ಚೆನ್ನೈ: ಫಸ್ಟ್ ನೈಟ್‍ಗೆ ಬಿಡಲಿಲ್ಲ ಎಂದು ಮಗನೊಬ್ಬ ತನ್ನ ತಂದೆಯನ್ನೇ ಕೊಲೆ ಮಾಡಿದ ಘಟನೆ ತಮಿಳುನಾಡಿನ ಅರಿಯಲೂರ್ ಜಿಲ್ಲೆಯ ಅದಿಚ್ಚನಲ್ಲೂರ್ ಗ್ರಾಮದಲ್ಲಿ ನಡೆದಿದೆ.
ಷಣ್ಮುಖಂ (48) ಕೊಲೆಯಾದ ತಂದೆಯಾಗಿದ್ದು, ಇಲಾಮತಿ ಕೊಲೆ ಮಾಡಿ ಬಂಧನಕ್ಕೊಳಗಾದ ಮಗ. ಗುರುವಾರದಂದು ಇಲಾಮತಿ ಮದುವೆಯಾಗಿದ್ದನು. ಅದೇ ದಿನ ರಾತ್ರಿ ತಂದೆ ಹಾಗೂ ಮಗನ ನಡುವೆ ತೀವ್ರವಾಗಿ ವಾಗ್ವಾದ ನಡೆದಿದೆ. ಬಳಿಕ ಇದರಿಂದ ಕೋಪಗೊಂಡ ಇಲಾಮತಿ ತನ್ನ ತಂದೆ ಷಣ್ಮುಖಂನನ್ನು ಕೊಲೆ ಮಾಡಿದ್ದಾನೆ.
ಗುರುವಾರ ರಾತ್ರಿ ಷಣ್ಮುಖಂ ತನ್ನ ಮಗ ಇಲಾಮತಿ ಬಳಿ ಮದುವೆಗೆ ಆದ ಖರ್ಚು ಹಾಗೂ ಉಡುಗೊರೆಯ ಮಾಹಿತಿ ಕೇಳಿದ್ದಾರೆ. ಇದಕ್ಕೆ ಇಲಾಮತಿ ಈ ಬಗ್ಗೆ ಬೆಳಗ್ಗೆ ಮಾತನಾಡೋಣ ಎಂದು ತಂದೆ ಬಳಿ ಕೇಳಿಕೊಂಡಿದ್ದಾನೆ. ಆದರೆ ಷಣ್ಮಖಂ ಇದಕ್ಕೆ ಒಪ್ಪಲಿಲ್ಲ.
ಷಣ್ಮಖಂ ತನ್ನ ಮಾತಿಗೆ ಒಪ್ಪದಿದ್ದಾಗ ತಂದೆ- ಮಗ ಇಬ್ಬರ ನಡುವೆ ಜಗಳ ಶುರುವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಷಣ್ಮಖಂ ತನ್ನ ಮಗ ಇಲಾಮತಿಯನ್ನು ಕೋಲಿನಿಂದ ಹೊಡೆದಿದ್ದಾರೆ. ಇದರಿಂದ ಕೋಪಗೊಂಡ ಇಲಾಮತಿ ತಂದೆ ಕೈಯಲ್ಲಿದ್ದ ಕೋಲನ್ನು ಕಸಿದುಕೊಂಡು ಅವರ ತಲೆ ಮೇಲೆ ಹೊಡೆದು ಹಲ್ಲೆ ಮಾಡಿದ್ದಾನೆ.
ಇಲಾಮತಿ ಹಲ್ಲೆಯಿಂದ ಷಣ್ಮಖಂ ಸ್ಥಳದಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಬಳಿಕ ಕುಟುಂಬದವರು ಹಾಗೂ ಸಂಬಂಧಿಕರು ಷಣ್ಮಖಂನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಅಷ್ಟರಲ್ಲಿಯೇ ಷಣ್ಮಖಂ ಮೃತಪಟ್ಟಿದ್ದರು. ಸದ್ಯ ಉದಯರ್‍ಪಾಲಯಂ ಪೊಲೀಸರು ಇಲಾಮತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.