ಬೆಂಗಳೂರು: ಮಾಜಿ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಅಳಿಯ, ಕಾಫಿ ಡೇ ಮಾಲೀಕ ವಿ.ಜಿ ಸಿದ್ದಾರ್ಥ್ ಅವರು ಸೋಮವಾರ ರಾತ್ರಿಯಿಂದ ದಿಢೀರ್ ನಾಪತ್ತೆಯಾಗಿದ್ದು ಕುಟುಂಬಸ್ಥರಲ್ಲಿ ಆತಂಕ ಮೂಡಿದೆ. ಈ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಎಸ್‍ಎಂ ಕೃಷ್ಣ ಅವರ ಮನೆಗೆ ಭೇಟಿ ನೀಡಿದ್ದಾರೆ.
ನಿನ್ನೆ ರಾತ್ರಿಯಿಂದಲೇ ಅನೇಕ ಗಣ್ಯರು ಎಸ್ ಎಂ ಕೃಷ್ಣ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ. ಹಾಗೆಯೇ ಇಂದು ಮುಖ್ಯಮಂತ್ರಿಗಳು ಭೇಟಿ ನೀಡಿ ಕೃಷ್ಣ ಹಾಗೂ ಅವರ ಕುಟುಂಬಸ್ಥರಿಗೆ ಸಮಾಧಾನ ಮಾಡುತ್ತಿದ್ದಾರೆ.
ಆತಂಕಕ್ಕೊಳಗಾಗಬೇಡಿ, ಸಿದ್ಧಾರ್ಥ್ ಅವರು ಸುರಕ್ಷಿತವಾಗಿ ವಾಪಸ್ ಬರುತ್ತಾರೆ ಎಂಬುದಾಗಿ ಹೇಳುತ್ತಾ ಬಿಎಸ್‍ವೈ ಅವರು ಕೃಷ್ಣ ಅವರ ಕುಟುಂಬಕ್ಕೆ ಧೈರ್ಯ ತುಂಬುತ್ತಿದ್ದಾರೆ.
ಸಿದ್ದಾರ್ಥ್ ನಾಪತ್ತೆ: ವ್ಯವಹಾರ ನಿಮಿತ್ತ ಸಿದ್ಧಾರ್ಥ್ ಅವರು ತಮ್ಮ ಕಾರಿನಲ್ಲಿ ಚಿಕ್ಕಮಗಳೂರಿಗೆ ತೆರಳಿದ್ದರು. ಅಲ್ಲಿಂದ ಮಂಗಳೂರಿಗೆ ಹೋಗಿದ್ದರು. ಕೇರಳಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಜಪ್ಪಿನಮೊಗರು ಎಂಬಲ್ಲಿ ನೇತ್ರಾವತಿ ಸೇತುವೆ ಇದ್ದು, ಇಲ್ಲಿಗೆ ತಲುಪುತ್ತಿದ್ದಂತೆ ಕಾರನ್ನು ನಿಲ್ಲಿಸಲು ಚಾಲಕನಿಗೆ ಹೇಳಿದ್ದಾರೆ. ಬಳಿಕ ಕಾರಿನಿಂದ ಇಳಿದು ಅವರು ಫೋನ್‍ನಲ್ಲಿ ಮಾತನಾಡುತ್ತಾ ಹೋಗಿದ್ದಾರೆ. ಆದರೆ ಅರ್ಧ ಗಂಟೆಯಾದರೂ ಸಿದ್ಧಾರ್ಥ್ ಅವರು ವಾಪಸ್ ಬರದೇ ಇದ್ದುದನ್ನು ಕಂಡು ಗಾಬರಿಯಾದ ಚಾಲಕ ಅವರಿಗೆ ಫೋನ್ ಮಾಡಿದ್ದಾನೆ. ಈ ವೇಳೆ ಅವರ ಫೋನ್ ಸ್ವಿಚ್ಡ್ ಆಫ್ ಆಗಿದ್ದು ಗಮನಕ್ಕೆ ಬಂದಿದೆ.
ಕಾರು ಚಾಲಕ ತಕ್ಷಣ ಈ ವಿಚಾರವನ್ನು ಸಿದ್ಧಾರ್ಥ್ ಮನೆಯವರಿಗೆ ತಿಳಿಸಿದ್ದಾರೆ. ಸಿದ್ಧಾರ್ಥ್ ಅವರು ಕಾರಿನಿಂದ ಇಳಿದ ಜಪ್ಪಿನ ಮೊಗರು ಪ್ರದೇಶ ನೇತ್ರಾವತಿ ನದಿ ತಟದಲ್ಲೇ ಇರುವುದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ. ಕಾರು ಚಾಲಕನಿಂದ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಸಿದ್ಧಾರ್ಥ್ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.