ಪತಿಯನ್ನು ಹತ್ಯೆಗೈದವರು ಈಗ ಸಮಾಧಿಯಾಗಿದ್ದಾರೆ – ಯೋಗಿಯನ್ನು ಹೊಗಳಿದ್ದಕ್ಕೆ ಪಕ್ಷದಿಂದಲೇ ಎಸ್‌ಪಿ ಶಾಸಕಿ ಉಚ್ಚಾಟನೆ

Public TV
4 Min Read

ಲಕ್ನೋ: ಉತ್ತರ ಪ್ರದೇಶದ (Uttar Pradesh) ಸಿಎಂ ಯೋಗಿ ಆದಿತ್ಯನಾಥ್‌ (Yogi Adityanath) ಅವರನ್ನು ಸದನದಲ್ಲೇ ಹೊಗಳಿದ್ದಕ್ಕೆ ಸಮಾಜವಾದಿ ಪಕ್ಷದ ಶಾಸಕಿ ಪೂಜಾ ಪಾಲ್ (Pooja Pal) ಅವರನ್ನು ಅಖಿಲೇಶ್‌ ಯಾದವ್‌ ಪಕ್ಷದಿಂದಲೇ ಹೊರಹಾಕಿದ್ದಾರೆ.

ನೀವು ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿದ್ದೀರಿ. ಎಚ್ಚರಿಕೆ ನೀಡಿದ ನಂತರವೂ ನೀವು ಈ ಚಟುವಟಿಕೆಗಳನ್ನು ಮುಂದುವರಿಸಿದ್ದೀರಿ. ನೀವು ಮಾಡಿದ ಕೆಲಸ ಪಕ್ಷ ವಿರೋಧಿ ಮತ್ತು ಗಂಭೀರ ಅಶಿಸ್ತಿನ ಕೃತ್ಯವಾಗಿದೆ. ಆದ್ದರಿಂದ ನಿಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಮಾಜವಾದಿ ಪಕ್ಷದಿಂದ (SP) ಉಚ್ಚಾಟಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಪಕ್ಷದಿಂದ ಉಚ್ಚಾಟಿಸಿದ ಬಳಿಕವೂ ಪೂಜಾ ಪಾಲ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಯೋಗಿ ಸರ್ಕಾರ ಬಂದ ನಂತರ ರಾಜ್ಯದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಣೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಯಾಗ್‌ರಾಜ್‌ನಲ್ಲಿ ನನಗಿಂತ ಹೆಚ್ಚು ನೋವನ್ನು ಅನುಭವಿಸಿದ ಮಹಿಳೆಯರ ಧ್ವನಿಯನ್ನು ನೀವು ಕೇಳಲು ಸಾಧ್ಯವಾಗದಿರಬಹುದು. ಆದರೆ ನಾನು ಅವರ ಧ್ವನಿ. ನನ್ನನ್ನು ಶಾಸಕಿಯಾಗಿ ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಲಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ತಾಯಂದಿರು ಮತ್ತು ಸಹೋದರಿಯರ ಧ್ವನಿ ನಾನು. ಪ್ರಯಾಗ್‌ರಾಜ್‌ನಲ್ಲಿರುವ ಪೂಜಾ ಪಾಲ್‌ಗೆ ಮಾತ್ರವಲ್ಲದೆ ಅತಿಕ್ ಅಹ್ಮದ್‌ನಿಂದ ತೊಂದರೆಗೊಳಗಾದ ಎಲ್ಲಾ ಜನರಿಗೆ ಮುಖ್ಯಮಂತ್ರಿಗಳು ನ್ಯಾಯ ಒದಗಿಸಿದ್ದಾರೆ. ನಾನು ಪಕ್ಷದಲ್ಲಿ ಇದ್ದರೂ ಮೊದಲ ದಿನದಿಂದಲೇ ಇದನ್ನೇ ಹೇಳುತ್ತಿದ್ದೇನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಗ್ಯಾಂಗ್‌ಸ್ಟರ್ಅತೀಕ್ಅಹ್ಮದ್ತಲೆಗೆ 1, ದೇಹಕ್ಕೆ 8 ಗುಂಡೇಟು

 

ಪೂಜಾ ಪಾಲ್ ಯಾರು?
ಪೂಜಾ ಪಾಲ್ ಅಲಹಾಬಾದ್ ನಗರದ ಪಶ್ಚಿಮ ಕ್ಷೇತ್ರದ ಬಿಎಸ್‌ಪಿ ಶಾಸಕ ರಾಜು ಪಾಲ್ ಅವರ ಪತ್ನಿ. 2005 ರಲ್ಲಿ ಪೂಜಾ ಪಾಲ್ ಮದುವೆಯಾದ 10 ದಿನದಲ್ಲೇ ರಾಜು ಪಾಲ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಮಾಫಿಯಾ ಡಾನ್ ಅತಿಕ್ ಅಹ್ಮದ್ (Atiq Ahmed) ಸಹೋದರ ಅಶ್ರಫ್ ಮೇಲೆ ಈ ಹತ್ಯೆ ಮಾಡಿದ ಆರೋಪ ಬಂದಿತ್ತು. ನಂತರ ಈ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಅತಿಕ್ ಅಹ್ಮದ್ ಸಹೋದರ ಖಾಲಿದ್ ಅಜೀಮ್ ವಿರುದ್ಧ ಬಿಎಸ್‌ಪಿಯಿಂದ ಪೂಜಾ ಪಾಲ್ ಸ್ಪರ್ಧಿಸಿದ್ದರು. ಆದರೆ ಈ ಚುನಾವಣೆಯಲ್ಲಿ ಪೂಜಾ ಸೋತಿದ್ದರು. ನಂತರ 2007 ಮತ್ತು 2012 ರ ಚುನಾವಣೆಯಲ್ಲಿ ಪೂಜಾ ಪಾಲ್ ಈ ಕ್ಷೇತ್ರದಿಂದ ಜಯಗಳಿಸಿದ್ದರು.

ಈ ಮಧ್ಯೆ ಬಿಜೆಪಿ ನಾಯಕ ಮತ್ತು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರನ್ನು ಭೇಟಿಯಾಗಿದ್ದಕ್ಕೆ ಫೆಬ್ರವರಿ 2018 ರಲ್ಲಿ ಬಿಎಸ್‌ಪಿಯಿಂದ ಉಚ್ಚಾಟಿಸಲಾಗಿತ್ತು. 2019 ರಲ್ಲಿ ಸಮಾಜವಾದಿ ಪಕ್ಷವನ್ನು ಸೇರಿದ್ದ ಪೂಜಾ ಪಾಲ್ ಕೌಶಂಬಿ ಜಿಲ್ಲೆಯ ಚೈಲ್ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕಿಯಾಗಿ ಆಯ್ಕೆಯಾಗಿದ್ದರು.

ಪೂಜಾ ಪಾಲ್‌ ಹೇಳಿದ್ದೇನು?
ನನ್ನ ಪತಿಯನ್ನು ಹತ್ಯೆ ಮಾಡಿದವರು ಯಾರು ಎನ್ನುವುದು ಎಲ್ಲರಿಗೂ ಗೊತ್ತಿತ್ತು. ಯಾರಿಂದಲೂ ನ್ಯಾಯ ಸಿಗದೇ ಇದ್ದಾಗ ನನ್ನ ಮಾತು ಕೇಳಿ ನನಗೆ ನ್ಯಾಯ ಒದಗಿಸಿದ್ದಕ್ಕೆ ಯೋಗಿ ಆದಿತ್ಯನಾಥ್‌ ಅವರಿಗೆ ಧನ್ಯವಾದಗಳು. ಅಪರಾಧಿಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಗಳನ್ನು ತರುವ ಮೂಲಕ ಮುಖ್ಯಮಂತ್ರಿ ಪ್ರಯಾಗ್‌ರಾಜ್‌ನಲ್ಲಿ ನನ್ನಂತಹ ಅನೇಕ ಇತರ ಮಹಿಳೆಯರಿಗೆ ನ್ಯಾಯ ಒದಗಿಸಿದ್ದಾರೆ. ಇಂದು ಇಡೀ ರಾಜ್ಯವೇ ಸಿಎಂ ಅವರನ್ನು ವಿಶ್ವಾಸದಿಂದ ನೋಡುತ್ತಿದೆ. ಮುಖ್ಯಮಂತ್ರಿಗಳು ನನ್ನ ಪತಿಯ ಕೊಲೆಗಾರ ಅತಿಕ್ ಅಹ್ಮದ್‌ನನ್ನು ಸಮಾಧಿ ಮಾಡಿದ್ದಾರೆ ಎಂದು ಶ್ಲಾಘಿಸಿದ್ದರು.

ಗುಂಡಿಕ್ಕಿ ಹತ್ಯೆ:
ರಾಜು ಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಅವರನ್ನು ಫೆಬ್ರವರಿ 2023 ರಲ್ಲಿ ಪ್ರಯಾಗ್‌ರಾಜ್‌ನ ಸುಲೇಮ್ ಸರಾಯ್ ಪ್ರದೇಶದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಈ ಪ್ರಕರಣದ ಪ್ರಮುಖ ಆರೋಪಿಗಳಾದ ಅತಿಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಅಹ್ಮದ್‌ನನ್ನು ಪೊಲೀಸರು ಬಂಧಿಸಿದ್ದರು. ಏಪ್ರಿಲ್ 15, 2023 ರಂದು ಇಬ್ಬರನ್ನು ಪ್ರಯಾಗ್‌ರಾಜ್‌ನಲ್ಲಿ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಪತ್ರಕರ್ತರಂತೆ ನಟಿಸಿದ್ದ ಇಬ್ಬರು ಇವರ ಮೇಲೆ ಗುಂಡಿನ ದಾಳಿ ನಡೆಸಿ ಅಣ್ಣ, ತಮ್ಮನನ್ನು ಹತ್ಯೆ ಮಾಡಿದ್ದರು.

Share This Article