ವಿಡಿಯೋ: ನೋಡ ನೋಡುತ್ತಿದ್ದಂತೆ ಕುಸಿದ 3 ಅಂತಸ್ತಿನ ಕಟ್ಟಡ

Public TV
1 Min Read

ಗುಂಟೂರು: ನೋಡ ನೋಡುತ್ತಿದ್ದಂತೆ 3 ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದ್ದು, ಜನರು ಬೆಚ್ಚಿ ಬಿದ್ದಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

ಈ ಕಟ್ಟಡ ನಂದಿವೇಲುಗು ರಸ್ತೆಯ ಮಣಿ ಹೋಟೆಲ್ ಸೆಂಟರ್ ನ ಸಮೀಪದಲ್ಲಿದೆ. ಈ ಕಟ್ಟಡ ನರಸಿಂಹ ರಾವ್ ಎಂಬವರ ಒಡೆತನದಲ್ಲಿದ್ದು, ಇದನ್ನು ನಿರ್ಮಿಸಿ ಸುಮಾರು 12 ವರ್ಷಗಳಾಗಿದೆ. ಗುಂಟೂರು ಮುನ್ಸಿಪಲ್ ಕಾರ್ಪೋರೇಷನ್ (ಜಿಎಂಸಿ) ಕಟ್ಟಡ ಸಮೀಪದಲ್ಲಿ ರಸ್ತೆಯನ್ನು ಅಗಲೀಕರಣದ ಕಾಮಗಾರಿಯನ್ನು ಒಂದು ತಿಂಗಳ ಹಿಂದೆಯೇ ಕೈಗೊಳ್ಳಲಾಗಿತ್ತು. ಅಷ್ಟೇ ಅಲ್ಲದೇ ಆ ಕಟ್ಟಡವನ್ನು ಉರುಳಿಸುವಂತೆ ಮಾಲೀಕರಿಗೂ ನೋಟಿಸ್ ಕಳುಹಿಲಾಗಿತ್ತು ಎಂದು ತಿಳಿದು ಬಂದಿದೆ.

ವಿಡಿಯೋದಲ್ಲಿ ಪಿಂಕ್ ಮತ್ತು ಗ್ರೀನ್ ಪೇಂಟ್ ಇರುವ ಕಟ್ಟಡ ಶನಿವಾರ ಸುಮಾರು 4.30 ಗಂಟೆಗೆ ಒಂದೇ ಸೆಕೆಂಡಿನಲ್ಲಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಸಮೀಪದಲ್ಲಿದ್ದ ಕೆಲವು ಸ್ಥಳೀಯರು ಅಸಹಾಯಕರಾಗಿ ನಿಂತು ನೋಡುತ್ತಿದ್ದಾರೆ. ಅದೃಷ್ಟವಶಾತ್ ಕಟ್ಟಡದಲ್ಲಿ ಇದ್ದ ಎಲ್ಲ ಜನರನ್ನು ಕೆಲವು ದಿನಗಳ ಹಿಂದೆಯಷ್ಟೇ ಬೇರೆಡೆ ಸ್ಥಳಾಂತರಿಸಲಾಗಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ.

ಕಟ್ಟಡದ ಕುಸಿತಕ್ಕೆ ಸ್ಥಳೀಯರು ಜಿಎಂಸಿ ನೇಮಿಸಿದ್ದ ಗುತ್ತಿಗೆದಾರರನ್ನು ಆರೋಪಿಸುತ್ತಿದ್ದಾರೆ. ಇನ್ನೂ ಘಟನೆ ನಡೆದ ಸ್ಥಳಕ್ಕೆ ಎಂಜಿಯರಿಂಗ್ ತಂಡವು ಭೇಟಿ ನೀಡಿ ಪರೀಶೀಲನೆ ಮಾಡಿದ್ದು, ಕಟ್ಟಡದ ಮಾಲೀಕರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಈ ಕಟ್ಟಡದ ಅಡಿಪಾಯ ಸುರಕ್ಷಿತವಾಗಿರಲಿಲ್ಲ ಆದ್ದರಿಂದ ಕುಸಿದಿದೆ ಎಂದು ಮುನ್ಸಿಪಲ್ ಕಮಿಷನರ್ ಸಿ. ಅನುರಾಧಾ ತಿಳಿಸಿದ್ದಾರೆ.

ಈ ಕಟ್ಟಡ ಕುಸಿತ ಪ್ರಕರಣ ಒಂದು ಕ್ಷಣ ಇಡೀ ನಗರವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಕಟ್ಟಡ ಕುಸಿಯುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

 

Share This Article
Leave a Comment

Leave a Reply

Your email address will not be published. Required fields are marked *