ಸಂಪುಟ ಫೈನಲ್‍ಗೆ ದಿಲ್ಲಿಗೆ ಸಿಎಂ ಯಡಿಯೂರಪ್ಪ- ಯಾರು ಇನ್? ಬಿಜೆಪಿಯಲ್ಲಿ ಯಾರಿಗೆ ಸ್ಥಾನ?

Public TV
3 Min Read

– ಗೆದ್ದ ಶಾಸಕರಲ್ಲಿ 9 ಮಂದಿಗಷ್ಟೇ ಸಚಿವ ಸ್ಥಾನ
– 50:50 ಲಿಸ್ಟಲ್ಲಿ ಹೆಬ್ಬಾರ್, ನಾರಾಯಣಗೌಡ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗಿದ್ದ ವಿಘ್ನ ಕೊನೆಗೂ ಬಗೆಹರಿದಂತೆ ಕಾಣುತ್ತಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಬುಲಾವ್ ಮೇರೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ದೆಹಲಿಗೆ ತೆರಳುತ್ತಿದ್ದಾರೆ. ಒಂದು ವೇಳೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟರೆ ಫೆಬ್ರವರಿ 2ಕ್ಕೆ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಗಳಿವೆ.

ಪಬ್ಲಿಕ್ ಟಿವಿಗೆ ಸಿಕ್ಕಿರುವ ಮೂಲಗಳ ಪ್ರಕಾರ, 9+3 ಫಾರ್ಮುಲಾವೇ ಫೈನಲ್ ಆಗುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಬಗ್ಗೆ ಬೆಳಗಾವಿಯಲ್ಲಿ ಸುಳಿವು ನೀಡಿರುವ ಸಿಎಂ ಯಡಿಯೂರಪ್ಪ ಅವರು, ಗೆದ್ದ ಒಂದಿಬ್ಬರು ಶಾಸಕರು ಬಿಟ್ಟರೆ ಬಹುತೇಕರಿಗೆ ಸಚಿವ ಸ್ಥಾನ ಸಿಗಲಿದೆ ಅಂತ ಹೇಳಿದ್ದಾರೆ. ಸಿಎಂ ನಾಳೆಯೇ ದೆಹಲಿಗೆ ತೆರಳುತ್ತಿದ್ದು, ವರಿಷ್ಠರೊಂದಿಗೆ ಚರ್ಚಿಸುವುದಾಗಿಯೂ ತಿಳಿಸಿದ್ದಾರೆ.

ಯಾರನ್ನೂ ಕೈ ಬಿಡುವುದಿಲ್ಲ. ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳುತ್ತೋ ನೋಡೋಣ ಎಂದು ಸಿಎಂ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ. ಇತ್ತ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿರುವ ಸಚಿವ ಆರ್.ಅಶೋಕ್, ಎಲ್ಲರಿಗಿಂತ ಮುಖ್ಯಮಂತ್ರಿಗಳಿಗೆನೇ ಸಂಪುಟ ವಿಸ್ತರಣೆ ಅರ್ಜೆಂಟಿದೆ ಅಂತ ಹೇಳಿದ್ದಾರೆ. 3-4 ದಿನಗಳಲ್ಲಿ ಆಗೇ ಆಗುತ್ತೆ ಅಂತ ಮತ್ತೊಬ್ಬ ಸಚಿವ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾಳೆ ದೆಹಲಿಗೆ ತೆರಳುತ್ತಿರುವ ಸಿಎಂ 2 ಪಟ್ಟಿ ಸಿದ್ಧಪಡಿಸಿದ್ದಾರೆ. ಇದರಲ್ಲಿ ಗೆದ್ದ 11 ಶಾಸಕರ 7 ಶಾಸಕರ ಪಟ್ಟಿ ಬಹುತೇಕ ಫೈನಲ್ ಆಗಿದೆ. 50:50 ಲಿಸ್ಟ್‍ನಲ್ಲಿ ಕೆಲವರ ಹೆಸರು ಸೇರಿಸಲಾಗಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

ಸಚಿವ ಸ್ಥಾನ ಯಾರಿಗೆ ಕನ್ಫರ್ಮ್?
* ರಮೇಶ್ ಜಾರಕಿಹೊಳಿ, ಗೋಕಾಕ್
* ಬಿ.ಸಿ. ಪಾಟೀಲ್, ಹಿರೇಕೆರೂರು
* ಎಸ್.ಟಿ. ಸೋಮಶೇಖರ್, ಯಶವಂತಪುರ
* ಬೈರತಿ ಬಸವರಾಜ್, ಕೆ.ಆರ್.ಪುರಂ
* ಗೋಪಾಲಯ್ಯ, ಯಶವಂತಪುರ
* ಸುಧಾಕರ್, ಚಿಕ್ಕಬಳ್ಳಾಪುರ
* ಆನಂದ್ ಸಿಂಗ್, ವಿಜಯನಗರ

ಯಾರಿಗೆ ಮಂತ್ರಿಗಿರಿ ಒಲಿದ್ರೂ ಒಲಿಯಬಹುದು?
* ಶಿವರಾಂ ಹೆಬ್ಬಾರ್, ಯಲ್ಲಾಪುರ
* ನಾರಾಯಣಗೌಡ, ಕೆ.ಆರ್. ಪೇಟೆ
* ಮಹೇಶ್‍ಕುಮಟಳ್ಳಿ, ಅಥಣಿ

ಯಾರಿಗೆ ಸಚಿವ ಸ್ಥಾನ ಡೌಟ್?
ಶ್ರೀಮಂತಪಾಟೀಲ್, ಕಾಗವಾಡ

ಬಿಜೆಪಿ ಲಿಸ್ಟ್:
ಹೊಸದಾಗಿ ಗೆದ್ದ ಶಾಸಕರ ಜೊತೆಗೆ ಮೂಲ ಬಿಜೆಪಿಗರಿಗೂ ಸಚಿವ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿವೆ. 3-4 ಸ್ಥಾನಗಳನ್ನು ಅಂದಾಜಿಸಲಾಗಿದ್ದು, ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಹೆಸರು ಮಾತ್ರ ಫೈನಲ್ ಆಗಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

ಬಿಜೆಪಿಯಿಂದ ಯಾರು ಮಿನಿಸ್ಟರ್?
* ಉಮೇಶ್ ಕತ್ತಿ, ಹುಕ್ಕೇರಿ
* ಅರವಿಂದ ಲಿಂಬಾವಳಿ, ಮಹದೇವಪುರ
* ಸುನೀಲ್‍ಕುಮಾರ್, ಕಾರ್ಕಳ
* ಹಾಲಪ್ಪ ಆಚಾರ್, ಯಲಬುರ್ಗಾ
* ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಂದಾಪುರ
* ಅಂಗಾರ, ಸುಳ್ಯ

ಡಿಸಿಎಂ ಶಾಕ್:
ಒಂದು ಕಡೆ ಸಚಿವ ಸ್ಥಾನದ ಲೆಕ್ಕಾಚಾರ ನಡೆಯುತ್ತಿದ್ದರೆ, ಇನ್ನೊಂದು ಕಡೆ ಉಪ ಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದ ಶ್ರೀರಾಮುಲು ಹಾಗೂ ರಮೇಶ್ ಜಾರಕಿಹೊಳಿ ಅವರಿಗೆ ಸಿಎಂ ಯಡಿಯೂರಪ್ಪ ಶಾಕ್ ಕೊಟ್ಟಿದ್ದಾರೆ. ಮೂವರು ಡಿಸಿಎಂಗಳು ಮುಂದುವರಿಯಲಿದ್ದು, ಹೊಸದಾಗಿ 4ನೇ ಡಿಸಿಎಂ ಹುದ್ದೆ ಸೃಷ್ಠಿ ಇಲ್ಲ ಅಂತ ಹೇಳಿಕೆ ನೀಡುವ ಮೂಲಕ ಆಘಾತ ನೀಡಿದ್ದಾರೆ. ಸಿಎಂ ಹೇಳಿಕೆಯಿಂದ ವಾಲ್ಮೀಕಿ ಸಮುದಾಯ ಆಘಾತಕ್ಕೆ ಒಳಗಾಗಿದ್ದರೆ, ನಾನು ಡಿಸಿಎಂ ಆಗಬೇಕೆಂಬುದು ಜನರ ಅಭಿಲಾಷೆಯಾಗಿದೆ ಅಂತ ಶ್ರೀರಾಮುಲು ಹೇಳಿದ್ದಾರೆ.

ಶಾಂತಿ ಕುಸ್ತಿ:
ಸಂಪುಟ ವಿಸ್ತರಣೆ ಬಿಜೆಪಿಯಲ್ಲಿ ಶತ್ರುಗಳನ್ನು ಮಿತ್ರರು, ಮಿತ್ರರನ್ನು ಶತ್ರುಗಳನ್ನಾಗಿಸಿದೆ. ಸಚಿವ ಸ್ಥಾನ ವಿಚಾರವಾಗಿ ಡಿಸಿಎಂ ಸವದಿ, ಸಚಿವ ಸ್ಥಾನದ ಆಕಾಂಕ್ಷಿ ಉಮೇಶ್ ಕತ್ತಿ ಮಧ್ಯೆ ಐದಾರು ತಿಂಗಳಿಂದ ಮುನಿಸಿತ್ತು. ಆದ್ರೀವತ್ತು ಸಿಎಂ ನಿವಾಸಕ್ಕೆ ಬಂದಿದ್ದ ಉಭಯ ನಾಯಕರು, ಮುನಿಸು ಮರೆತು ಸಿಎಂ ಕಾರ್‍ನಲ್ಲೇ ಅಕ್ಕಪಕ್ಕ ಕೂತು ಬಿಎಸ್‍ವೈ ಜೊತೆ ಬೆಂಗಳೂರು ಏರ್‍ಪೋರ್ಟ್‍ಗೆ ತೆರಳಿದ್ರು. ಅಲ್ಲಿಂದ ಬೆಳಗಾವಿಗೆ ಪಯಣಿಸಿದರು. ಆದರೆ ಡಿಸಿಎಂ ಅಶ್ವಥ್ ನಾರಾಯಣ, ಡಿಸಿಎಂ ಆಸ್ಥಾನ ಆಕಾಂಕ್ಷಿ ಶ್ರೀರಾಮುಲು ಮಧ್ಯೆ ವೈಮನಸ್ಸು ಮೂಡಿದಂತಿದೆ. ಯಾಕಂದ್ರೆ, ಚನ್ನರಾಯಪಟ್ಟಣದಲ್ಲಿ ಪೆಟ್ರೋಲ್ ಬಂಕ್ ಒಂದರ ಉದ್ಘಾಟನೆಗೆ ಇಬ್ಬರೂ ನಾಯಕರು ಬೆಂಗಳೂರಿಂದ ತೆರಳಿದ್ರೂ ಇಬ್ಬರೂ ಪ್ರತ್ಯೇಕ ಹೆಲಿಕಾಪ್ಟರ್‍ಗಳಲ್ಲಿ ಪಯಣಿಸಿದ್ದಾರೆ. ಈ ಬಗ್ಗೆ ಕೇಳಿದ್ದಕ್ಕೆ ನಾವಿಬ್ರೂ ಒಂದೇ ಕಾಪ್ಟರ್‍ನಲ್ಲಿ ಬರ್ತೇವೆ ಅಂತ ಹೇಳಿದ್ವಿ. ಆದರೆ, ಬಂಕ್ ಮಾಲೀಕರು ಪ್ರತ್ಯೇಕ ಹೆಲಿಕಾಪ್ಟರ್ ಮಾಡಿದ್ರು. ಇಲ್ಲದಿದ್ದರೆ ನಾವಿಬ್ಬರೂ ಒಂದೇ ಕಾರ್‍ನಲ್ಲಿ ಬರ್ತಿದ್ದೆವು ಎಂದರು.

Share This Article
Leave a Comment

Leave a Reply

Your email address will not be published. Required fields are marked *