ಉತ್ತರ ಕರ್ನಾಟಕ ವಿರೋಧಿ ಸಿಎಂರಿಂದ ಅಭಿವೃದ್ಧಿ ನಿರೀಕ್ಷೆ ಹೇಗೆ ಸಾಧ್ಯ?

Public TV
1 Min Read

ಬಳ್ಳಾರಿ: ಉತ್ತರ ಕರ್ನಾಟಕ ಮಂದಿ ನನಗೆ ಮತ ಹಾಕಿಲ್ಲ ಎಂದು ಹೇಳಿದ್ದ ಸಿಎಂ ಅವರನ್ನು ಮುಂದಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆರೋಪಿಸಿದ್ದಾರೆ.

ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಶಾಂತ ಅವರ ಪರ ಪ್ರಚಾರ ನಡೆಸಲು ಆಗಮಿಸಿದ್ದ ಬಿಎಸ್‍ವೈ ಅವರು ಮಾಧ್ಯಮಗಳನ್ನು ಉದ್ದೇಶಿ ಮಾತನಾಡಿದ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮೈತ್ರಿ ಬಗ್ಗೆ ಕಿಡಿಕಾರಿದರು. ಮಾಜಿ ಸಿಎಂ ಸಿದ್ದರಾಮಯ್ಯ ದುರಾಡಳಿತದಿಂದಲೇ ಜನ ಕಾಂಗ್ರೆಸ್ ಪಕ್ಷವನ್ನು ವಿಧಾನಸಭಾ ಚುನಾವಣೆಯಲ್ಲಿ ತಿರಸ್ಕರಿಸಿದ್ದರು. ಆದರೆ ನಾನು ಸಿಎಂ ಆಗಿದ್ದ ವೇಳೆ, ಶ್ರೀರಾಮುಲು ಅವರು ಸಚಿವರಾಗಿದ್ದರು. ಆ ಸಮಯದಲ್ಲಿ ಬಳ್ಳಾರಿಗೆ ಬೇಕಾದ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಯಿತು. ಇದನ್ನು ತಿಳಿದಿರುವ ಬಳ್ಳಾರಿ ಜನತೆ ಈ ಚುನಾವಣೆ ಬಿಜೆಪಿಗೆ ಮತ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶ್ರೀರಾಮುಲುಗೆ ಭಾಷೆ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಶ್ರೀರಾಮುಲು ಮತ್ತು ಸಿದ್ದರಾಮಯ್ಯ ಅಕ್ಕ ಪಕ್ಕ ನಿಂತು ಒಂದೇ ವೇದಿಕೆ ಮೇಲೆ ಭಾಷಣ ಮಾಡಲಿ. ಆಗ ಯಾರಿಗೆ ಕನ್ನಡ ಭಾಷೆ ಬರುತ್ತದೆ ಎಂದು ತಿಳಿಯುತ್ತದೆ ಎಂದು ಸವಾಲು ಎಸೆದರು. ಅಲ್ಲದೇ ಬೆಂಗಳೂರಿನಲ್ಲಿ ಸರ್ಕಾರದ ವತಿಯಿಂದ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಸಿಎಂ, ಡಿಸಿಎಂ ಬೆಂಗಳೂರಿನಲ್ಲೇ ಇದ್ದರೂ ಕಾರ್ಯಕ್ರಮಕ್ಕೆ ಹೋಗದೆ ಅಪಮಾನ ಮಾಡಿದ್ದರು. ಅಲ್ಲದೇ ದೇವೇಗೌಡರಿಗೆ ಕೂಡಾ ವಾಲ್ಮೀಕಿ ಪ್ರಶಸ್ತಿ ಪಡೆಯದೆ ಪ್ರಶಸ್ತಿಗೆ ಅಪಮಾನ ಮಾಡಿದ್ದಾರೆ ಎಂದು ದೂರಿದರು.

ಸಮ್ಮಿಶ್ರ ಸರ್ಕಾರ ರಚನೆಯಾದ ಸಮಯದಿಂದ ಸಾಲಮನ್ನಾ ಮಾಡಲು ಪರದಾಟ ನಡೆಸಿದೆ. ಅಲ್ಲದೇ ಸಾಲಮನ್ನಾ ವಿಚಾರದಲ್ಲಿ ಕೈಲಾಗದವನು ಮೈ ಪರಚಿಕೊಂಡ ಎಂಬ ರೀತಿ ಕುಮಾರಸ್ವಾಮಿ ಅವರು ಪ್ರಧಾನಿ ಮೋದಿ ಕಡೆ ಬೊಟ್ಟು ಮಾಡುತ್ತಿದ್ದಾರೆ. ಆದರೆ ಅವರಿಗೆ ಸಾಲಮನ್ನಾ ಮಾಡಲು ಸರ್ಕಾರದಲ್ಲಿ ಹಣ ಕೊರತೆ ಇದೆ. ಅದ್ದರಿಂದ ರೈತರಿಗೆ ನೀಡಿದ ಸಾಲಮನ್ನಾ ಆಶ್ವಾಸನೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ವಿಮರ್ಶಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *