ಬ್ರಿಕ್ಸ್‌ ಅಮೆರಿಕ ವಿರೋಧಿ ಒಕ್ಕೂಟ – 10% ಹೆಚ್ಚುವರಿ ತೆರಿಗೆ ಹಾಕ್ತೀನಿ: ಟ್ರಂಪ್‌ ವಾರ್ನಿಂಗ್‌

Public TV
3 Min Read

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಮತ್ತೆ ಬ್ರಿಕ್ಸ್‌ (BRICS) ಒಕ್ಕೂಟಕ್ಕೆ ತೆರಿಗೆ ಸಮರದ ಬೆದರಿಕೆ ಹಾಕಿದ್ದಾರೆ. ಬ್ರಿಕ್ಸ್‌ ಜೊತೆ ಹೊಂದಾಣಿಕೆ ಮಾಡುವ ಯಾವುದೇ ದೇಶಕ್ಕೆ 10% ಹೆಚ್ಚುವರಿ ಸುಂಕ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬ್ರೆಜಿಲ್‌, ರಷ್ಯಾ, ಇಂಡಿಯಾ, ಚೀನಾ, ಸೌತ್‌ ಆಫ್ರಿಕಾ ಒಳಗೊಂಡಿರುವ ಬ್ರಿಕ್ಸ್‌ ಅನ್ನು ಅಮೆರಿಕ ವಿರೋಧಿ ಎಂದು ಟ್ರಪ್‌ ಪರಿಗಣಿಸಿದ್ದಾರೆ. ತಮ್ಮ ಟ್ರೂತ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಟ್ರಂಪ್‌, ಬ್ರಿಕ್ಸ್‌ ಅಮೇರಿಕನ್ ವಿರೋಧಿ ನೀತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಯಾವುದೇ ದೇಶಕ್ಕೆ ಹೆಚ್ಚುವರಿಯಾಗಿ 10% ಸುಂಕ ವಿಧಿಸಲಾಗುತ್ತದೆ. ಈ ನೀತಿಗೆ ಯಾವುದೇ ವಿನಾಯಿತಿ ಇರುವುದಿಲ್ಲ ಎಂದು ಗುಡುಗಿದ್ದಾರೆ.  ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಕ್ವಿರುದ್ಧ ಮೋದಿ ಕಟು ವಾಗ್ದಾಳಿ ಬುದ್ಧನ ಶಾಂತಿ ತತ್ವ ಪ್ರತಿಪಾದಿಸಿದ ಪ್ರಧಾನಿ

ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆಯುತ್ತಿರುವ 17ನೇ ಬ್ರಿಕ್ಸ್ ಶೃಂಗಸಭೆಯ (BRICS Summit) ಸಮಯದಲ್ಲೇ ಟ್ರಂಪ್‌ ಈ ನಿರ್ಧಾರ ಪ್ರಕಟಿಸಿರುವುದು ವಿಶೇಷ. ಇದರ ಜೊತೆ ಭಾರತ (India) ಮತ್ತು ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದ ಸಂಬಂಧ ಕೆಲ ತಿಂಗಳಿನಿಂದ ಮಾತುಕತೆ ನಡೆಸುತ್ತಿರುವ ಸಮಯದಲ್ಲೇ ಟ್ರಂಪ್‌ ಅವರು ಎಚ್ಚರಿಕೆಯ ಪೋಸ್ಟ್‌ ಹಾಕಿದ್ದಾರೆ.

 

ಏನಿದು ಬ್ರಿಕ್ಸ್‌?
ಬ್ರಿಕ್ಸ್’ (BRICS) ಎಂಬುದು ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಎಂಬುದರ ಸಂಕ್ಷಿಪ್ತ ರೂಪ. ಜಾಗತಿಕವಾದ ಆರ್ಥಿಕ ಅಭಿವೃದ್ಧಿ ಮತ್ತು ಸಹಕಾರಗಳಿಗೆ ಸಂಬಂಧಿಸಿದಂತೆ ಬೆಳೆಯುತ್ತಿರುವ ಆರ್ಥಿಕ ಶಕ್ತಿಗಳ ನಡುವಿನ ಮೈತ್ರಿಕೂಟವನ್ನು ಇದು ಪ್ರತಿನಿಧಿಸುತ್ತದೆ. ಮೊದಲ ಶೃಂಗಸಭೆಯು 2009 ರಲ್ಲಿ ರಷ್ಯಾದ ಒಕ್ಕೂಟದಲ್ಲಿ ನಡೆದಿತ್ತು. ಆಗ ಜಗತ್ತಿನಾದ್ಯಂತ 20ಕ್ಕೂ ಹೆಚ್ಚು ರಾಷ್ಟ್ರಗಳು ಬ್ರಿಕ್ಸ್‌ನ ಸದಸ್ಯತ್ವವನ್ನು ಕೋರಿ ಅರ್ಜಿಗಳನ್ನು ಸಲ್ಲಿಸಿದ್ದರೆ, ಇತರ 15ಕ್ಕೂ ಹೆಚ್ಚು ದೇಶಗಳು ಬ್ರಿಕ್ಸ್‌ನ ಭಾಗವಾಗುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದವು.  ಇದನ್ನೂ ಓದಿ: ಡಾಲರ್‌ಗೆ ಪೈಪೋಟಿ ನೀಡಲು ಹೊಸ ಕರೆನ್ಸಿ ಆರಂಭಿಸುವ ನಿರ್ಧಾರ ಕೈಗೊಂಡಿಲ್ಲ: ಜೈಶಂಕರ್

ಏನಿದು ಬ್ರಿಕ್ಸ್‌ ಕರೆನ್ಸಿ?
ಬ್ರಿಕ್ಸ್‌ ಕರೆನ್ಸಿಯ ಪ್ರಸ್ತಾಪವನ್ನು 2022ರ ಶೃಂಗಸಭೆಯಲ್ಲಿ ರಷ್ಯಾ ಮೊದಲು ಪ್ರಸ್ತಾಪಿಸಲಾಗಿತ್ತು. ನಂತರದ ದಿನಗಳಲ್ಲಿ ಡಾಲರ್‌ ಯಾಕೆ ವಿಶ್ವದ ಕರೆನ್ಸಿಯಾಗಬೇಕು ಎಂಬ ವಿಚಾರಗಳು ಚರ್ಚೆಗೆ ಬಂತು. ನಂತರ ಭಾರತ ರಷ್ಯಾ, ಚೀನಾ, ಬ್ರೆಜಿಲ್‌ಗಳು ರಷ್ಯಾದ ಜೊತೆ ಸ್ಥಳೀಯ ಕರೆನ್ಸಿಯಲ್ಲೇ ವ್ಯವಹಾರ ನಡೆಸುತ್ತಿದೆ. ರಷ್ಯಾದ ಕಾಜಾನ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಬ್ರಿಕ್ಸ್‌ ನೋಟ್‌ ಹಿಡಿದುಕೊಂಡಿದ್ದರು. ಈ ನೋಟು ದೊಡ್ಡ ಸುದ್ದಿಯಾಗುತ್ತಿದ್ದಂತೆ ಬ್ರಿಕ್ಸ್‌ ಕರೆನ್ಸಿಯ ಬಗ್ಗೆ ಚರ್ಚೆ ಹೆಚ್ಚಾಯಿತು. ಆ ಬಳಿಕ ಕಳವಳಗೊಂಡಿದ್ದ ಟ್ರಂಪ್‌ ಅಧಿಕಾರ ಸ್ವೀಕಾರಕ್ಕೂ ಮೊದಲೇ ಬ್ರಿಕ್ಸ್‌ ದೇಶಗಳಿಗೆ 100% ಸುಂಕ ವಿಧಿಸುವ ಎಚ್ಚರಿಕೆ ಕೊಟ್ಟಿದ್ದರು.

ಸದ್ಯ ಒಂದೊಂದು ದೇಶಗಳಲ್ಲಿ ಒಂದೊಂದು ಕರೆನ್ಸಿ ಇದೆ. ಬ್ರೆಜಿಲ್‌ನಲ್ಲಿ ʻರಿಯಾಲ್‌ʼ, ರಷ್ಯಾದಲ್ಲಿ ʻರುಬೆಲ್‌ʼ, ಭಾರತದಲ್ಲಿ ʻರೂಪಾಯಿʼ, ಚೀನಾದಲ್ಲಿ ʻಯುವಾನ್‌ʼ, ದಕ್ಷಿಣ ಆಫ್ರಿಕಾದಲ್ಲಿ ʻರಾಂಡ್‌ʼ ಇದೆ. ಒಂದೊಂದು ದೇಶದಲ್ಲಿ ಒಂದೊಂದು ಕರೆನ್ಸಿ ಇರುವ ಕಾರಣ ಎಲ್ಲ ದೇಶಗಳಿಗೆ ಒಂದು ದೇಶದ ಕರೆನ್ಸಿಯನ್ನು ಅಪ್ಲೈ ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಹೊಸ ಕರೆನ್ಸಿ ಬರಬೇಕು. ಇದಕ್ಕಾಗಿ ʻಬ್ರಿಕ್ಸ್‌ʼ ಮುಂದಾಗಿದೆ.

ಸದ್ಯ ಹೊಸ ಕರೆನ್ಸಿ ವಿಚಾರದಲ್ಲಿ ಈಗಾಗಲೇ ರಷ್ಯಾ, ಬ್ರೆಜಿಲ್‌, ದಕ್ಷಿಣಾ ಆಫ್ರಿಕಾದ ಒಪ್ಪಿಗೆ ಸೂಚಿಸಿದ್ದು, ಭಾರತದ ನಿಲುವಿಗಾಗಿ ಚೀನಾ ಕಾಯುತ್ತಿದೆ. ಒಟ್ಟಿನಲ್ಲಿ ಬ್ರಿಕ್ಸ್‌ ಒಕ್ಕೂಟ ಮತ್ತಷ್ಟು ಬಲಗೊಂಡರೆ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳ ಏಕಸ್ವಾಮ್ಯಕ್ಕೆ ಪೆಟ್ಟು ಬೀಳುವುದು ನಿಶ್ಚಿತ.

Share This Article