ಖರ್ಗೆ, ಪರಮೇಶ್ವರ್, ಸಿಎಂ ಮೂವರು ಒಂದೇ ಕಡೆ ಪ್ರಚಾರ ನಡೆಸಲಿ: ಸಂವಾದದಲ್ಲಿ ಬಿಎಸ್‍ವೈ ಸವಾಲು

Public TV
3 Min Read

ಬೆಂಗಳೂರು: 224 ಕ್ಷೇತ್ರಗಳನ್ನು ಸುತ್ತಿ ಬಂದಿದ್ದು, ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಏರಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜತೆ ಇಂದು ನಗರದ ಪ್ರೆಸ್ ಕ್ಲಬ್ ನಲ್ಲಿ ಸಂವಾದ ನಡೆಯಿತು.

ಅಂಬೇಡ್ಕರ್ ಜಯಂತಿಯಂದು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಅಧಿಕಾರ ಸ್ವೀಕಾರ ಮಾಡಿದೆ. ಸುಮಾರು 3 ಬಾರಿ ನಾನು ರಾಜ್ಯ ಸುತ್ತಿದ್ದೇನೆ. 224 ಕ್ಷೇತ್ರಗಳನ್ನು ಸುತ್ತಿ ಬಂದಿದ್ದೇನೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಮ್ಮಿಂದ 3 ಸರ್ವೇಗಳನ್ನು ಮಾಡಿಸಿದ್ದಾರೆ. ನಾನು ಕೊಟ್ಟ ಅಭ್ಯರ್ಥಿಗಳ ಲಿಸ್ಟ್ 95% ಭಾಗ ಕೂಡ ಒಂದೇ ಆಗಿತ್ತು. ಹಾಗಾಗಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲ ಆಗಲಿಲ್ಲ ಎಂದು ತಿಳಿಸಿದರು.

ಸಂವಾದಲ್ಲಿ ಬಿಎಸ್‍ವೈ ಹೇಳಿದ್ದು ಹೀಗೆ
ಎಲ್ಲರೂ ಒಂದೇ ಕಡೆ ಪ್ರಚಾರ ಮಾಡುವುದಕ್ಕಿಂತ ಬೇರೆ ಬೇರೆ ಕಡೆ ಮಾಡಬೇಕು ಅನ್ನೋ ಉದ್ದೇಶ ಇದೆ ಅಷ್ಟೇ. ರಾಜ್ಯವನ್ನ ಮಾದರಿ ರಾಜ್ಯವನ್ನಾಗಿ ಮಾಡಬೇಕೆಂಬ ಕನಸಿದೆ. ಇದೇ 17 ಕ್ಕೆ ನಾನೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ. ನನ್ನ ಜೀವನವನ್ನೇ ರೈತರಿಗಾಗಿ ಮುಡುಪಾಗಿಟ್ಟವನು ನಾನು. ಈಗ ಬೆಂಗಳೂರು ರೇಪ್, ಗಾರ್ಬೇಜ್ ಸಿಟಿ ಆಗಿದೆ. ಎಲ್ಲವನ್ನು ಸರಿ ಮಾಡುತ್ತೇವೆ.

ಬೆಂಗಳೂರನ್ನ ಮಾದರಿ ಸಿಟಿಯನ್ನಾಗಿ ಮಾಡುತ್ತೇನೆ. ನಾನು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ತಕ್ಷಣವೇ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿರುವ ರೈತರ ಒಂದು ಲಕ್ಷ ಹಾಗೂ ಸಹಕಾರಿ ಬ್ಯಾಂಕ್ ಗಳಲ್ಲಿರುವ ರೈತರ ಸಾಲವನ್ನ ಮನ್ನಾ ಮಾಡುತ್ತೇನೆ.

ಇನ್ನು ನೀರಾವರಿಗೆ 1.5 ಲಕ್ಷ ಕೋಟಿ ತೆಗೆದಿಡುವ ನಿರ್ಧಾರ ಮಾಡಿದ್ದೇವೆ. ಭಾಗ್ಯಲಕ್ಷ್ಮಿ ಯೋಜನೆಗೆ ಎರಡು ಲಕ್ಷದವರೆಗೆ ಡೆಪಾಸಿಟ್ ಇಡುವ ನಿರ್ಧಾರ ಕೈಗೊಂಡಿದ್ದೇವೆ. ಅಷ್ಟೇ ಅಲ್ಲದೇ ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ಕೊಡಲಿದ್ದೇವೆ. ಕೃಷಿಕರಿಗೆ ಅನೇಕ ಯೋಜನೆಗಳನ್ನು ರೂಪಿಸುತ್ತೇವೆ. ಸ್ತ್ರೀ ಶಕ್ತಿ ಸಂಘಗಳ ಬಲಪಡಿಸುವ ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಕಾಂಗ್ರೆಸ್ ನಲ್ಲಿ ಮೂರು ಭಾಗ ಆಗಿದೆ. ಸಿದ್ದರಾಮಯ್ಯ ಒಂದು ಕಡೆ, ಪರಮೇಶ್ವರ್ ಒಂದು ಕಡೆ, ಮಲ್ಲಿಕಾರ್ಜುನ ಖರ್ಗೆ ಒಂದು ಕಡೆ. ಅವರು ಮೂರು ಜನ ಒಟ್ಟಿಗೆ ಪ್ರಚಾರ ಮಾಡಲಿ ನೋಡೋಣ.

ಆನಂದ್ ಸಿಂಗ್, ನಾಗೇಂದ್ರ ಯಾರು? ಗಣಿ ಅಕ್ರಮದ ಆರೋಪ ಅವರ ಮೇಲಿಲ್ಲವೇ..? ಭ್ರಷ್ಟಾಚಾರದ ಬಗ್ಗೆ ಮಾತನಾಡುವವರಿಗೆ ಸಿದ್ದರಾಮಯ್ಯ ಟಿಕೆಟ್ ಹೇಗೆ ಕೊಟ್ರು? ಕಾಲು ಹಿಡಿದು, ಕಾಲಿಗೆ ಮುಗಿದು ವೋಟು ಕೇಳಿ ಅಂತೇಳಿರೋದು ಅದು. ಇದು ನಮ್ಮ ಪಾರ್ಟಿಯ ಸಿದ್ಧಾಂತ. ಕಾಲು ಕಟ್ಟಿ, ಕೈಗೆ ಹಗ್ಗ ಕಟ್ಟಿ ವೋಟ್ ಕೇಳಿ ಅಂತ ಹೇಳಿಲ್ಲ.

ಸಿದ್ದರಾಮಯ್ಯ ಎರಡು ಕಡೆ ಸ್ಪರ್ಧಿಸಿರುವುದು ಯಾಕೆ? ಸೋಲಿನ ಭಯದಿಂದ ಎರಡು ಕಡೆ ನಿಂತಿದ್ದಾರೆ. ಖರ್ಗೆ, ಪರಂ ಕೂಡ ಇದನ್ನ ವಿರೋಧಿಸಿದ್ದರು. ಆದರೂ ಪಟ್ಟು ಹಿಡಿದು ದೆಹಲಿಯಲ್ಲಿ ಬದಾಮಿ, ಚಾಮುಂಡೇಶ್ವರಿಯಲ್ಲಿ ಸೀಟು ಗಿಟ್ಟಿಸಿಕೊಂಡಿದ್ದಾರೆ. ಬಳ್ಳಾರಿಯಲ್ಲಿ ಇಬ್ಬರು ಹೋದರೂ ರಾಮುಲು ಸೇರಿ ಉಳಿದವರು ಇದ್ದಾರೆ. ಅವರಿಗೆ ಟಿಕೆಟ್ ನೀಡಿದ್ದೇವೆ. ಅವರು ಗೆಲ್ಲಲಿದ್ದಾರೆ. ಜನಾರ್ದನ ರೆಡ್ಡಿ ಚುನಾವಣೆ ಟಿಕೆಟ್ ಕೇಳಲಿಲ್ಲ. ಅವರೇ ಬಂದು ಪ್ರಚಾರ ಮಾಡುತ್ತಿದ್ದಾರೆ. ನಾವು ವಿರೋಧಿಗಳ ಮನೆಗೂ ಮತ ಕೇಳಲು ಹೋಗುತ್ತೇವೆ. ಹಳೆಯದು ಮರೆತು ಹೋಗುತ್ತಿದ್ದೇವೆ.

ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿಲ್ಲ. ನಾವು ಯಾಕೆ ಅವರ ಜೊತೆ ಮೈತ್ರಿಯಾಗಬೇಕು. ನಮ್ಮದೇ ಗುಡ್ ಮೆಜಾರಿಟಿ ಬರುತ್ತದೆ ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಿದ್ದು ಸಿದ್ದರಾಮಯ್ಯ. ಎಲ್ಲರೂ ಉಗಿದ ಮೇಲೆ ಈ ವಿಚಾರದಲ್ಲಿ ತಟಸ್ಥರಾಗಿದ್ದಾರೆ. ಅದಕ್ಕೆ ಮೂರು ತಿಂಗಳಿಂದ ಸಿಎಂ ಬಾಯಿ ಮುಚ್ಚಿಕೊಂಡಿದ್ದಾರೆ.

ಸಂಸ್ಕೃತಿ, ಆಚಾರ, ವಿಚಾರ, ನಡೆ, ನುಡಿಯ ಬಗ್ಗೆ ಯಾರಿಂದಲೂ ನಾವು ಪಾಠ ಮಾಡಿಸಿಕೊಳ್ಳಬೇಕಿಲ್ಲ. ದಲಿತರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸಿಗಿಲ್ಲ ಎಂದಿದ್ದಾರೆ. ಸಂವಿಧಾನ ಬದಲಾವಣೆ ವಿಚಾರದಲ್ಲಿ ಅನಂತಕುಮಾರ್ ಹೆಗಡೆ ಕ್ಷಮೆ ಕೇಳಿದ್ದಾರೆ.

2004 ರಲ್ಲಿ ಸಿದ್ದರಾಮಯ್ಯ ಬಿಜೆಪಿ ಸೇರುವ ಪ್ರಯತ್ನ ಮಾಡಿದ್ರಾ? ಅನ್ನೋ ಪ್ರಶ್ನೆಗೆ, ಸಿದ್ದರಾಮಯ್ಯ ಬಿಜೆಪಿಗೆ ಬರ್ತೀನಿ ಅಂದರೂ ಸೇರಿಸಿಕೊಳ್ಳಲ್ಲ. ಅಂದು ಸಿದ್ದರಾಮಯ್ಯ ಬಿಜೆಪಿ ಸೇರಲು ಹೋಗಿದ್ದರು ಅಂತಾ ಯಾರು ಹೇಳಿದ್ದಾರೋ ಅವರಿಗೆ ಸಿದ್ದರಾಮಯ್ಯ ಉತ್ತರ ನೀಡಲಿ. ಆ ಬಗ್ಗೆ ನಾನೇನೂ ಹೇಳಲ್ಲ. ನಮ್ಮ ಸರ್ಕಾರ ಬಂದ ಮೇಲೆ ಕಾಂಗ್ರೆಸ್ ಸರ್ಕಾರದ ಒಳ್ಳೆಯ ಯೋಜನೆಗಳನ್ನು ಮುಂದುವರಿಸುತ್ತೇವೆ. ಹೆಸರು ಬದಲಾಗಬಹುದು, ಯೋಜನೆಗಳು ಬದಲಾಗಲ್ಲ. ಅವರಂತೂ ನಮ್ಮ ಯೋಜನೆಗಳನ್ನು ಮುನ್ನಡೆಸಲಿಲ್ಲ. ಆದ್ರೆ ನಾವು ಅವರ ಯೋಜನೆಯನ್ನು ಮುಂದುವರಿಸುತ್ತೇವೆ.

Share This Article
Leave a Comment

Leave a Reply

Your email address will not be published. Required fields are marked *