ಬುಲಂದಶಹರ್ ಹಿಂಸಾಚಾರ ಪ್ರಕರಣ: ಗುಂಡೇಟಿನಿಂದ ಪೊಲೀಸ್ ಅಧಿಕಾರಿಯ ಸಾವು

Public TV
2 Min Read

ಲಕ್ನೋ: ಉತ್ತರಪ್ರದೇಶದ ಬುಲಂದಶಹರ್ ನಲ್ಲಿ ನಡೆದ ಹಿಂಸಾಚಾರ ಗುಂಡೇಟು ತಗುಲಿ ಪೊಲೀಸ್ ಅಧಿಕಾರಿ ಮೃತಪಟ್ಟಿರುವ ಬಗ್ಗೆ ಮರಣೋತ್ತರ ವರದಿ ಬಂದಿದೆ.

ಸೋಮವಾರ ಬುಲಂದಶಹರ್ ನಲ್ಲಿ ಗೋ ಹತ್ಯೆ ಸಂಬಂಧ ಆರಂಭವಾದ ಪ್ರತಿಭಟನೆ ವಿಕೋಪಕ್ಕೆ ತಿರುಗಿತ್ತು. ಪರಿಣಾಮ ಎಸ್‍ಐ ಸುಭೋದ್ ಕುಮಾರ್ ಸೇರಿದಂತೆ ಇಬ್ಬರ ಹತ್ಯೆಯಾಗಿತ್ತು. ಮಂಗಳವಾರ ಮೃತ ಪೊಲೀಸ್ ಅಧಿಕಾರಿಯ ಮರಣೋತ್ತರ ವರದಿ ಬಂದಿದ್ದು, ವರದಿಯಲ್ಲಿ ತಲೆಗೆ 3.2ಎಂಎಂ ಬೋರ್ ಬುಲೆಟ್ ನಿಂದಾಗ ಉಂಟಾದ ಗಂಭೀರ ಗಾಯದಿಂದ ಸುಭೋಧ್ ಸಾವನ್ನಪ್ಪಿರುವ ಬಗ್ಗೆ ಉಲ್ಲೇಖವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮೀರತ್ ನ ಹೆಚ್ಚುವರಿ ಪೊಲೀಸ್ ನಿರ್ದೇಶಕ ಪ್ರಶಾಂತ್ ಕುಮಾರ್, ಎಸ್‍ಐ ಸುಭೋಧ್ ಕುಮಾರ್ ಹತ್ಯೆ ಪ್ರಕರಣಕ್ಕೆ ಸಂಬಂಧ ಎಫ್‍ಐಆರ್ ದಾಖಲಾಗಿದ್ದು, ಈಗಾಗಲೇ ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಶೀಘ್ರವೇ ಮತ್ತಷ್ಟು ಆರೋಪಿಗಳನ್ನು ಬಂಧಿಸಲಾಗುತ್ತದೆ. ಯುಪಿ ಸರ್ಕಾರ ಮೃತಪಟ್ಟಿರುವ ಪೊಲೀಸ್ ಅಧಿಕಾರಿಗೆ 50 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಅವರ ಪತ್ನಿಗೆ ಪಿಂಚಣಿ ಹಾಗೂ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ಕೊಡುವುದಾಗಿ ಸರ್ಕಾರ ಭರವಸೆ ನೀಡಿದೆ ಎಂದು ಹೇಳಿದ್ದಾರೆ.

ಪ್ರಕರಣವನ್ನು ಈಗಾಗಲೇ ವಿಶೇಷ ತನಿಖಾ ತಂಡ(ಎಸ್‍ಐಟಿ)ಕ್ಕೆ ವಹಿಸಲಾಗಿದ್ದು, ಮೀರತ್ ಐಜಿ ನೇತೃತ್ವದಲ್ಲಿ ತಂಡವನ್ನು ರಚಿಸಿ ತನಿಖೆ ಆರಂಭಿಸಲಾಗಿದೆ. ಈ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಿದ್ದು, ಹಿಂಸಾಚಾರ ಹೇಗೆ ನಿರ್ಮಾಣವಾಯಿತು? ಪೊಲೀಸ್ ಅಧಿಕಾರಿಯ ಜೊತೆ ಎಷ್ಟು ಸಿಬ್ಬಂದಿಗಳಿದ್ದರು? ಎಷ್ಟು ಜನ ಸ್ಥಳದಿಂದ ಓಡಿ ಹೋಗಿದ್ದಾರೆನ್ನುವ ಮಾಹಿತಿಗಳನ್ನು ಕಲೆಹಾಕಲಿದೆ. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯ ವಿರುದ್ಧ ದೂರು ದಾಖಲಾಗಿದೆ ಎಂದು ತಿಳಿಸಿದರು.

ಏನಿದು ಪ್ರಕರಣ?
ಸೋಮವಾರ ಬುಲಂದ್‍ಶಹರ್ ಗ್ರಾಮದ ಹೊರವಲಯದಲ್ಲಿ ಪ್ರಾಣಿಯ ಪಳಿಯುಳಿಕೆ ಪತ್ತೆಯಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕೆಲ ಬಲಪಂಥಿಯ ಮುಖಂಡರು ಮತ್ತು ಗ್ರಾಮಸ್ಥರು ಸಯನಾ ರೋಡ್ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ರಸ್ತೆ ಸಂಚಾರ ಸುಗಮಗೊಳಿಸಲು ಪ್ರಯತ್ನಿಸಿದ್ದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ಆರಂಭವಾಗಿ, ಪ್ರತಿಭಟನೆ ಹಿಂಸಾರೂಪಕ್ಕೆ ತಿರಿಗಿತ್ತು. ಉದ್ರಿಕ್ತರು ಪೊಲೀಸ್ ಠಾಣೆ ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ಗಲಭೆಯಿಂದಾಗಿ ಪೊಲೀಸ್ ಅಧಿಕಾರಿ ಹಾಗೂ ಇಬ್ಬರು ಮೃತಪಟ್ಟಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *