ಮುನಿದ ಕಪಿಲೆ: ನಂಜನಗೂಡು-ಹೆಜ್ಜಿಗೆ ಸೇತುವೆಯಲ್ಲಿ ಬಿರುಕು

Public TV
1 Min Read

ಮೈಸೂರು: ಕಳೆದ ಮೂರು ದಿನಗಳಿಂದ ಕಪಿಲಾ ನದಿ ರಭಸದಿಂದ ಹರಿಯುತ್ತಿರುವ ಹಿನ್ನೆಲೆಯಲ್ಲಿ ನಂಜಗೂಡು – ಹೆಜ್ಜಿಗೆ ನಡುವೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಸೇತುವೆಯಲ್ಲಿ ಬಿರುಕು ಕಾಣಿಸಿದೆ. ಇದರಿಂದ ಸೇತುವೆ ರಸ್ತೆ ಕುಸಿದು ಬೀಳುವ ಆತಂಕ ಸ್ಥಳೀಯರಲ್ಲಿ ಎದುರಾಗಿದೆ.

ರಸ್ತೆ ಹಾಗೂ ಸೇತುವೆಯಲ್ಲಿ ಬಿರುಕು ಉಂಟಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು, ಸೇತುವೆ ಮೇಲ್ಭಾಗದಲ್ಲಿ ಭಾರೀ ವಾಹನಗಳು ಸಂಚರಿಸದಂತೆ ನಿರ್ಬಂಧ ಹೇರಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಕೊನೆ ಅವಧಿಯಲ್ಲಿ ಈ ಸೇತುವೆ ಉದ್ಘಾಟನೆ ಆಗಿತ್ತು. ಕಳಪೆ ಕಾಮಗಾರಿಯಿಂದಾಗಿಯೇ ಸೇತುವೆ ಹಾಗೂ ರಸ್ತೆಯಲ್ಲಿ ಬಿರುಕು ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದನ್ನೂ ಓದಿ: ಕಬಿನಿ ಜಲಾಶಯದಿಂದ ದಾಖಲೆ ಪ್ರಮಾಣದಲ್ಲಿ ನೀರು ಹೊರಕ್ಕೆ

ರಾಷ್ಟ್ರೀಯ ಹೆದ್ದಾರಿ ಬಂದ್:
ಕಪಿಲಾ ನದಿಯಿಂದ ಸುಮಾರು 80 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಿರುವುದರಿಂದ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಸಂಪರ್ಕ ಕಳೆದ ಎರಡು ದಿನಗಳಿಂದ ಸಂಪೂರ್ಣ ಕಡಿತಗೊಂಡಿದೆ. ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ನಂಜನಗೂಡಿನ ರಾಷ್ಟ್ರೀಯ ಹೆದ್ದಾರಿ 766 ರಸ್ತೆ ಮೇಲೆ ನೀರು ಹರಿದು ಹೋಗುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ವಾಹನ ಸವಾರರು ಇತರೇ ಮಾರ್ಗಗಳತ್ತ ತೆರಳಿ ಪ್ರಯಾಣ ಮುಂದುವರಿಸಿದ್ದಾರೆ. ಈ ಕುರಿತು ಪರ್ಯಾಯ ಮಾರ್ಗಗಳನ್ನು ಅಧಿಕಾರಿಗಳು ಸೂಚಿಸಿದ್ದಾರೆ. ಇದನ್ನೂ ಓದಿ: ಕಪಿಲಾ ನದಿ ಪ್ರವಾಹ: ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್

ಕಬಿನಿ ಜಲಾನಯನ ಪ್ರದೇಶದಲ್ಲಿ ಪ್ರವಾಹ ಉಂಟಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಕಬಿನಿ ಜಲಾಶಯದಿಂದ ಬರೋಬ್ಬರಿ 80 ಸಾವಿರ ಕ್ಯೂಸೆಕ್ಸ್ ನೀರು ಹೊರಕ್ಕೆ ಯಾವುದೇ ಕ್ಷಣದಲ್ಲಿ ಮತ್ತಷ್ಟು ಜಲಾಶಯಕ್ಕೆ ಒಳಹರಿವು ಸಾಧ್ಯತೆ ಇದೆ. ಆದ್ದರಿಂದ ನದಿ ಪಾತ್ರದ ಜನರು ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಲಾಗಿದೆ. ಆದರೆ ಇದೇ ಮೊದಲ ಬಾರಿಗೆ ಕಪಿಲಾ ನದಿ ದಾಖಲೆ ರೂಪದಲ್ಲಿ ಉಕ್ಕಿ ಹರಿಯುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *