ ನಂತರ ಬಸ್ಸನ್ನು ನಿಲ್ದಾಣದಿಂದ ಘಟಕಕ್ಕೆ ತಂದು ದುರಸ್ತಿ ಮಾಡಿಸಿಕೊಂಡು ಮತ್ತೆ ಬೆಳಗಾವಿಗೆ ಹೋಗಿ ಹುಬ್ಬಳ್ಳಿಗೆ ಬಂದಿದ್ದಾರೆ. ರಾತ್ರಿ 8ಕ್ಕೆ ಗೋಕುಲ ರಸ್ತೆಯ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೆಲ್ಲರನ್ನು ಇಳಿಸಿದ್ದಾರೆ. ಬಸ್ಸನ್ನು ಡಿಪೋಗೆ ತೆಗೆದುಕೊಂಡು ಹೋಗುವುದಕ್ಕೆ ಮುನ್ನ ತಪಾಸಣೆ ಮಾಡುವುದು ಚಾಲಕ, ನಿರ್ವಾಹಕರ ಕೆಲಸ. ಇದನ್ನೂ ಓದಿ: ಕಷ್ಟಕರವಾದ ರಸ್ತೆಗಳು ಸುಂದರ ತಾಣಗಳಿಗೆ ದಾರಿ ಮಾಡಿಕೊಡುತ್ತೆ: ದೀಪಿಕಾ ದಾಸ್

ಅದೇ ರೀತಿ ತಪಾಸಣೆ ಮಾಡುವಾಗ ಒಂದು ಬ್ಯಾಗ್ ಇರುವುದನ್ನು ಗಮನಿಸಿದ್ದಾರೆ. ಅದನ್ನು ಘಟಕ ವ್ಯವಸ್ಥಾಪಕರಿಗೆ ಒಪ್ಪಿಸಿದ್ದಾರೆ. ಆ ಬ್ಯಾಗ್ ತೆರೆದು ನೋಡಿದಾಗ ಅದರಲ್ಲಿ 65,520 ರೂ. ಮೂಲ ಪಾನ್ ಕಾರ್ಡ್, ಎಟಿಎಂ ಕಾರ್ಡ್, ಮತ್ತಿತರ ಮಹತ್ವದ ದಾಖಲೆಗಳಿರುವುದು ಕಂಡುಬಂದಿದೆ. ಈ ಹಿನ್ನೆಲೆ ವಿಭಾಗೀಯ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಮಕ್ಷಮದಲ್ಲಿ ಜಗದೀಶ್ ಮತ್ತು ಹಳ್ಳಿಕಟ್ಟಿಮಠ ಮೂಲಕ ಬ್ಯಾಗನ್ನು ಪ್ರಯಾಣಿಕರಿಗೆ ಮರಳಿಸಲಾಯಿತು.

ಪ್ರಯಾಣಿಕ ಶ್ರೀನಿವಾಸ್ ಹಬೀಬ ಈ ಕುರಿತು ಮಾತನಾಡಿದ್ದು, ಒಂದು ವಾರ ವ್ಯಾಪಾರದ ಮೊತ್ತ ಹಾಗೂ ಮಹತ್ವದ ದಾಖಲೆಗಳ ಬ್ಯಾಗ್ ಕಳೆದಿದ್ದು, ತುಂಬಾ ಬೇಸರ ಉಂಟಾಗಿತ್ತು. ಇಷ್ಟೊಂದು ಹಣ ಸಂಪಾದಿಸಲು ಹಲವು ದಿನಗಳು ಬೇಕಾಗುತ್ತಿತ್ತು. ಪೂರ್ತಿ ಹಣದೊಂದಿಗೆ ಎಲ್ಲ ಮಹತ್ವದ ದಾಖಲೆಗಳನ್ನು ಸುರಕ್ಷಿತವಾಗಿ ಹಿಂದಿರುಗಿಸಿದ ಚಾಲಕ-ನಿರ್ವಾಹಕರಿಗೆ ಕೃತಜ್ಞತೆ ಸಲ್ಲಿಸಿದರು.

ಪ್ರಾಮಾಣಿಕತೆ ಮೆರೆದ ಚಾಲಕ ಮತ್ತು ನಿರ್ವಾಹಕಿಯನ್ನು ಆತ್ಮೀಯವಾಗಿ ಸನ್ಮಾನಿಸಿ ಮಾತನಾಡಿದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ, ಸದಾ ಸಾರ್ವಜನಿಕರ ನಡುವೆ ಕೆಲಸ ಮಾಡುವ ಚಾಲಕ ಮತ್ತು ನಿರ್ವಾಹಕರು ಸಂಸ್ಥೆಯ ರಾಯಭಾರಿಗಳಿದ್ದಂತೆ. ಇವರ ಪ್ರಾಮಾಣಿಕತೆ ಇತರರಿಗೆ ಮಾದರಿಯಾಗಿದೆ. ಇದರಿಂದ ಸಾರ್ವಜನಿಕ ವಲಯದಲ್ಲಿ ಸಂಸ್ಥೆಯ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಇಂದಿರಾ ಗಾಂಧಿಯನ್ನು ಏಕವಚನದಲ್ಲಿ ಬೈಯ್ದಿದ್ದಾರೆ – ಸಿದ್ದುಗೆ ಕಟೀಲ್ ಸವಾಲು

ವಿಭಾಗೀಯ ಸಂಚಾರ ಅಧಿಕಾರಿ ಎಸ್.ಎಸ್.ಮುಜುಂದಾರ, ವಿಭಾಗೀಯ ತಾಂತ್ರಿಕ ಶಿಲ್ಪಿ ಪ್ರವೀಣ್ ಈಡೂರ, ಆಡಳಿತಾಧಿಕಾರಿ ನಾಗಮಣಿ, ಘಟಕ ವ್ಯವಸ್ಥಾಪಕ ಬಸಪ್ಪ ಪೂಜಾರಿ ಮತ್ತಿತರರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *