ಮಂಡ್ಯ: ಶಬರಿಮಲೆಗೆ (Sabarimala) ತೆರಳುತ್ತಿದ್ದ ಮಂಡ್ಯ (Mandya) ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಯಾಲದಹಳ್ಳಿ ಕೊಪ್ಪಲು ಗ್ರಾಮದ ಅಯ್ಯಪ್ಪ ಮಾಲಾಧಾರಿಗಳಿದ್ದ ಬಸ್ ಪಲ್ಟಿಯಾದ ಘಟನೆ ನಡೆದಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಮಾಲಾಧಾರಿಗಳು ಪಾರಾಗಿದ್ದಾರೆ.
ಯಾಲದಹಳ್ಳಿಕೊಪ್ಪಲು ಗ್ರಾಮದ 33 ಮಂದಿ ಅಯ್ಯಪ್ಪನ ಮಾಲೆ ಧರಿಸಿ ಸ್ವಾಮಿ ದರ್ಶನಕ್ಕೆ ಶಬರಿಮಲೆಗೆ ತೆರಳುತ್ತಿದ್ದರು. ಈ ವೇಳೆ ಕೇರಳದ (Kerala) ಏರಿಮಲೈ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಅದೃಷ್ಟವಶಾತ್ ಯಾವುದೇ ಅನಾಹುತವಿಲ್ಲದೇ ಬಸ್ನಲ್ಲಿದ್ದವರು ಪಾರಾಗಿದ್ದಾರೆ.
ಕೆಲ ಮಾಲಾಧಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನೂ ಘಟನಾ ಸ್ಥಳಕ್ಕೆ ಏರಿಮಲೈ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
18ನೇ ಮೆಟ್ಟಿಲು ಏರಲು ನೂಕುನುಗ್ಗಲು
ಇನ್ನೂ ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಮಂಡಲ ಪೂಜೆ ಆರಂಭವಾಗಿದೆ. ಕಳೆದ ಭಾನುವಾರ ಸಂಜೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ತೆರೆಯಲಾಗಿದ್ದು, ಮುಂದಿನ 2 ತಿಂಗಳು ಭಕ್ತರಿಗೆ ದರ್ಶನ ಲಭ್ಯವಾಗಲಿದೆ. ಈ ಬೆನ್ನಲ್ಲೇ ಶಬರಿಮಲೆನಲ್ಲಿ ಅಯ್ಯಪ್ಪನ ದರ್ಶನಕ್ಕೆ ಜನಸಾಗರವೇ ಹರಿದು ಬಂದಿದೆ.
ಒಂದೂವರೆ ದಿನದಲ್ಲಿ ಒಂದೂವರೆ ಲಕ್ಷ ಭಕ್ತರು ಅಯ್ಯಪ್ಪನ ದರ್ಶನ ಪಡೆದುಕೊಂಡಿದ್ದಾರೆ. ಆದರೆ, ಭಾರೀ ಜನಸ್ತೋಮದಿಂದಾಗಿ ಪಂಪಾದಿಂದ ಶಬರಿಮಲೆಗೆ ತಲುಪಲು 7 ಗಂಟೆಗಳು ಬೇಕಾಗಿದ್ದು ಎಲ್ಲಿ ನೋಡಿದ್ರೂ ಜನಜಂಗುಳಿ ಇದೆ. ಅದರಲ್ಲೂ 18ನೇ ಮೆಟ್ಟಿಲು ಹತ್ತಲು ಭಕ್ತರಲ್ಲಿ ನೂಕು ನುಗ್ಗಲು ಶುರುವಾಗಿದೆ. ಬೊಬ್ಬೊಬ್ಬರೂ ಬ್ಯಾರಿಕೇಡ್ ಹಾರಿ ಬರ್ತಿದ್ದಾರೆ. ಭಕ್ತರ ನಿಯಂತ್ರಣಕ್ಕೆ ಕೇರಳ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ. ಕೇಂದ್ರ ತಂಡ ಆಗಮಿಸಲು ಇನ್ನೆರಡು ದಿನ ಬೇಕಾಗಿದ್ದು ಭಕ್ತರನ್ನು ನಿಯಂತ್ರಿಸುವುದೇ ಹರಸಾಹಸವಾಗಿದೆ.
ಹೊಸ ವೈರಸ್ ಆತಂಕ
ಇದರ ನಡುವೆ ಕೇರಳದಲ್ಲಿ ಹೊಸ ವೈರಸ್ ಆತಂಕ ಹೆಚ್ಚಿಸಿದೆ. ಮೆದುಳು ತಿನ್ನುವ ಅಮಿಬಾ ಬಗ್ಗೆ ಎಚ್ಚರಿಕೆ ವಹಿಸುವಂತೆ ಅಯ್ಯಪ್ಪ ಭಕ್ತರಿಗೆ ಮಾರ್ಗಸೂಚಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಪುಣ್ಯನದಿಯಲ್ಲಿ ಸ್ನಾನ ಮಾಡುವಾಗ ಮೂಗಿಗೆ ನೀರು ಹೋಗದಂತೆ ಎಚ್ಚರ ವಹಿಸಿ, ಬಿಸಿ ನೀರನ್ನೇ ಸೇವಿಸಲು ಕೇರಳ ಸರ್ಕಾರ ಸಲಹೆ ನೀಡಿದೆ.ಈ ಮದ್ಯೆ, ಅಯ್ಯಪ್ಪನ ದರ್ಶನಕ್ಕೆ ಬರುತ್ತಿದ್ದ ಕೋಝಿಕ್ಕೋಡ್ನ 60 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.. ಪಂಪಾದಿಂದ ಅಪ್ಪಾಚಿಮೇಡು ತಲುಪಿದಾಗ ಕುಸಿದು ಬಿದ್ದ ಮಹಿಳೆ ಸಾವು ಕಂಡಿದ್ದಾರೆ.

