ದೇವೇಗೌಡರ ಕುಟುಂಬದಿಂದ ಭೂ ಹಗರಣ -ಕುಮಾರಸ್ವಾಮಿ ಯಾಕ್ ಮಾತಾಡ್ತಿಲ್ಲ, ಬಿಎಸ್‍ವೈ ಪ್ರಶ್ನೆ

Public TV
2 Min Read

ಬೆಂಗಳೂರು: ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಎ ಮಂಜು ಅವರು ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಕುಟುಂಬದ ವಿರುದ್ಧ ಭೂ ಹಗರಣ ಆರೋಪ ಮಾಡಿರುವ ಕುರಿತು ಸಿಎಂ ಕುಮಾರಸ್ವಾಮಿ ಅವರು ಏಕೆ ಮಾತನಾಡುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪ್ರಶ್ನೆ ಮಾಡಿದ್ದಾರೆ.

ರಾಜ್ಯಮಟ್ಟದ ಬಿಜೆಪಿ ಪಕ್ಷದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಅವರ ಮಕ್ಕಳು ಹಲವು ಹಗರಣಗಳಲ್ಲಿ ಭಾಗಿಯಾಗಿದ್ದಾರೆ. ಈ ಕುರಿತಂತೆ ಇತ್ತೀಚೆಗೆ ಕಾಂಗ್ರೆಸ್ ಮುಖಂಡ ಎ.ಮಂಜು ಅವರು ಹಾಸನದಲ್ಲಿ ರೇವಣ್ಣ ಅವರ ವಿರುದ್ಧ ಭೂ ಹಗರಣದ ಆರೋಪ ಮಾಡಿದ್ದಾರೆ. ಆದರೆ ಈ ಕುರಿತು ಸಿಎಂ ಕುಮಾರಸ್ವಾಮಿ ಅವರು ಇದುವರೆಗೂ ಮಾತನಾಡಿಲ್ಲ. ಆದರೆ ರೇವಣ್ಣ ಅವರು ಪ್ರಕರಣವನ್ನು ತೇಲಿಸುತ್ತಿದ್ದಾರೆ. ರಾಜ್ಯದ ಬೊಕ್ಕಸವನ್ನು ದೇವೇಗೌಡ ಕುಟುಂಬ ಲೂಟಿ ಮಾಡುತ್ತಿದೆ. ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಬಿಜೆಪಿಯಿಂದ ದೊಡ್ಡ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಮಿಷನ್ ಏಜೆಂಟ್ ಸರ್ಕಾರ:
ಇದೇ ವೇಳೆ ಸಮ್ಮಿಶ್ರ ಸರ್ಕಾರ ವಿರುದ್ಧ ಕಿಡಿಕಾರಿದ ಬಿಎಸ್‍ವೈ, ಕಾಂಗ್ರೆಸ್, ಜೆಡಿಎಸ್ ಪಕ್ಷದಲ್ಲಿ ಒಡಕು ಉಂಟಾಗಿದೆ. 37 ಸ್ಥಾನ ಇರುವ ಜೆಡಿಎಸ್, 79 ಸ್ಥಾನ ಇರುವ ಕಾಂಗ್ರೆಸ್ ಪಕ್ಷಗಳು ಅಧಿಕಾರ ನಡೆಸುತ್ತಿವೆ. 104 ಸ್ಥಾನದಲ್ಲಿರುವ ಬಿಜೆಪಿ ವಿರೋಧ ಪಕ್ಷದ ಸ್ಥಾನದಲ್ಲಿ ಕೆಲಸ ಮಾಡುತ್ತಿದೆ. ಆದರೆ ಜನ ಹಿತ ಹಾಗೂ ರಾಜ್ಯದ ಅಭಿವೃದ್ಧಿ ಮರೆತು ರಾಜ್ಯ ಸಮ್ಮಿಶ್ರ ಸರ್ಕಾರ ನಡೆಯುತ್ತಿದೆ. ಹಣಕ್ಕಾಗಿ ಕಮಿಷನ್ ಏಜೆಂಟ್ ರೀತಿ ಸರ್ಕಾರ ವರ್ತಿಸುತ್ತಿದೆ. ಕಾಂಗ್ರೆಸ್, ಜೆಡಿಎಸ್ ಒಳಜಗಳದಿಂದ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಈ ಸರ್ಕಾರದಲ್ಲಿ ಕಮೀಷನ್ ಕೊಡದಿದ್ದರೆ ಯಾವುದೇ ಬಿಲ್ ಪಾಸ್ ಆಗುವುದಿಲ್ಲ ಎಂದು ಹೇಳಿದರು.

ಎದುರಾಳಿ ಇಲ್ಲದೇ ಚೆಸ್: ಕೊಡಗಿನ ಅತಿವೃಷ್ಠಿ ಹಿನ್ನೆಲೆ ವಿಶೇಷ ಪ್ಯಾಕೇಜ್ ನೀಡುವಂತೆ ಕೇಂದ್ರ ಸಚಿವ ರಾಜ್ ನಾಥ್ ಸಿಂಗ್ ಅವರು ರಾಜ್ಯಕ್ಕೆ ಬಂದಾಗ ಅವರ ಬಳಿ ಮನವಿ ಮಾಡಿಕೊಂಡಿದ್ದೇನೆ. ಅಲ್ಲದೇ ಕೇಂದ್ರದ ನಿಯೋಗ ಬರಬೇಕು ಎಂದು ಮನವಿ ಮಾಡಲಾಗಿದೆ. ಕರ್ನಾಟಕದಲ್ಲಿ 13 ಜಿಲ್ಲೆಗಳು ಬರ ಪೀಡಿತ ಎಂದು ಘೋಷಣೆಯಾಗಿದೆ. ರೈತರು ತಾವು ಬೆಳೆದ ಬೆಳೆಗಳು ಕೈ ಸೇರುವಾಗ ಮಳೆ ಕೈ ಕೊಟ್ಟಿದೆ. ಆದರೆ ರೈತರಿಗೆ 8% ರಿಂದ 10% ಕಮಿಷನ್ ಇಲ್ಲದೆ ಯಾವುದೇ ಕೆಲಸ ಆಗಲ್ಲ. ಆದರೆ ಸಚಿವ ಡಿಕೆ ಶಿವಕುಮಾರ್ ಅವರು ಈ ವೇಳೆ ಚೆಸ್ ಗೇಮ್ ಬಗ್ಗೆ ಮಾತನಾಡುತ್ತಿದ್ದಾರೆ. ಹೇಗೆ ಪಾನ್ ಮೂವ್ ಮಾಡಬೇಕು ಎಂದು ಗೊತ್ತಿದೆ ಹೇಳಿದ್ದಾರೆ. ಆದರೆ ಎದುರಾಳಿಗಳೇ ಇಲ್ಲದೆ ಹೇಗೆ ಚೆಸ್ ನಲ್ಲಿ ಪಾನ್ ಮೂವ್ ಮಾಡುತ್ತಿರಾ? ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವುದು ಬಿಡಿ ಎಂದು ತಿಳಿಸಿದರು.

ಬಿಜೆಪಿ ಶಾಸಕರಿಗೆ ಆಮಿಷ: ಕಲಬುರಗಿ ಶಾಸಕ ಸುಭಾಷ್ ಗುತ್ತೇದಾರ್ ಅವರಿಗೆ ಮಂತ್ರಿ ಸ್ಥಾನ ನೀಡುವ ಆಮಿಷ ಒಡ್ಡಲಾಗಿದೆ. ಸ್ವತಃ ಕುಮಾರಸ್ವಾಮಿ ಅವರು ನೇರ ಬಿಜೆಪಿ ಶಾಸಕರಿಗೆ ಆಮಿಷ ಒಡ್ಡಿದ್ದಾರೆ. ಅಲ್ಲದೇ ಇನ್ನು ಅನೇಕ ಬಿಜೆಪಿ ಶಾಸಕರನ್ನು ಸಂಪರ್ಕ ಮಾಡುವ ಯತ್ನ ಮಾಡಿದ್ದಾರೆ. ಇದು ರಾಜ್ಯದ ಮುಖ್ಯಮಂತ್ರಿಯಾಗಿ ಎಚ್‍ಡಿಕೆ ಹಾಗೂ ಸರ್ಕಾರ ಎಷ್ಟು ಕೆಳಮಟ್ಟಕ್ಕೆ ಇಳಿದಿದೆ ಎನ್ನುವುದನ್ನು ಸಾಬೀತು ಪಡಿಸುತ್ತದೆ ಎಂದು ಆರೋಪಿಸಿದರು. ಅರಮನೆ ಮೈದಾನದ ಸಿತಾರಾ ಹಾಲ್ ನಲ್ಲಿ ವಿಶೇಷ ಸಭೆಯಲ್ಲಿ ರಾಜ್ಯದ ಬಿಜೆಪಿ ಸಂಸದರು ಹಾಗೂ ಸಚಿವರನ್ನು ಒಳಗೊಂಡಂತೆ ಹಲವು ಮುಖಂಡರು ಭಾಗವಹಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *