ಪ್ಯಾರಾಸಿಟಮೊಲ್, ಚಿಕನ್ ಸೂಪ್, ನಿಂಬೆ ಪಾನಕದಿಂದ ಕೊರೊನಾ ಗುಣಪಡಿಸಿಕೊಂಡ ವೈದ್ಯೆ

Public TV
2 Min Read

ಲಂಡನ್: ಪ್ಯಾರಾಸಿಟಮೊಲ್, ಚಿಕನ್ ಸೂಪ್ ಹಾಗೂ ನಿಂಬೆ ಪಾನಕ ಸೇವಿಸಿ ನನಗೆ ತಗುಲಿದ್ದ ಕೊರೊನಾ ವೈರಸ್ ಸೋಂಕನ್ನು ಗುಣಪಡಿಸಿಕೊಂಡಿದ್ದೇನೆ ಎಂದು ಬ್ರಿಟಿಷ್ ವೈದ್ಯೆಯೊಬ್ಬರು ಹೇಳಿಕೊಂಡಿದ್ದಾರೆ.

ಲಂಡನ್ ಮೂಲದ ವೈದ್ಯೆ ಕ್ಲೇರಾ ಗೆರಡಾ(60) ಕೊರೊನಾ ಗೆದ್ದುಬಂದಿದ್ದಾರೆ. ಕ್ಲೇರಾ ಅವರು ರಾಯಲ್ ಕಾಲೇಜ್ ಆಫ್ ಜನರಲ್ ಪ್ರಾಕ್ಟೀಷನರ್ಸ್ ಮುಖ್ಯಸ್ಥೆಯಾಗಿದ್ದು, ಇತ್ತೀಚಿಗೆ ನ್ಯೂಯಾರ್ಕ್ ಸಮ್ಮೇಳನಕ್ಕೆ ತೆರಳಿದ್ದಾಗ ಅವರಿಗೆ ಕೊರೊನಾ ಸೋಂಕು ತಟ್ಟಿತ್ತು ಎನ್ನಲಾಗಿದೆ. ಮಹಾಮಾರಿ ಕೊರೊನಾದಿಂದ ಬಳಲುತ್ತಿದ್ದ ವೈದ್ಯೆ ಸ್ವತಃ ತಾವೇ ತಮಗೆ ಚಿಕಿತ್ಸೆ ಕೊಟ್ಟುಕೊಂಡು ಮಾರಕ ಸೋಂಕನ್ನು ಮೆಟ್ಟಿನಿಂತಿದ್ದಾರೆ. ಪ್ಯಾರಾಸಿಟಮೊಲ್, ಚಿಕನ್ ಸೂಪ್ ಮತ್ತು ನಿಂಬೆ ಪಾನಕ ಸೇವಿಸಿ ಕೊರೊನಾದಿಂದ ಗುಣಮುಖರಾಗಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ನ್ಯೂಯಾರ್ಕ್ ಸಮ್ಮೇಳನದಿಂದ ವಾಪಸ್ಸಾದ ಬಳಿಕ ವೈದ್ಯೆಯಲ್ಲಿ ಜ್ವರ, ಚಳಿ, ಗಂಟಲು ನೋವು, ತಲೆತಿರುಗುವಿಕೆ, ಕೀಲು ನೋವು, ತಲೆನೋವು, ಕೆಮ್ಮು ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ತಪಾಸಣೆ ನಡೆಸಿದಾಗ ವೈದ್ಯೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯೆ, ಸೋಂಕು ತಟ್ಟಿದ ಬಳಿಕ ನಾನು ಸಂಪೂರ್ಣ ನಿಶಕ್ತಳಾಗಿದ್ದೆ. ನನಗೆ 50 ಪೌಂಡ್ ಬಾರವನ್ನು ಕೂಡ ಎತ್ತಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಆರೋಗ್ಯ ಸ್ಥಿತಿ ಕ್ಷೀಣಿಸಿತ್ತು. ಆದರೆ ಇದಕ್ಕೆ ನಾನು ಹೆದರಲಿಲ್ಲ. ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಏನು ಮಾಡಬೇಕು ಯೋಚಿಸಿದೆ. ಆ ಬಳಿಕ ನಿರಂತರವಾಗಿ ನಾನು ಪ್ಯಾರಾಸಿಟಮೊಲ್, ಚಿಕನ್ ಸೂಪ್ ಮತ್ತು ನಿಂಬೆ ಪಾನಕ ಸೇವಿಸಿದೆ, ಸೋಂಕು ಗುಣವಾಗುತ್ತಾ ಬಂತು. ಈಗ ನಾನು ಸಂಪೂರ್ಣ ಗುಣಮುಖಳಾಗಿದ್ದೇನೆ ಎಂದು ತಿಳಿಸಿದ್ದಾರೆ.

ಕೊರೊನಾ ವೈರಸ್ ಬಗ್ಗೆ ಜನರು ಯಾಕೆ ಚಿಂತೆ ಮಾಡುತ್ತಿದ್ದಾರೆ ಎಂದು ನನಗೆ ಅರ್ಥವಾಗುತ್ತೆ. ಆದರೆ ಬಹುತೇಕ ಮಂದಿ ನನ್ನಂತೆಯೆ ಸೋಂಕಿನಿಂದ ಗುಣವಾಗಿದ್ದಾರೆ. ಇದು ಮಾರಣಾಂತಿಕ ಕಾಯಿಲೆ ಅಲ್ಲ, ಧೈರ್ಯದಿಂದಿರಿ ಎಂದು ವೈದ್ಯೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊರೊನಾ ಅಟ್ಟಹಾಸವನ್ನು ಕಂಟ್ರೋಲ್ ಮಾಡುವ ಯಾವುದೇ ಮಾರ್ಗ ಇಡೀ ಜಗತ್ತಿಗೇ ಕಾಣದಂತಾಗಿದೆ. ಹಾಗಾಗಿಯೇ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇ ಇದೆ. ನಿನ್ನೆ ಮೊನ್ನೆವರೆಗೂ 5 ಸಾವಿರದ ಗಡಿ ದಾಟಿದ್ದ ಸೋಂಕಿತರ ಸಾವಿನ ಸಂಖ್ಯೆ. ಈಗ 8 ಸಾವಿರದತ್ತ ಮುನ್ನುಗ್ಗುತ್ತಿದೆ. ಇಡೀ ವಿಶ್ವದಲ್ಲಿ ಯಾವ ದೇಶದಲ್ಲೂ ಕೊರೊನಾ ಕಂಟ್ರೋಲ್‍ಗೆ ಬಂದಿಲ್ಲ. ಹಾಗಾಗಿ ಸದ್ಯದ ಮಟ್ಟಿಗೆ ಇಡೀ ವಿಶ್ವದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 7,894 ದಾಟಿದೆ. 1,94,584 ಸೋಂಕಿತರಿದ್ದು, ಇದುವರೆಗೂ 81,080 ಮಂದಿ ಗುಣಮುಖರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *