ಕೋಲಾರ: ಆರತಕ್ಷತೆಗೂ ಮುನ್ನ ನವವಧು ನಾಪತ್ತೆಯಾಗಿದ್ದು, ಬಳಿಕ ವಧುವಿನ ಸಹೋದರಿ ಜೊತೆ ಮದುವೆ ಫಿಕ್ಸ್ ಆಯಿತು. ಆದರೆ ಮುಂಜಾನೆ ವರನೇ ನಾಪತ್ತೆಯಾಗಿರುವ ವಿಚಿತ್ರ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮಾಲೂರು ಪಟ್ಟಣದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಇಂದು ಮಾಲೂರು ತಾಲೂಕಿನ ಚನ್ನಕಲ್ಲು ಗ್ರಾಮದ ಗುರೇಶ್ ಜೊತೆ ಬಂಗಾರಪೇಟೆ ತಾಲೂಕಿನ ನರ್ನಹಳ್ಳಿ ಗ್ರಾಮದ ಚೈತ್ರ(ಹೆಸರು ಬದಲಾಯಿಸಲಾಗಿದೆ) ಜೊತೆ ಮದುವೆ ನಿಶ್ಚಯವಾಗಿತ್ತು.
ಅಂತೆಯೇ ಶನಿವಾರ ಸಂಜೆ ಆರತಕ್ಷತೆಗೆ ಕಲ್ಯಾಣ ಮಂಟಪದಲ್ಲಿ ಎಲ್ಲಾ ಸಿದ್ಧತೆ ನಡೆದಿತ್ತು. 700 ಕ್ಕೂ ಹೆಚ್ಚು ಬಂಧು-ಮಿತ್ರರಿಗೆ ಭರ್ಜರಿ ಭೋಜನದ ವ್ಯವಸ್ಥೆಯಾಗಿತ್ತು. ಆದರೆ ಮದುಮಗಳು ನಾಪತ್ತೆಯಾಗಿದ್ದಾರೆ. ಇದರಿಂದ ವರನ ಮನೆಯವರು ಕಂಗಾಲಾಗಿದ್ದು, ಕಲ್ಯಾಣ ಮಂಟಪಕ್ಕೆ ಬಾರದ ವಧುವಿನ ಮನೆಯವರು ಫೋನ್ ತೆಗೆಯದ ಹಿನ್ನೆಲೆಯಲ್ಲಿ ವರನ ಸಂಬಂಧಿಕರು ವಿಚಾರಣೆ ಮಾಡಲು ವಧುವಿನ ಗ್ರಾಮಕ್ಕೆ ತೆರಳಿದ್ದಾರೆ.
ಈ ವೇಳೆ ವಧುವಿನ ಕಡೆಯವರು ಆರ್ಥಿಕ ಸಂಕಷ್ಟವನ್ನ ಹೇಳಿಕೊಂಡಿದ್ದಾರೆ. ಹಾಗಾಗಿ ಗ್ರಾಮಸ್ಥರು, ಎರಡು ಕುಟುಂಬದರು ಮಾತನಾಡಿ ವಧುವಿನ ಸಹೋದರಿ ಜೊತೆ ಅದೇ ಮಂಟಪದಲ್ಲಿ ಬೆಳಗಿನ 7.30 ರಿಂದ 8.30 ಶುಭ ಲಗ್ನದಲ್ಲಿ ಮುಹೂರ್ತ ಮಾಡಿ ಮುಗಿಸಲು ಗುರು-ಹಿರಿಯರು ಮುಂದಾಗಿದ್ದರು. ಆದರೆ ಮುಂಜಾನೆ ವರ ತನಗೆ ಮದುವೆ ಇಷ್ಟ ಇಲ್ಲವೆಂದು ನಾಪತ್ತೆಯಾಗಿದ್ದಾರೆ. ಮಂಟಪದಲ್ಲಿ ವರನಿಗಾಗಿ ಸಂಬಂಧಿಕರು ಕಾದು ಕುಳಿತಿದ್ದಾರೆ.
ಈ ಘಟನೆ ಸಂಬಂಧ ಮಾಲೂರು ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.