ಕೋಲಾರ: ತಂಗಿಯ ಅಡ್ಮಿಷನ್ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಅಣ್ಣ-ತಂಗಿಯಿದ್ದ ಬೈಕ್‌ಗೆ ಇನ್ನೋವಾ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಮೃತಪಟ್ಟಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.
ಕೋಲಾರ ತಾಲೂಕು ಶ್ರೀನಿವಾಸಪುರ ರಸ್ತೆಯಲ್ಲಿರುವ ವೀರಾಪುರ ಗೇಟ್ ಬಳಿಯ ಮಹರ್ಷಿ ಶಾಲೆ ಬಳಿ ಈ ಘಟನೆ ನಡೆದಿದೆ. ಕೋಲಾರ ತಾಲೂಕಿನ ಕೊಂಡೇನಹಳ್ಳಿ ನಿವಾಸಿಗಳಾದ ಯಶಸ್ವಿನಿ ಬಾಯಿ (16) ಹಾಗೂ ಹರ್ಷಿತ್ ಸಿಂಗ್ (20) ಮೃತ ಅಣ್ಣ-ತಂಗಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ವರುಣಾರ್ಭಟಕ್ಕೆ ತತ್ತರಿಸಿದ ಮುಂಬೈ – ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ, ರೆಡ್ ಅಲರ್ಟ್ ಘೋಷಣೆ
ತಂದೆ, ತಾಯಿ ಇಬ್ಬರು ಕೂಲಿ ನಾಲಿ ಮಾಡಿ ತನ್ನಿಬ್ಬರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ರು. ಪಿಯುಸಿ ಓದುತ್ತಿದ್ದ ಮಗಳು, ಮಗ ಪದವಿ ವ್ಯಾಸಂಗ ಮಾಡುತ್ತಿದ್ದ. ಹರ್ಷಿತ್ ಕಾಲೇಜು ಮುಗಿಸಿಕೊಂಡು ತಂಗಿ ಯಶಸ್ವಿನಿಯನ್ನ ಕಾಲೇಜಿಗೆ ದಾಖಲು ಮಾಡಿ, ವಾಪಸ್ ತೆರಳುವ ವೇಳೆ ಈ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಸೆಲ್‌ನಲ್ಲೇ ವಾಕಿಂಗ್, ತೆಳುವಾದ ಬೆಡ್ ಮೇಲೆ ಸ್ಲೀಪಿಂಗ್ – ರಾಜಾತಿಥ್ಯ ಇಲ್ದೇ `ಡಿ’ ಗ್ಯಾಂಗ್ ಫುಲ್ ಸೈಲೆಂಟ್
ಪ್ರತಿನಿತ್ಯ ಅಣ್ಣ-ತಂಗಿ ಇಬ್ಬರು ಬಸ್‌ನಲ್ಲೇ ಕಾಲೇಜಿಗೆ ತೆರಳುತ್ತಿದ್ದರು. ಆದ್ರೆ ತಂಗಿ ಕಾಲೇಜು ದಾಖಲಾತಿಗೆ ಕೆಲವು ದಾಖಲೆಗಳನ್ನ ಮರೆತಿದ್ದರು. ಈ ವೇಳೆ ಯಶಸ್ವಿನಿ ಹಾಗೂ ಹರ್ಷಿತ್ ಮನೆಯಿಂದ ಬೈಕ್‌ನಲ್ಲಿ ಹೋಗಿ ದಾಖಲೆ ಕೊಟ್ಟು ವಾಪಸ್ ಮನೆಗೆ ತೆರಳುವ ವೇಳೆ ಇನ್ನೋವಾ ಚಾರ್ಸಿ ತುಂಡಾಗಿ ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಈ ಅಪಘಾತ ಸಂಭವಿಸಿದೆ. ಇನ್ನೂ ಅಪಘಾತದಲ್ಲಿ ಯಶಸ್ವಿನಿ ಸ್ಥಳದಲ್ಲೇ ಸಾವನ್ನಪ್ಪಿದ್ರೆ ಆಸ್ಪತ್ರೆಯಲ್ಲಿ ಹರ್ಷಿತ್ ಸಿಂಗ್ ಮೃತಪಟ್ಟಿದ್ದಾನೆ.
ಇದೀಗ ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕೋಲಾರ ಗ್ರಾಮಾಂತರ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡು, ಇನ್ನೋವಾ ಕಾರು ಹಾಗೂ ಚಾಲಕನನ್ನ ವಶಕ್ಕೆ ಪಡೆದಿದ್ದಾರೆ.