ಮುಂಬೈಗೆ ಮರಳಿದ ಬುಮ್ರಾ – ಆರ್‌ಸಿಬಿಗೆ ಶುರುವಾಯ್ತು ಟೆನ್ಶನ್‌

Public TV
2 Min Read

ಮುಂಬೈ: ಗಾಯದ ಸಮಸ್ಯೆಯಿಂದ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದ ಯಾರ್ಕರ್‌ ಸ್ಪೆಷಲಿಸ್ಟ್‌ ಜಸ್ಪ್ರೀತ್‌ ಬುಮ್ರಾ (Jasprit Bumrah) ಮುಂಬೈ ಇಂಡಿಯನ್ಸ್‌ ತಂಡಕ್ಕೆ ಮರಳಿದ್ದಾರೆ. ಬುಮ್ರಾ ಆಗಮನದ ಸಂತಸ ಸುದ್ದಿಯನ್ನು ಮುಂಬೈ ಇಂಡಿಯನ್ಸ್‌ (Mumbai Indians) ತಂಡ ಖಚಿತಪಡಿಸಿದ್ದು, ತನ್ನ ಎಕ್ಸ್‌ ಖಾತೆಯಲ್ಲಿ ʻThe King of the jungle is back in his kingdomʼ ಎಂದು ಮಾಹಿತಿ ಹಂಚಿಕೊಂಡಿದೆ.

ಕಳೆದ ವರ್ಷ ಸಿಡ್ನಿಯಲ್ಲಿ ಆಸ್ಪ್ರೇಲಿಯಾ ವಿರುದ್ಧ ನಡೆದ ಬಾರ್ಡರ್‌ ಗವಾಸ್ಕರ್‌ ಟ್ರೋಫಿ 5ನೇ ಟೆಸ್ಟ್‌ನಲ್ಲಿ ಗಾಯಗೊಂಡಿದ್ದ ಬುಮ್ರಾ, ಆಸೀಸ್‌ನ ದ್ವಿತೀಯ ಇನಿಂಗ್ಸ್‌ ವೇಳೆ ಬೌಲಿಂಗ್‌ ಮಾಡಿರಲಿಲ್ಲ. ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಒಟ್ಟು 32 ವಿಕೆಟ್‌ ಪಡೆದ ನಂತರ ಬುಮ್ರಾ, ಸ್ಪರ್ಧೆಯಿಂದ ಹೊರಗಿದ್ದರು. ಹೀಗಾಗಿ ಚಾಂಪಿಯನ್ಸ್‌ ಟ್ರೋಫಿಯಲ್ಲೂ ಭಾಗವಹಿಸಿರಲಿಲ್ಲ. ಇದೀಗ ಬುಮ್ರಾ ಮುಂಬೈ ತಂಡಕ್ಕೆ ವಾಪಸ್‌ ಆಗಿದ್ದಾರೆ. ನಾಳೆ ಆರ್‌ಸಿಬಿ ವಿರುದ್ಧ ನಡೆಯುವ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಫ್ರಾಂಚೈಸಿ ಮೂಲಗಳು ತಿಳಿಸಿವೆ.

ಜಸ್ಪ್ರೀತ್‌ ಬುಮ್ರಾ ಪುನರಾಗಮನದಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ಆನೆ ಬಲ ಬಂದಂತಾಗಿದ್ದು, ಅಭಿಮಾನಿಗಳ ಖುಷಿ ಹೆಚ್ಚಿಸಿದೆ. ಬುಮ್ರಾ ಬಿಸಿಸಿಐ (BCCI) ತರಬೇತಿ ಕೇಂದ್ರದಲ್ಲಿ ಚೇತರಿಸಿಕೊಳ್ಳುತ್ತಿದರು. ಹೀಗಾಗಿ ಹಾಲಿ ಆವೃತ್ತಿಯ ಆರಂಭಿಕ ಪಂದ್ಯಗಳಲ್ಲಿ ಆಡಿರಲಿಲ್ಲ. ಅವರ ಮರಳುವಿಕೆಗಾಗಿ ಹಾರ್ದಿಕ್‌ ಪಾಂಡ್ಯ ಪಡೆ ಕಾತರದಿಂದ ಕಾಯುತ್ತಿತ್ತು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ಟಾಸ್ ಸಂದರ್ಭದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಮಾತನಾಡುತ್ತಾ, ‘ಜಸ್ಪ್ರೀತ್‌ ಬುಮ್ರಾ ಬೇಗನೆ ಹಿಂತಿರುಗಬೇಕುʼ ಎಂದು ಹೇಳಿದ್ದರು. ಅವರ ಆ ಮಾತು ಈಗ ನಿಜವಾಗಿದೆ.

ಬುಮ್ರಾ ಮರಳಿ ಬಂದಿರುವುದು ಮುಂಬೈ ಇಂಡಿಯನ್ಸ್‌ಗೆ ಸಹಾಯವಾಗಲಿದೆ. ಈ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಇದೀಗ ಬುಮ್ರಾ ಆಗಮನ ತಂಡದ ಬೌಲಿಂಗ್‌ ವಿಭಾಗವನ್ನು ಇನ್ನಷ್ಟು ಬಲಪಡಿಸಲಿದೆ. ಡೆತ್ ಓವರ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿರುವ ಬುಮ್ರಾ, ಕಠಿಣ ಸಂದರ್ಭಗಳಲ್ಲಿ ತನ್ನು ಬೌಲಿಂಗ್‌ ಮೂಲಕವೇ ತಂಡಕ್ಕೆ ಜಯ ತಂದಕೊಡುವ ಸಾಮರ್ಥ್ಯ ಹೊಂದಿದ್ದಾರೆ.

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕಣಕ್ಕೆ:
ಮುಂಬೈ ಇಂಡಿಯನ್ಸ್ ತಂಡ ಸೋಮವಾರ (ಏ.7) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ತವರು ವಾಂಖೆಡೆ ಮೈದಾನದಲ್ಲಿ ಎದುರಿಸಲಿದೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ ಪ್ಲೇಯಿಂಗ್‌-11 ಘೋಷಣೆಯಾದ ಬಳಿಕ ಖಚಿತಗೊಳ್ಳಲಿದೆ. ಒಂದು ವೇಳೆ ಬುಮ್ರಾ ಕಣಕ್ಕಿಳಿದ್ರೆ ಆರ್‌ಸಿಬಿಗೆ ಟಫ್‌ ಫೈಟ್‌ ಎದುರಾಗುವುದು ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ.

ಐಪಿಎಲ್ ಇತಿಹಾಸದಲ್ಲಿ ಲಸಿತ್ ಮಾಲಿಂಗ ನಂತರ ಮುಂಬೈ ಇಂಡಿಯನ್ಸ್ ಪರ ಅತಿ ಹೆಚ್ಚು ವಿಕೆಟ್ ಪಡೆದ 2ನೇ ಬೌಲರ್‌ ಜಸ್ಪ್ರೀತ್ ಬುಮ್ರಾ.‌ 2013ರಲ್ಲಿ MI ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಬುಮ್ರಾ, 133 ಪಂದ್ಯಗಳಲ್ಲಿ 165 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Share This Article