ಸೈದ್ಧಾಂತಿಕವಾಗಿ ಇಬ್ಬರಿಗೂ ಹೊಂದಾಣಿಕೆ ಆಗಲ್ಲ: ಕಾಂಗ್ರೆಸ್‌ ಶಾಸಕಿ ಪತ್ನಿಯಿದ್ದ ಮನೆ ಬಿಟ್ಟು ಹೋದ ಬಿಎಸ್‌ಪಿ ಅಭ್ಯರ್ಥಿ

Public TV
1 Min Read

ಭೋಪಾಲ್: ಸೈದ್ಧಾಂತಿಕವಾಗಿ ಇಬ್ಬರಿಗೂ ಹೊಂದಾಣಿಕೆ ಆಗುತ್ತಿಲ್ಲ ಎಂದು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಬಿಎಸ್‌ಪಿ (BSP) ಅಭ್ಯರ್ಥಿಯು ಕಾಂಗ್ರೆಸ್‌ (Congress) ಶಾಸಕಿಯಾಗಿರುವ ತನ್ನ ಪತ್ನಿಯನ್ನು ಬಿಟ್ಟು ಹೋಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ (Madhya Pradesh) ಬಾಲಾಘಾಟ್ ಕ್ಷೇತ್ರದ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಲೋಕಸಭಾ ಅಭ್ಯರ್ಥಿ ಕಂಕರ್ ಮುಂಜಾರೆ ಅವರು ಮುಂಬರುವ ಸಾರ್ವತ್ರಿಕ ಚುನಾವಣೆಗೆ ಮುನ್ನ ಕಾಂಗ್ರೆಸ್ ಶಾಸಕಿ ಪತ್ನಿ ಅನುಭಾ ಮುಂಜಾರೆ ಅವರಿರುವ ಮನೆಯನ್ನು ತೊರೆದಿದ್ದಾರೆ. ಬೇರೆ ಬೇರೆ ಸಿದ್ಧಾಂತಗಳನ್ನು ಅನುಸರಿಸುವ ಇಬ್ಬರು, ಚುನಾವಣೆ ಸಂದರ್ಭದಲ್ಲಿ ಒಂದೇ ಸೂರಿನಡಿ ವಾಸಿಸಬಾರದು ಎಂದು ಬಿಎಸ್‌ಪಿ ನಾಯಕ ತಿಳಿಸಿದ್ದಾರೆ. ಇದನ್ನೂ ಓದಿ: ಸಮಾಜದ ಭದ್ರತೆಗೆ ಧಕ್ಕೆ ತರುವ ಕ್ರಿಮಿನಲ್‌ಗಳಿಗೆ ‘ರಾಮ ನಾಮ ಸತ್ಯ’ ನಿಶ್ಚಿತ: ಯೋಗಿ ಆದಿತ್ಯನಾಥ್‌

ಹಿಂದಿನ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ತಮ್ಮ ಹೆಂಡತಿಯಿಂದ ದೂರ ಉಳಿದಿದ್ದರು. ಈಗ ಏಪ್ರಿಲ್ 19 ರಂದು ಮತದಾನದ ದಿನದ ನಂತರ ಮನೆಗೆ ಮರಳುವುದಾಗಿ ಬಿಎಸ್ಪಿ ನಾಯಕ ಹೇಳಿದ್ದಾರೆ.

ನಾನು ನನ್ನ ಮನೆಯಿಂದ ಹೊರಟು ಅಣೆಕಟ್ಟಿನ ಬಳಿ ಗುಡಿಸಲಿನಲ್ಲಿ ವಾಸಿಸುತ್ತಿದ್ದೇನೆ. ವಿಭಿನ್ನ ಸಿದ್ಧಾಂತಗಳನ್ನು ಅನುಸರಿಸುವ ಇಬ್ಬರು ಒಂದೇ ಸೂರಿನಡಿ ವಾಸಿಸಿದರೆ, ಜನರು ಅದನ್ನು ಮ್ಯಾಚ್ ಫಿಕ್ಸಿಂಗ್ ಎಂದು ಭಾವಿಸುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಪಕ್ಷ ನಾಯಕರನ್ನು ಬಂಧಿಸುವ ಮೋದಿಯವರು ಪೊಳ್ಳು ಜಗತ್ತಿನಲ್ಲಿ ಬದುಕುತ್ತಿದ್ದಾರೆ: ಪ್ರಿಯಾಂಕಾ ಗಾಂಧಿ ವಾಗ್ದಾಳಿ

ನವೆಂಬರ್ 2023 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಗೌರಿಶಂಕರ್ ಬಿಡೆನ್ ಅವರನ್ನು ಸೋಲಿಸಿದ ಕಾಂಗ್ರೆಸ್ ಶಾಸಕಿ ತಮ್ಮ ಪತಿಯ ನಿಲುವಿಗೆ ಬೇಸರ ಹೊರಹಾಕಿದ್ದಾರೆ. ನಾವು ಮದುವೆಯಾಗಿ 33 ವರ್ಷಗಳಾಗಿವೆ. ಮಗನೊಂದಿಗೆ ಸಂತೋಷದಿಂದ ಬದುಕುತ್ತಿದ್ದೇವೆ ಎಂದು ಹೇಳಿದ್ದಾರೆ.

Share This Article