ಬಿಜೆಪಿ ಶಾಲ್ ಹಾಕಿಕೊಂಡು ಮತಗಟ್ಟೆಗೆ ಬಂದ ಸಂಸದರಿಗೆ ಗೃಹ ಬಂಧನ

Public TV
1 Min Read

ಲಕ್ನೋ: ಬಿಜೆಪಿ ಚಿಹ್ನೆಯ ಶಾಲ್ ಹಾಕಿಕೊಂಡು ಮತಗಟ್ಟೆಗೆ ಆಗಮಿಸಿದ್ದ ಅಭ್ಯರ್ಥಿ, ಹಾಲಿ ಸಂಸದರನ್ನು ಚುನಾವಣಾ ಆಯೋಗದ ಅಧಿಕಾರಿಗಳು ಗೃಹಬಂಧನಲ್ಲಿ ಇರಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಬುಲಂದ್‍ಶಹರ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಹಾಲಿ ಸಂಸದ ಭೋಲಾ ಸಿಂಗ್ ಅವರು ಬಿಜೆಪಿ ಚಿಹ್ನೆ ಇರುವ ಕೇಸರಿ ಶಾಲ್ ಹಾಕಿಕೊಂಡು ಮತ ಚಲಾಯಿಸಲು ಮತಗಟ್ಟೆಗೆ ಆಗಮಿಸಿದ್ದರು. ಪಕ್ಷದ ಚಿಹ್ನೆಯೊಂದಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿರುವುದು ನೀತಿಸಂಹಿತೆ ಉಲ್ಲಂಘನೆಯಾಗಿತ್ತು. ಇದರಿಂದಾಗಿ ಚುನಾವಣಾ ಅಧಿಕಾರಿಗಳು ಕೆಲ ಹೊತ್ತು ಗೃಹ ಬಂಧನದಲ್ಲಿ ಇರುವಂತೆ ಸಂಸದರಿಗೆ ಆದೇಶಿಸಿದರು.

ಮತಗಟ್ಟೆಯಲ್ಲಿದ್ದ ಭದ್ರತಾ ಸಿಬ್ಬಂದಿ ಸಂಸದರನ್ನು ಕೆಲ ಹೊತ್ತು ಗೃಹ ಬಂಧನದಲ್ಲಿ ಇರಿಸಿದರು. ಸ್ಥಳದಲ್ಲಿದ್ದ ಕೆಲವರು ಈ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ನಂತರ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭೋಲಾ ಸಿಂಗ್ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಬಿಎಸ್‍ಪಿಯ ಪ್ರದೀಪ್ ಕುಮಾರ್ ಜಾದವ್ ಅವರ ವಿರುದ್ಧ 4,21,973 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು. ಈ ಬಾರಿ ಭೋಲಾ ಸಿಂಗ್ ಕಾಂಗ್ರೆಸ್ ಅಭ್ಯರ್ಥಿ ಬನ್ಸಿ ಲಾಲ್ ಪಹಾಡಿಯ ಮತ್ತು ಎಸ್‍ಪಿ – ಬಿಎಸ್‍ಪಿ ಮೈತ್ರಿ ಅಭ್ಯರ್ಥಿ ಯೋಗೇಶ್ ವರ್ಮ ಅವರ ವಿರುದ್ಧ ಕಣಕ್ಕೆ ಇಳಿದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *