ಹಸೆಮಣೆ ಏರಿದ ಕೆಲವೇ ನಿಮಿಷದಲ್ಲಿ ಪರೀಕ್ಷೆ ಬರೆದ ವಧು!

Public TV
2 Min Read

ಹಾಸನ: ವ್ಯಾಸಂಗದಲ್ಲಿ ಒಂದು ವರ್ಷ ವ್ಯರ್ಥವಾಗಬಾರದು ಎನ್ನುವ ಕಾರಣಕ್ಕೆ, ಹಸೆಮಣೆ ಏರಿದ ಕೆಲವೇ ಹೊತ್ತಿನಲ್ಲಿ ನವವಧು ಬಿಕಾಂ ಪರೀಕ್ಷೆ ಬರೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ.

ಅರಸೀಕೆರೆ ತಾಲೂಕು ಗಂಡಸಿ ನಿವಾಸಿ ನವೀನ್ ಮತ್ತು ಹಾಸನದ ಜಯನಗರ ಬಡಾವಣೆಯ ಶ್ವೇತಾ ಮದುವೆ ಇಂದು ಹಾಸನದಲ್ಲಿ ನೆರವೇರಿತು. ಈ ಜೋಡಿ ಬೆಳಗ್ಗೆ 7.45ರಿಂದ 8.45 ಗಂಟೆಗೆ ಮದುವೆಯಾಗಿ, ಇದನ್ನು ಸ್ಮರಣೀಯವಾಗಿಸುವ ಒಂದೊಳ್ಳೆ ಕೆಲಸ ಮಾಡಿದರು.

ಮದುವೆಯಾದ ಕೆಲವೇ ಹೊತ್ತಿನಲ್ಲಿ ಶ್ವೇತಾ ಬಿಕಾಂ ಅಂತಿಮ ವರ್ಷದ ಪರೀಕ್ಷೆ ಬರೆದು ಎಲ್ಲರ ಗಮನ ಸೆಳೆಸಿದ್ದಾಳೆ. ಪತ್ನಿಗೆ ಸಂಪೂರ್ಣ ಸಾಥ್ ನೀಡಿರುವ ವರ ನವೀನ್, ಮದುವೆ ಜೊತೆಯಲ್ಲೇ ಭವಿಷ್ಯವೂ ಮುಖ್ಯ ಹಾಗಾಗಿ ಆಕೆಯ ಇಚ್ಛೆಯಂತೆ ಪರೀಕ್ಷೆ ಬರೆಸಿದ್ದೇನೆ ಎಂದಿದ್ದಾರೆ.

ನವೀನ್ ಹಾಗೂ ಶ್ವೇತಾ ನಿಶ್ಚಿತಾರ್ಥವು ಕಳೆದ ಮೇ 6ರಂದು ಆಗಿತ್ತು. ಇತ್ತ ಪರೀಕ್ಷೆಯ ದಿನಾಂಕವೂ ನಿಗದಿಯಾಗಿತ್ತು. ಹೀಗಾಗಿ ನವೆಂಬರ್ 18ರಂದು ಮನೆಯವರು ಮದುವೆ ನಿಶ್ಚಯ ಮಾಡಿದ್ದರು. ಆದರೆ ಉಪಚುನಾವಣೆ ಹಿನ್ನೆಲೆಯಲ್ಲಿ ನವೆಂಬರ್ 3ರಂದು ನಡೆಯಬೇಕಿದ್ದ ಕಾರ್ಪೊರೇಟ್ ಅಕೌಂಟ್ ಅಂಡ್ ಲಾ ಪರೀಕ್ಷೆಯನ್ನು ಇಂದಿಗೆ ಮುಂದೂಡಿತ್ತು. ಇದೇ ದಿನ ಮದುವೆ ಇದ್ದರೂ, ಆರತಕ್ಷತೆ ಸೇರಿದಂತೆ ಮದುವೆ ಶಾಸ್ತ್ರಗಳನ್ನು ಬೇಗ ಬೇಗ ಮುಗಿಸಿದ ಮನೆಯವರು ಮತ್ತು ಪುರೋಹಿತರು ಶ್ವೇತಾ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದ್ದಾರೆ. ಎಲ್ಲರ ಸಹಕಾರದಿಂದ ಹಾಸನದ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶ್ವೇತಾ ಪರೀಕ್ಷೆ ಬರೆದಿದ್ದಾಳೆ.

ಒಂದು ವರ್ಷ ವ್ಯರ್ಥವಾಗಬಾರದು ಎಂಬ ಉದ್ದೇಶದಿಂದ ನಿದ್ರೆ ಇಲ್ಲದೆಯೂ ಪರೀಕ್ಷೆ ಬರೆದಿದ್ದೇನೆ. ಪರೀಕ್ಷೆ ಕಷ್ಟಕರವಾಗಿರಲಿಲ್ಲ. ಮದುವೆ ದಿನವೇ ಪರೀಕ್ಷೆ ಬರುತ್ತೆ ಅಂತಾ ಅಂದುಕೊಂಡಿರಲಿಲ್ಲ. ಹೊಸ ಅನುಭವ ತುಂಬಾ ಚೆನ್ನಾಗಿತ್ತು. ಪಾಸಾಗುವ ಮಟ್ಟಕ್ಕೆ ಪರೀಕ್ಷೆ ಬರೆದಿದ್ದೇನೆ. ಡಿಸ್ಟಿಂಕ್ಷನ್ ಬರುವ ನನಗೆ ಪಾಸಾಗುವ ವಿಶ್ವಾಸವಿದೆ ಎಂದು ಶ್ವೇತಾ ಪಬ್ಲಿಕ್ ಟಿವಿಗೆ ತಿಳಿಸಿದ್ದಾಳೆ.

ಪರೀಕ್ಷೆ ಬರೆಯಲು ಸಹಕಾರ ನೀಡಿದ ಪತಿ ಸೇರಿದಂತೆ ಎಲ್ಲರಿಗೂ ಶ್ವೇತಾ ಧನ್ಯವಾದ ತಿಳಿಸಿದ್ದಾಳೆ. ಇದೇ ವೇಳೆ ಪತ್ನಿಯನ್ನು ಪರೀಕ್ಷಾ ಕೇಂದ್ರಕ್ಕೆ ತಂದು ಬಿಟ್ಟು, ಆಕೆ ಹೊರ ಬರುವವರೆಗೂ ಹೊರಗಡೆ ಕಾದು ಕುಳಿತಿದ್ದ ವರ ನವೀನ್ ಮಾತನಾಡಿ, ಬಿಕಾಂ ಮುಗಿದ ಕೂಡಲೇ ಎಂಕಾಂ ಓದಿಸುತ್ತೇನೆ. ಇದು ಒಂದೆಡೆ ಖುಷಿ ಮತ್ತೊಂದೆಡೆ ಸಂಬಂಧಿಕರು ಏನೆಂದುಕೊಳ್ಳುತ್ತಾರೋ ಎನ್ನುವ ಅಳುಕಿದೆ. ಆದರೂ ಭವಿಷ್ಯದ ಹಿತದೃಷ್ಟಿ ಜೊತೆಗೆ ಆಕೆ ಚೆನ್ನಾಗಿ ಓದುವ ಕಾರಣಕ್ಕೆ ಪರೀಕ್ಷೆ ಬರೆಸಿದ್ದೇನೆ ಎಂದರು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *