ಬಿಜೆಪಿ ಕಾರ್ಯಕಾರಿಣಿಗೆ ಬಿಎಸ್‍ವೈ, ಜಾರಕಿಹೊಳಿ ಕಡ್ಡಾಯ ಅಲ್ಲ: ಪ್ರಲ್ಹಾದ್ ಜೋಶಿ

Public TV
1 Min Read

ಹುಬ್ಬಳ್ಳಿ: ಬಿಜೆಪಿ ಪಕ್ಷದ ಕಾರ್ಯಕಾರಿಗೆ ಎಲ್ಲಾ ಸಚಿವರು, ಸಂಸದರು ಹಾಗೂ ಶಾಸಕರು ಬರಲೇಬೇಕು ಎಂದೇನಿಲ್ಲ. ಸೆಲೆಕ್ಟೆಡ್ ಸಚಿವರು ಹಾಗೂ ಪದಾಧಿಕಾರಿಗಳಷ್ಟೇ ಪಾಲ್ಗೊಳ್ಳುತ್ತಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಂತರ ಮಾತನಾಡಿದ ಅವರು, ನಗರದಲ್ಲಿ ನಡೆಯುತ್ತಿರುವ ಕಾರ್ಯಕಾರಿಣಿಗೆ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ, ಜಾರಕಿಹೊಳಿ ಸಹೋದರರು ಸೇರಿದಂತೆ ಅನೇಕರು ಗೈರಾಗಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಯಡಿಯೂರಪ್ಪ ಅವರ ವಿದೇಶ ಪ್ರವಾಸ ಮುಂಚೆಯೇ ನಿಗದಿಯಾಗಿತ್ತು. ಉಳಿದವರು ಬರಲೇಬೇಕು ಎಂದೇನಿಲ್ಲ. ರಾಷ್ಟ್ರೀಯ ಕಾರ್ಯಕಾರಿಣಿಗೂ ಕೇಂದ್ರ ಸಚಿವರು ಮತ್ತು ಸಂಸದರು ಗೈರಾಗುವುದು ಸಾಮಾನ್ಯ ಎಂದರು.

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದ ಕಾರ್ಯಕಾರಿಣಿಗೆ ಪ್ರಮುಖರು ಪಾಲ್ಗೊಂಡಿದ್ದಾರೆ. ಸಭೆಯು ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಕೆಲವರ ಗೈರು ಹಾಜರಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದರು. ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾಗಿ ಡಿಂಪಲ್ ಕ್ವೀನ್ ರಚಿತಾ ಡಿಸ್ಚಾರ್ಜ್

ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಮತ್ತು ವಿಧಾನ ಪರಿಷತ್ ಚುನಾವಣೆಯ ಬಗ್ಗೆಯೂ ಚರ್ಚೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ಮುಂದಿನ ತಾಪಂ. ಜಿಪಂ ಸೇರಿಸಂತೆ ಮುಂಬರುವ ವಿಧಾನಸಭಾ ಚುನಾವಣೆಗಾಗಿ ಪಕ್ಷ ಸಂಘಟನೆ ಜೊತೆಗೆ ಸೇವಾ ಕಾರ್ಯಕ್ರಮಗಳನ್ನು ಕೈಗೊಳ್ಳಲು ಎಲ್ಲರಿಗೂ ಸಲಹೆ ನೀಡಲಾಗಿದೆ ಎಂದರು.

ಸಿಎಂ ಬದಲಾವಣೆ ಇಲ್ಲ: ಸಿಎಂ ಬಸವರಾಜ ಬೊಮ್ಮಾಯಿ ನಮ್ಮ ಯಶಸ್ವಿ ಮುಖ್ಯಮಂತ್ರಿಯಾಗಿದ್ದಾರೆ. ಅವರನ್ನ ಬದಲಾವಣೆ ಮಾಡುವ ಪ್ರಶ್ನೇಯೇ ಇಲ್ಲ. ಮಾಧ್ಯಮದವರು ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. 2023 ವಿಧಾನಸಭಾ ಚುನಾವಣೆಯನ್ನ ಸಹ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿದೆ ಎಂದು ಜೋಶಿ ತಿಳಿಸಿದರು. ಅಲ್ಲದೇ ಸಂಪುಟ ವಿಸ್ತರಣೆ ಕುರಿತಾಗಿ ಸಿಎಂ ಹೈಕಮಾಂಡ್ ಹಾಗೂ ಕೇಂದ್ರ ನಾಯಕರ ಜೊತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *