ಸುಳ್ಳೇ ಸುಳ್ಳು…! ಮತ್ತೆ ಸುಳ್ಳು ಹೇಳಿದ ಯಡಿಯೂರಪ್ಪ! – ನೀವು ಹೇಳಿದ್ದನ್ನು ಮತ್ತೊಮ್ಮೆ ಕೇಳಿಸ್ಕೊಳ್ಳಿ

Public TV
2 Min Read

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಬಿಜೆಪಿಯ ಮರ್ಯಾದೆಯನ್ನು ರಾಷ್ಟ್ರ ಮಟ್ಟದಲ್ಲಿ ಹರಾಜು ಹಾಕಿದ್ದಾರೆ. ಆದರೆ ಈ ಹೇಳಿಕೆಯ ಕಸಿವಿಸಿ ಬಿಜೆಪಿ ರಾಷ್ಟ್ರ ಮಟ್ಟದ ನಾಯಕರಿಗೆ ಆಗಿದೆ ಎಂದು ಅರಿವಾಗುತ್ತಿದ್ದಂತೆಯೇ, ಬಿ.ಎಸ್.ವೈ ಈಗ ತಮ್ಮ ಮೇಲಿನ ಆರೋಪವನ್ನು ಮಾಧ್ಯಮಗಳ ಮೇಲೆ ಹಾಕುವ ಯತ್ನ ಮಾಡಿದ್ದಾರೆ. ಆದರೆ ಯಡಿಯೂರಪ್ಪನವರೇ ನೀವು ನಿನ್ನೆ ಅರ್ಥಾತ್ ಬುಧವಾರ ಏನು ಮಾತಾಡಿದ್ದೀರಿ ಎಂದು ನಿಮಗೆ ಮರೆತಿದ್ದರೆ ನಿನ್ನೆ ನೀವು ಚಿತ್ರದುರ್ಗದಲ್ಲಿ ಏನ್ ಹೇಳಿದ್ರಿ ಅನ್ನೋದನ್ನು ನೀವೇ ಒಂದ್ಸಾರಿ ಕೇಳಿಸಿಕೊಳ್ಳಿ.

ರಾಷ್ಟ್ರಮಟ್ಟದಲ್ಲಿ ಬಿಜೆಪಿ ನಾಯಕರು ತಲೆ ತಗ್ಗಿಸುವಂತಹ ಹೇಳಿಕೆ ನೀಡಿದ ಯಡಿಯೂರಪ್ಪ ಅವರು ಇಂದು ಟ್ವಿಟ್ಟರ್ ನಲ್ಲಿ, ನನ್ನ ಹೇಳಿಕೆಯನ್ನು ಬೇರೆ ರೀತಿ ಅರ್ಥೈಸಲಾಗಿದೆ. ನಾನು ಪರಿಸ್ಥಿತಿ ಬಿಜೆಪಿ ಪರವಾಗಿದೆ ಅಂತಾ ಹೇಳಿದ್ದೇನೆ. ಇದನ್ನ ನಾನು ಹಲವು ತಿಂಗಳಿನಿಂದ ಹೇಳುತ್ತಾ ಬಂದಿದ್ದೇನೆ. ಮೋದಿ ನಾಯಕತ್ವದಲ್ಲಿ ಕನಿಷ್ಠ 22 ಸೀಟು ಗೆಲ್ಲುವುದಾಗಿ ಹೇಳುತ್ತಿದ್ದೇನೆ. ಈ ರೀತಿ ನಾನು ಹೇಳಿರೋದು ಇದೇ ಮೊದಲಲ್ಲ ಎಂದು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದರು.

ಆದರೆ ಈ ಟ್ವೀಟ್ ಮಾಡುವುದಕ್ಕೂ ಮುನ್ನ ಇಂದು ಯಾದಗಿರಿಯಲ್ಲಿದ್ದ ಯಡಿಯೂರಪ್ಪ, ನಾನು ಏನೂ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ ಎಂದು ಹೇಳಿದ್ದರು. ಇದಾಗಿ ಗಂಟೆಗಳು ಕಳೆಯುವ ಮುನ್ನವೇ ನಿನ್ನೆ ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎನ್ನುತ್ತಿದ್ದಾರೆ.

https://www.youtube.com/watch?v=LLIlyAySnxg

ಈ ಎಲ್ಲದರ ನಡುವೆಯೇ ವಿದೇಶಾಂಗ ಇಲಾಖೆಯ ರಾಜ್ಯ ಸಚಿವರಾಗಿರುವ ವಿ.ಕೆ.ಸಿಂಗ್ ಅವರು ಟ್ವಿಟ್ಟರ್ ನಲ್ಲೇ ಯಡಿಯೂರಪ್ಪಗೆ ಮಂಗಳಾರತಿ ಮಾಡಿದ್ದಾರೆ. ನಮ್ಮ ದೇಶದ ಕಾರ್ಯಾಚರಣೆ ಚುನಾವಣೆಯಲ್ಲಿ ಕೆಲವು ಎಕ್ಸ್ ಟ್ರಾ ಸೀಟುಗಳನ್ನು ಗೆಲ್ಲಲು ಮಾಡಿದ್ದಲ್ಲ. ನಾವೆಲ್ಲಾ ಜೊತೆಯಾಗಿದ್ದೇವೆ. ದೇಶದ ಹಿತದೃಷ್ಟಿಯಿಂದ ಹಾಗೂ ಜನರ ಸುರಕ್ಷತೆಗಾಗಿ ನಾವು ಈ ಕಾರ್ಯಾಚರಣೆ ಮಾಡಿದ್ದೇವೆ ಎಂದು ಯಡಿಯೂರಪ್ಪ ಅವರ ಹೇಳಿಕೆಯನ್ನು ಖಂಡಿಸಿದ್ದರು.

ಅಲ್ಲದೆ ಇದರ ಜೊತೆಗೆ ಮಾಜಿ ಪ್ರಧಾನಿ ವಾಜಪೇಯಿಯವರು ಲೋಕಸಭೆಯಲ್ಲಿ ಮಾಡಿದ್ದ ಭಾಷಣದ ತುಣುಕು ಇರುವ ಯೂಟ್ಯೂಬ್ ಲಿಂಕ್ ಹಾಕಿದ್ದರು. ಅಂದಿನ ಭಾಷಣದಲ್ಲಿ ಮೋದಿಯವರು ಏನು ಹೇಳಿದ್ದರು ಎಂಬುದನ್ನೂ ಒಂದು ಸಾರಿ ಕೇಳಿಸ್ಕೊಳ್ಳಿ.

ಈ ಮಧ್ಯೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು, ಇಡೀ ದೇಶ ಕೇಂದ್ರ, ಸೇನೆಗೆ ಬೆಂಬಲಿಸುತ್ತಿದೆ. ಆದರೆ ಬಿಜೆಪಿ ನಾಯಕರು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ ಹೆಚ್ಚು ಸೀಟಿನ ಲೆಕ್ಕಾಚಾರದಲ್ಲಿದ್ದಾರೆ. ಉಗ್ರರ ದಾಳಿ, ಯುದ್ಧವನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಇದು ನಾಚಿಕೆಗೇಡಿನ ವಿಚಾರ. ಸೈನಿಕರಿಗೆ ಮಾಡುತ್ತಿರುವ ಅವಮಾನ ಎಂದು ಯಡಿಯೂರಪ್ಪರನ್ನು ಟ್ವೀಟ್ ನಲ್ಲಿ ಕುಟುಕಿದ್ದರು.

ಈ ಎಲ್ಲ ಬೆಳವಣಿಗೆಗಳ ನಡುವೆಯೇ ಯಡಿಯೂರಪ್ಪ ಅವರ ಟ್ವಿಟ್ಟರ್ ಖಾತೆಯಲ್ಲಿ ನಾನು ಹಾಗೆ ಹೇಳಿದ್ದಲ್ಲ ಎಂಬ ಟ್ವೀಟ್ ಕಾಣಿಸಿಕೊಂಡಿದೆ. ಯಡಿಯೂರಪ್ಪ ಅವರ 22 ಸೀಟಿನ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ನಿಮ್ಮ ತಪ್ಪನ್ನು ಒಪ್ಪಿಕೊಂಡು ನೀವು ಇನ್ನಷ್ಟು ದೊಡ್ಡವರಾಗಬಹುದಿತ್ತು. ಆದರೆ ನಿಮ್ಮ ತಪ್ಪನ್ನು ಬೇರೆಯವರ ಮೇಲೆ ಹಾಕಿದ್ಯಾಕೆ ಯಡಿಯೂರಪ್ಪನವರೇ..?

ಯಡಿಯೂರಪ್ಪ ಅವರ ಹೇಳಿಕೆಯನ್ನು ಕೇಳಿಸಿಕೊಂಡ ಮೇಲೆ ನಿಮಗೇನನ್ನಿಸಿತು ಎಂಬುದನ್ನು ಕಮೆಂಟ್ ಮಾಡಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *