ಹೃದಯಾಘಾತದಿಂದ ನಿಧನರಾದ ಬಿಎಸ್‍ಎಫ್ ಯೋಧನ ಅಂತ್ಯಕ್ರಿಯೆ

Public TV
1 Min Read

ಬೆಳಗಾವಿ: ಜಮ್ಮು-ಕಾಶ್ಮೀರ ಗಡಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಸ್‍ಎಫ್ ಯೋಧ ಹೃದಯಾಘಾತದಿಂದ ನಿಧನರಾಗಿದ್ದು, ಗುರುವಾರ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆದಿದೆ.

ಈರಣ್ಣ ಬಸಲಿಂಗಪ್ಪ ಶೀಲವಂತ(29) ರಜೆಯಿಂದ ಮರಳಿ ಕರ್ತವ್ಯಕ್ಕೆ ಹಾಜರಾಗಲು ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ನಿಧನರಾದರು. ಯೋಧನ ಅಂತ್ಯಕ್ರಿಯೆ ನಗರದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಗುರುವಾರ ಮಧ್ಯಾಹ್ನ 1 ಗಂಟೆಗೆ ಜರುಗಿತು.

ಭಾರತಮಾತೆಯ ರಕ್ಷಣೆಗಾಗಿ ಕಳೆದ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಯೋಧ ಈರಣ್ಣ ಅವರ ಪಾರ್ಥಿವ ಶರೀರ ಮುಂಬೈನಿಂದ ರೈಲು ಮಾರ್ಗವಾಗಿ ಬೆಳಗ್ಗೆ 8 ಗಂಟೆಗೆ ನಗರಕ್ಕೆ ತಲುಪಿತು. ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಕೆಲವು ಗಂಟೆಗಳ ಕಾಲ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಯಿತು.

ಗ್ರಾಮದಲ್ಲಿ ಸಾವಿರಾರು ಜನ ಪಾರ್ಥಿವ ಶರೀರ ವೀಕ್ಷಿಸಲು ಬೆಳಗಾವಿ ಜಿಲ್ಲೆಯಾದ್ಯಂತ ವಿವಿಧ ಊರುಗಳಿಂದ ಜನ ಆಗಮಿಸಿ ಅಂತಿಮ ದರ್ಶನ ಪಡೆದರು. ನಂತರ ಮೆರವಣಿಗೆ ಮೂಲಕ ಯೋಧನ ಪಾರ್ಥಿವ ಶರೀರ ವೀರಶೈವ ರುದ್ರಭೂಮಿಯತ್ತ ಕರೆದುಕೊಂಡು ಹೋಗುವಾಗ ಅಮರ್ ರಹೇ ಈರಣ್ಣ ಅಮ ರಹೇ ಎಂಬ ಘೋಷಣೆಗಳು ಕೇಳಿ ಬಂದವು.

ಮಹಾಲಿಂಗೇಶ್ವರ ನಗರ ಶೋಕಸಾಗರದಲ್ಲಿ ಮುಳುಗಿತು. ತಂದೆ-ತಾಯಿ, ಪತ್ನಿ ಹಾಗೂ ಸಹೋದರಿಯರನ್ನು ಅಗಲಿದ ಯೋಧ ಈರಣ್ಣ ಪಾರ್ಥಿವ ಶರೀರ ನೋಡುತ್ತಿದ್ದಂತೆ ಕುಟುಂಬಸರ ಹಾಗೂ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತ್ತು.

ನಗರದ ವೀರಶೈವ ರುದ್ರಭೂಮಿಯಲ್ಲಿ ಬಿಎಸ್‍ಎಫ್ ಯೋಧರು ಸಕಲ ಸರ್ಕಾರಿ ಗೌರವಗಳೊಂದಿಗೆ ಮೂರು ಸುತ್ತು ಗುಂಡು ಹಾರಿಸಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಡಿವೈಎಸ್‍ಪಿ ಡಿ.ಟಿ ಪ್ರಭು ಸೇರಿದಂತೆ ನಗರಸಭೆ ಸದಸ್ಯರು ಯೋಧನ ಅಂತಿಮ ದರ್ಶನ ಪಡೆದರು.

Share This Article
Leave a Comment

Leave a Reply

Your email address will not be published. Required fields are marked *