ಶಿವಮೊಗ್ಗ: ಸಂಸತ್ತಿನಲ್ಲಿ ಅವಿಶ್ವಾಸ ಮಂಡನೆ ವೇಳೆ ಮೋದಿ ತಬ್ಬಿಕೊಂಡ ರಾಹುಲ್ ಗಾಂಧಿ ವರ್ತನೆಯನ್ನು ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಖಂಡಿಸಿದ್ದಾರೆ.
ಜಿಲ್ಲಾ ಬಿಜೆಪಿ ವಿಶೇಷ ಕಾರ್ಯಕಾರಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಆ ಸ್ಥಾನಕ್ಕೆ ಶೋಭೆತರುವುದಿಲ್ಲ. ಮೆಚ್ಯೂರಿಟಿ ಇಲ್ಲದ, ಜವಾಬ್ದಾರಿ ಇಲ್ಲದ ನಾಯಕರು ಹೇಗೆ ವರ್ತನೆ ಮಾಡುತ್ತಾರೆ ಎಂಬುದಕ್ಕೆ ರಾಹುಲ್ ಗಾಂಧಿ ನಡೆ ಒಂದು ನಿದರ್ಶನ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮಾತನ್ನು ಮುಗಿಸದೆ ಪ್ರಧಾನಿಯನ್ನು ತಬ್ಬಿಕೊಂಡು ಆಸನಕ್ಕೆ ಮರಳಿ ಕಣ್ ಹೊಡೆಯುವುದು ಅಸಭ್ಯ ವರ್ತನೆ ಎಂದರು.
ಲೋಕಸಭೆಯಲ್ಲಿ ನಡೆದ ಅವಿಶ್ವಾಸ ನಿರ್ಣಯದ ಚರ್ಚೆ ವೇಳೆ ಮಾತನಾಡಿದ್ದ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ಆರೋಪಗಳ ಸುರಿಮಳೆ ಮಾಡಿದ್ದರು. ಆದರೆ ತಮ್ಮ ಭಾಷಣ ಮುಗಿದ ಬಳಿಕ ರಾಹುಲ್ ನೇರ ಪ್ರಧಾನಿಗಳ ಬಳಿಗೆ ತೆರಳಿ ಅಪ್ಪಿಕೊಂಡಿದ್ದರು. ಈ ನಡೆಯ ಕುರಿತು ಸ್ಪೀಕರ್ ಸುಮಿತ್ರಾ ಮಹಾಜನ್, ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್, ಸಚಿವ ಅನಂತ್ ಕುಮಾರ್ ಸೇರಿದಂತೆ ಹಲವು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ರಾಹುಲ್ ಅಪ್ಪುಗೆಯನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ.