ಬಸ್‍ನಲ್ಲಿ ಕಾಣಿಸ್ತು ಬೆಂಕಿ ಕಿಡಿ – 1 ಕಿಮೀ ಹಿಂಬಾಲಿಸಿ ಬಂದು 70 ಪ್ರಯಾಣಿಕರ ಜೀವ ಉಳಿಸಿದ ಬೈಕ್ ಸವಾರ

Public TV
2 Min Read

ಕಾರವಾರ: ಬೈಕ್ ಸವಾರನ ಸಮಯಪ್ರಜ್ಞೆಯಿಂದಾಗಿ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಸಂಚರಿಸುತ್ತಿದ್ದ 70 ಪ್ರಯಾಣಿಕರು ಅದೃಷ್ಟವಶಾತ್ ಬದುಕುಳಿದ ಘಟನೆ ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಬೈಕ್ ಸವಾರ ನೀಡಿದ ಮಾಹಿತಿ ಸ್ವಲ್ಪ ತಡವಾಗಿದ್ದರೂ ಬಸ್ ಸುಟ್ಟು ಕರಕಲಾಗುವ ಸಾಧ್ಯತೆಯಿತ್ತು.

ಏನಾಯ್ತು?: ಜಿಲ್ಲೆಯ ಅಂಕೋಲದ ಬಾಳೆಗುಳಿ ಕ್ರಾಸ್‍ನಲ್ಲಿ ಈ ಘಟನೆ ನಡೆದಿದೆ. ಇಂದು ಸಂಜೆ 7 ಗಂಟೆ ಸುಮಾರಿಗೆ ಕೆಎಸ್‍ಆರ್‍ಟಿಸಿ ಬಸ್ಸೊಂದು ಹುಬ್ಬಳ್ಳಿಯಿಂದ ಕಾರವಾರಕ್ಕೆ ಹೊರಟಿತ್ತು. ಈ ಬಸ್ಸಿನಲ್ಲಿ 70 ಮಂದಿ ಪ್ರಯಾಣಿಸುತ್ತಿದ್ದರು. ಆದರೆ ಬಸ್ ಅಂಕೋಲಾದಿಂದ ಹೊರಟು ಬಾಳೆಗುಳಿ ಕ್ರಾಸ್ ತಲುಪುತ್ತಿದ್ದಂತೆಯೇ ತಾಂತ್ರಿಕ ದೋಷದಿಂದಾಗಿ ಬಸ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದೇ ವೇಳೆ ಅದೇ ಮಾರ್ಗದಲ್ಲಿ ಅಂಕೋಲಾ ನಿವಾಸಿ ರಾಘವೇಂದ್ರ ಅವರು ಕೂಡಾ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದರು.

ಬೈಕ್ ರೈಡ್ ಮಾಡುತ್ತಿದ್ದಂತೆಯೇ ರಾಘವೇಂದ್ರ ಅವರಿಗೆ ಬಸ್‍ನಲ್ಲಿ ಬೆಂಕಿ ಕಾಣಿಸಿದೆ. ತಕ್ಷಣ ಅವರು ಅದನ್ನು ಬಸ್‍ನಲ್ಲಿದ್ದವರಿಗೆ ತಿಳಿಸುವ ಯತ್ನ ಮಾಡಿದ್ದಾರೆ. ಆದರೆ ಇದ್ಯಾವುದರ ಪರಿವೆಯೇ ಇಲ್ಲದ ಬಸ್ ಚಾಲಕ ತನ್ನ ಪಾಡಿಗೆ ತಾನು ಬಸ್ ಚಲಾಯಿಸುತ್ತಿದ್ದರು. ಕೊನೆಗೆ ಸುಮಾರು 1 ಕಿಲೋ ಮೀಟರ್ ದೂರ ಕ್ರಮಿಸಿದ ಬಳಿಕ ಬೈಕ್ ಪ್ರಯಾಣಿಕ ರಾಘವೇಂದ್ರ ಅವರು ಬಸ್ಸಿನ ಸಮೀಪ ಬಂದಿದ್ದಾರೆ. ಅದೇ ವೇಳೆಗೆ ಬಸ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಚಾಲಕ ಬಸ್ಸನ್ನು ರಸ್ತೆ ಮಧ್ಯದಲ್ಲೇ ನಿಲ್ಲಿಸಿದ್ದಾರೆ. ತಕ್ಷಣ ಎಚ್ಚೆತ್ತ ಪ್ರಯಾಣಿಕರು ಬಸ್‍ನಿಂದ ಜೀವಭಯದಿಂದ ಬಸ್‍ನಿಂದ ಹೊರಬಂದಿದ್ದಾರೆ. ಬೆಂಕಿ ತಗುಲಿದ ಬಸ್ ನಿಲ್ಲುತ್ತಿದ್ದಂತೆಯೇ ಸ್ಥಳೀಯರು ತಕ್ಷಣ ನೀರನ್ನು ತಂದು ಬೆಂಕಿಯನ್ನು ಆರಿಸಿದ್ದಾರೆ. ಇನ್ನೊಂದರ್ಧ ಕಿಲೋ ಮೀಟರ್ ಬಸ್ ಹೋಗಿದ್ದರೂ ಬಸ್‍ನಿಂದ ಯಾರೂ ಇಳಿಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಬಸ್ ಚಾಲಕ ಘಟನೆ ಬಗ್ಗೆ ವಿವರಿಸಿದ್ದಾರೆ.

ಈ ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡ ಪ್ರತ್ಯಕ್ಷದರ್ಶಿ ರಾಘವೇಂದ್ರ, ಬಸ್‍ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ನಾನು ಬಸ್ಸಿಗೆ ಕೈ ಮಾಡಿ ನಿಲ್ಲಿಸುವಂತೆ ಸನ್ನೆ ಮಾಡಿದೆ. ಆದರೆ ಇದು ಚಾಲಕನಿಗೆ ಗೊತ್ತಾಗಲೇ ಇಲ್ಲ. ಹೀಗಾಗಿ ಚಾಲಕ ಬಸ್ ಚಲಾಯಿಸುತ್ತಲೇ ಇದ್ದರು. ಹೀಗಾಗಿ ನಾನು ಬೈಕ್‍ನಲ್ಲಿ ವೇಗವಾಗಿ ಹಿಂಬಾಲಿಸಿಕೊಂಡು ಬಂದಿದ್ದೇನೆ ಎಂದು ಹೇಳಿದರು.

ಹುಬ್ಬಳ್ಳಿಯಿಂದ ಹೊರಟ ಬಸ್ ಅಂಕೋಲಾದಿಂದ ಕಾರವಾರಕ್ಕೆ ಹೊರಟಿತ್ತು. ಇದೇ ವೇಳೆ ಬಸ್‍ನಲ್ಲಿದ್ದ ಲೈಟ್ ಆಫ್ ಆಗಿದೆ. ತಕ್ಷಣ ನಾನು ಕಂಡಕ್ಟರ್ ಗೆ ಯಾಕೆ ಲೈಟ್ ಆಫ್ ಆಯ್ತು ಎಂದು ಕೇಳಿದೆ. ಆದರೆ ಆ ಕ್ಷಣದವರೆಗೆ ನನಗೆ ಯಾವುದೇ ಸುಟ್ಟ ವಾಸನೆಗಳೂ ಬಂದಿರಲಿಲ್ಲ. ಹೀಗಾಗಿ ಬೆಂಕಿ ತಗುಲಿದ್ದು ನನಗೆ ಗೊತ್ತಾಗಲಿಲ್ಲ ಎಂದು ಚಾಲಕ ಸಂಕಣ್ಣ ಹೇಳಿದ್ದಾರೆ. ಇದಾಗಿ ಕೆಲವೇ ನಿಮಿಷಗಳಲ್ಲಿ ಬಸ್‍ನ ಕೆಳಭಾಗದಿಂದ ಬೆಂಕಿ ಬಸ್‍ನೊಳಗೆ ಪ್ರವೇಶಿಸಿತು. ತಕ್ಷಣ ನಾನು ಬಸ್ ನಿಲ್ಲಿಸಿದೆ. ಊರವರೆಲ್ಲಾ ಬಂದು ನೀರು ಹಾಕಿ ಬೆಂಕಿ ನಂದಿಸಿದರು. ಇಲ್ಲಿ ಬಸ್ ನಿಲ್ಲಿಸದಿದ್ದರೆ ಭಾರೀ ಅನಾಹುತ ನಡೆಯುತ್ತಿತ್ತು ಎಂದು ಹೇಳಿದ್ದಾರೆ.

ಒಂದು ವೇಳೆ ರಾಘವೇಂದ್ರ ಅವರು ಬೆಂಕಿಯನ್ನು ನೋಡಿ ಬಸ್ ತಡೆಯದಿದ್ದರೇ ಬಸ್‍ನ ಬ್ಯಾಟರಿ ಹಾಗೂ ಇಂಧನದ ಟ್ಯಾಂಕ್‍ಗೆ ಬೆಂಕಿ ತಗುಲಿ ಭಾರೀ ಅನಾಹುತ ಸಂಭವಿಸುತ್ತಿತ್ತು. ರಾಘವೇಂದ್ರ ಅವರ ಸಮಯ ಪ್ರಜ್ಞೆಯಿಂದ ದೊಡ್ಡ ದುರಂತ ತಪ್ಪಿದೆ. ಬಸ್‍ನಲ್ಲಿದ್ದ ಪ್ರಯಾಣಿಕರೆಲ್ಲಾ ಬಸ್ ಹಿಂಬಾಲಿಸಿಕೊಂಡು ಬಂದ ರಾಘವೇಂದ್ರ ಅವರಿಂದಾಗಿ ನಮ್ಮ ಜೀವ ಉಳಿಯಿತು ಎಂದು ಆತಂಕದಿಂದಲೇ ಮಾತನಾಡುತ್ತಿದ್ದ ದೃಶ್ಯವೂ ಇದೇ ವೇಳೆ ಕಂಡು ಬಂತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *