ಅಕ್ಕನ ಹಿಂದೆ ಬಿದ್ದ ಲವ್ವರ್‌ಗೆ ದೇವಸ್ಥಾನದಲ್ಲೇ ಚಟ್ಟ ಕಟ್ಟಿದ ಅಪ್ರಾಪ್ತ ಸಹೋದರ!

1 Min Read

ಬೆಳಗಾವಿ: ಅಕ್ಕನ ಹಿಂದೆ ಬಿದ್ದಿದ್ದ ಯುವಕನಿಗೆ ದೇವಸ್ಥಾನದಲ್ಲಿಯೇ ಆಕೆಯ ಅಪ್ರಾಪ್ತ ಸಹೋದರ (Brother) ಚಟ್ಟ ಕಟ್ಟಿದ ಘಟನೆ ಬೆಳಗಾವಿ (Belagavi) ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ನಡೆದಿದೆ.

ಅಕ್ಕ ಪ್ರೀತಿಸುತ್ತಿದ್ದ (Love) ಹುಡುಗನನ್ನೇ ಅಪ್ರಾಪ್ತ ಬಾಲಕ ಹತ್ಯೆಗೈದಿದ್ದಾನೆ. ರಾಜಾಪುರ ಗ್ರಾಮದ ಮಂಜುನಾಥ ಸುಭಾಷ್ ಎಣ್ಣಿ (23) ಕೊಲೆಯಾದ ದುರ್ದೈವಿ.

ಕಳೆದ ಹಲವು ವರ್ಷಗಳಿಂದ ಅಪ್ರಾಪ್ತನ ಸಹೋದರಿಯನ್ನು ಮಂಜುನಾಥ ಪ್ರೀತಿಸುತ್ತಿದ್ದ. ಇದು ಅಪ್ರಾಪ್ತನ ಗಮನಕ್ಕೆ ಬಂದಾಗ ತನ್ನ ಅಕ್ಕನ ಉಸಾಬರಿಗೆ ಬರಬೇಡ ಎಂದು ಹಲವು ಸಲ ಮಂಜುನಾಥಗೆ ಎಚ್ಚರಿಕೆ ನೀಡಿದ್ದ.  ಇದನ್ನೂ ಓದಿ: Reality Check | 3,000ಕ್ಕೆ ಅಕ್ರಮ ಬಾಂಗ್ಲಾ ವಲಸಿಗನಿಗೆ ಆಧಾರ್ – ಶೆಡ್‌ಗಳಲ್ಲಿ ಟಿವಿ, ಫ್ರಿಡ್ಜ್, ಫ್ಯಾನ್, ಎಲ್ಲ ಸೌಲಭ್ಯ!

 

ಬಾಲಕ ಎಚ್ಚರಿಕೆ ನೀಡಿದ್ದರೂ ಗೆಳತಿ ಜೊತೆ ಫೋನಿನಲ್ಲಿ ಮಂಜುನಾಥ ಮಾತನಾಡುತ್ತಿದ್ದ. ಸಾಲದೆಂಬಂತೆ ಆಗಾಗ ಗ್ರಾಮದಲ್ಲಿ ಪ್ರೇಯಸಿಯನ್ನು ಭೇಟಿಯಾಗುತ್ತಿದ್ದ.

ಮಂಜುನಾಥ ಎಣ್ಣಿ ರಾಜಾಪುರ ಗ್ರಾಮದ ಆರಾಧ್ಯ ದೈವ ಚೂನಮ್ಮ ದೇವಿಯ ಪೂಜಾರಿ ಆಗಿಯೂ ಕೆಲಸ ಮಾಡುತ್ತಿದ್ದ. ಈ ವಿಚಾರ ತಿಳಿದಿದ್ದ ಅಪ್ರಾಪ್ತ ಬಾಲಕ ಬೆಳಗ್ಗೆ ಚೂನಮ್ಮ ದೇವರ ಪೂಜೆ ಮಾಡಲು ಬಂದಾಗ ಮಂಜುನಾಥನ ತಲೆಗೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.

ತೀವ್ರ ರಕ್ತಸ್ರಾವದಿಂದ ದೇವಸ್ಥಾನ ಆವರಣದಲ್ಲೇ ಮಂಜುನಾಥ ಎಣ್ಣಿ ಪ್ರಾಣ ಬಿಟ್ಟಿದ್ದು ಸ್ಥಳಕ್ಕೆ ಘಟಪ್ರಭಾ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಬಂಧಿಸಿದ್ದಾರೆ.

Share This Article