ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ್ರೆ ಬುಲೆಟ್ ರೈಲು ಯೋಜನೆ ರದ್ದು

Public TV
2 Min Read

ಮುಂಬೈ: ಶಿವಸೇನೆ, ಎನ್‍ಸಿಪಿ, ಕಾಂಗ್ರೆಸ್ ನೇತೃತ್ವದ ಸರ್ಕಾರ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದರೆ ಪ್ರಧಾನಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷೆಯ ಬುಲೆಟ್ ರೈಲು ಯೋಜನೆ ರದ್ದಾಗುವ ಸಾಧ್ಯತೆಯಿದೆ.

ಈ ಸಂಬಂಧ ಕಾಂಗ್ರೆಸ್ ನಾಯಕರೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಯೋಜನೆಯನ್ನು ರದ್ದುಗೊಳಿಸುವ ತೀರ್ಮಾನವನ್ನು ತಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಬುಲೆಟ್ ರೈಲು ಯೋಜನೆಗೆ ಮಹಾರಾಷ್ಟ್ರ ಸರ್ಕಾರ ಯಾವುದೇ ಹಣ ನೀಡುವುದಿಲ್ಲ. ಯೋಜನೆ ಪೂರ್ಣವಾಗಬೇಕಾದರೆ ಕೇಂದ್ರ ಸರ್ಕಾರವೇ ಎಲ್ಲ ಹಣವನ್ನು ಒದಗಿಸಲಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ – ಇಲ್ಲಿಯವರೆಗೆ ಬುಲೆಟ್ ರೈಲು ಅಪಘಾತವಾಗಿಲ್ಲ ಯಾಕೆ?

ಎನ್‍ಸಿಪಿ ನಾಯಕರೊಬ್ಬರು ಪ್ರತಿಕ್ರಿಯಿಸಿ, ಸರ್ಕಾರ ರಚನೆ ಸಂಬಂಧ ಮೂರು ಪಕ್ಷದ ನಾಯಕರು ನಡೆಸಿದ ಮೊದಲ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. 1.8 ಲಕ್ಷ ಕೋಟಿ ರೂ. ವೆಚ್ಚದ ಈ ಯೋಜನೆಗೆ ಮಹಾರಾಷ್ಟ್ರ ಸರ್ಕಾರ 5 ಸಾವಿರ ಕೋಟಿ ರೂ. ಹಣವನ್ನು ನೀಡಬೇಕಿತ್ತು. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಯೋಜನೆಗೆ ಮೀಸಲಿಟ್ಟ ಹಣವನ್ನು ಜನರ ಕಲ್ಯಾಣಕ್ಕೆ ಸಂಬಂಧಿಸಿದ ಇತರೇ ಯೋಜನೆಗಳಿಗೆ ಬಳಕೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

2022ಕ್ಕೆ ಸ್ವತಂತ್ರ ಸಿಕ್ಕಿ 75 ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಆಗಸ್ಟ್ 15 ರಂದು ಯೋಜನೆ ಲೋಕಾರ್ಪಣೆ ಮಾಡಲು ಭಾರತ ಪ್ರಯತ್ನ ನಡೆಸುತ್ತಿದೆ. ಭಾರತ ಪಡೆದುಕೊಳ್ಳುವ ಸಾಲಕ್ಕೆ ಜಪಾನ್ 50 ವರ್ಷಕ್ಕೆ 0.1% ಬಡ್ಡಿ ವಿಧಿಸಿದೆ. ಮೇಕ್ ಇನ್ ಇಂಡಿಯಾ ಆಶಯದ ಸಫಲತೆಗೆ ಈ ಯೋಜನೆ ಬಹಳ ಮುಖ್ಯವಾಗಿದ್ದು ತ್ವರಿತಗತಿಯಲ್ಲಿ ಯೋಜನೆಯನ್ನು ಮುಗಿಸುವುದರಲ್ಲಿ ಕೇಂದ್ರ ಸರ್ಕಾರ ಉತ್ಸುಕವಾಗಿದೆ. ಆದರೆ ರೈತರು ಈ ಯೋಜನೆ ವಿರುದ್ಧ ಕೋರ್ಟ್ ಮೊರೆ ಹೋದ ಹಿನ್ನೆಲೆಯಲ್ಲಿ ಕೆಲ ಸಮಯ ಅಡ್ಡಿಯಾಗಿತ್ತು. ಅಹ್ಮದಾಬಾದ್-ಮುಂಬೈ ನಡುವೆ ಬುಲೆಟ್ ರೈಲು ಒಟ್ಟು 508 ಕಿ.ಮೀ. ಸಂಚರಿಸಲಿದ್ದು, 12 ನಿಲ್ದಾಣಗಳನ್ನು ನಿರ್ಮಿಸಲಾಗುತ್ತದೆ. ಇದನ್ನೂ ಓದಿ – ಡೆಡ್‍ಲೈನ್ ಒಳಗೆ ಬುಲೆಟ್ ರೈಲು ಯೋಜನೆ ಕಂಪ್ಲೀಟ್ ಆಗೋದು ಡೌಟ್!

ಮುಂಬೈ – ಅಹ್ಮದಾಬಾದ್ ಮಧ್ಯೆ ಗಂಟೆಗೆ 320 ಕಿ.ಮೀ ವೇಗದಲ್ಲಿ ರೈಲು ಸಂಚರಿಸಲಿದೆ. ಜಪಾನ್ ನೀಡುತ್ತಿರುವ 88 ಸಾವಿರ ಕೋಟಿ ರೂ. ಸಾಲವನ್ನು ಮರುಪಾವತಿ ಮಾಡಬೇಕಾದರೆ ಪ್ರತಿ ದಿನ 100 ಟ್ರಿಪ್ ರೈಲು ಸಂಚರಿಸಬೇಕು ಅಥವಾ ದಿನಕ್ಕೆ 88 ಸಾವಿರದಿಂದ 1.18 ಲಕ್ಷ ಪ್ರಯಾಣಿಕರು ಸಂಚರಿಸಬೇಕು ಎಂದು ಈ ಹಿಂದೆ ಈ ಯೋಜನೆ ಬಗ್ಗೆ ಅಧ್ಯಯನ ನಡೆಸಿದ್ದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಅಹಮದಾಬಾದ್ ರೈಲ್ವೇ ಇಲಾಖೆಗೆ ವರದಿ ನೀಡಿತ್ತು. ಅಷ್ಟೇ ಅಲ್ಲದೇ 300 ಕಿ.ಮೀ ಪ್ರಯಾಣಕ್ಕೆ ಒಂದು ಟಿಕೆಟ್‍ಗೆ 1500 ರೂ ದರವನ್ನು ನಿಗದಿ ಮಾಡಬೇಕೆಂಬ ಅಂಶವನ್ನು ವರದಿಯಲ್ಲಿ ತಿಳಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *