ಅಮೆಜಾನ್ ಕಾಡ್ಗಿಚ್ಚು ತಣಿಸಲು ಜಿ7 ದೇಶಗಳ ನೆರವನ್ನು ತಿರಸ್ಕರಿದ ಬ್ರೆಜಿಲ್

Public TV
2 Min Read

ಬ್ರೆಜಿಲಿಯಾ: ಕಾಡ್ಗಿಚ್ಚಿಗೆ ಹೊತ್ತಿ ಉರಿಯುತ್ತಿರುವ ಅಮೆಜಾನ್ ಮಳೆ ಕಾಡನ್ನು ತಣಿಸಲು ಜಿ7 ದೇಶಗಳು 22 ದಶಲಕ್ಷ ಡಾಲರ್ ದೇಣಿಗೆಯನ್ನು ನೀಡಲು ಮುಂದಾಗಿತ್ತು. ಆದರೆ ಈ ನೆರವನ್ನು ಬ್ರೆಜಿಲ್ ಸರ್ಕಾರ ತಿರಸ್ಕರಿಸಿದೆ.

ಅಮೆರಿಕ, ಜಪಾನ್, ಜರ್ಮನಿ, ಫ್ರಾನ್ಸ್, ಇಟಲಿ, ಬ್ರಿಟನ್ ಮತ್ತು ಕೆನಡಾ ಈ 7 ದೇಶದ ಗುಂಪನ್ನೇ ಜಿ7 ಎಂದು ಕರೆಯಲಾಗುತ್ತದೆ. ಸೋಮವಾರ ಜಿ7 ಶೃಂಗಸಭೆಯಲ್ಲಿ ಮಾತನಾಡಿದ ಫ್ರೆಂಚ್ ಅಧ್ಯಕ್ಷ ಎಮ್ಮಾನ್ಯುಯಲ್ ಮ್ಯಾಕ್ರಾನ್ ಅವರು, ಅಮೆಜಾನ್ ಕಾಡಿನಲ್ಲಿ ಹೊತ್ತಿಕೊಂಡಿರುವ ಬೆಂಕಿಯನ್ನು ತಣಿಸಲು ಜಿ 7 ಗುಂಪಿನ ದೇಶಗಳು 22 ಮಿಲಿಯನ್ ಡಾಲರ್(ಅಂದಾಜು 157 ಕೋಟಿ ರೂ.) ನೆರವು ನೀಡಲು ನಿರ್ಧರಿಸಿದೆ. ಅದರಲ್ಲೂ ಬ್ರಿಟನ್ 12 ಮಿಲಿಯನ್ ಹಾಗೂ ಕೆನಡಾ 11 ಮಿಲಿಯನ್ ಡಾಲರ್ ಹಣವನ್ನು ಪ್ರತ್ಯೇಕವಾಗಿ ನೀಡಲು ನಿರ್ಧರಿಸಿದೆ ಎಂದು ತಿಳಿಸಿದ್ದರು.

ಈ ಹಣವನ್ನು ತಕ್ಷಣವೇ ಬ್ರೆಜಿಲ್‍ಗೆ ನೀಡಲಾಗುತ್ತದೆ ಮತ್ತು ಫ್ರೆಂಚ್‍ನಿಂದ ಸೇನೆಯ ಸಹಕಾರವನ್ನು ಒದಗಿಸಲಾಗುತ್ತದೆ ಎಂದು ಮ್ಯಾಕ್ರಾನ್ ಘೋಷಿಸಿದ್ದರು. ಆದರೆ ಈ ನೆರವನ್ನು ಬ್ರೆಜಿಲ್ ತಿರಸ್ಕರಿಸಿದೆ. ಯಾವ ಕಾರಣಕ್ಕೆ ಸಹಾಯಧನ ತಿರಸ್ಕರಿಸಲಾಗಿದೆ ಎನ್ನುವ ಬಗ್ಗೆ ಬ್ರೆಜಿಲ್ ಈವರೆಗೂ ಸ್ಪಷ್ಟನೆ ನೀಡಿಲ್ಲ.

ಈ ಬಗ್ಗೆ ಮಾತನಾಡಿದ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಸ್ಲಾನರೊ ಅವರು, ನೀವು ನೆರವು ನೀಡಲು ಮುಂದಾಗಿರುವುದಕ್ಕೆ ಧನ್ಯವಾದ. ಆದರೆ ನಾವು ನಿಮ್ಮ ನೆರವನ್ನು ಸ್ವೀಕರಿಸಲ್ಲ, ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಅವರು ಬ್ರೆಜೆಲ್ ಅನ್ನು ಒಂದು ವಸಾಹತು ದೇಶವನ್ನಾಗಿ ನೋಡುತ್ತಿದ್ದಾರೆ. ಆದರೆ ನಮ್ಮದು ಸ್ವಾತಂತ್ರ್ಯ ದೇಶ ಎಂದು ಕಿಡಿಕಾರಿದ್ದಾರೆ.

ಈ ಮಧ್ಯೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಅವರು ಅಮೆಜಾನ್ ಕುರಿತಂತೆ ಮಾಡಿದ ಟ್ವೀಟ್ ಬ್ರೆಜಿಲ್ ಹಾಗೂ ಫ್ರಾನ್ಸ್ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡಿದೆ. ಮ್ಯಾಕ್ರಾನ್ ಅವರು ಟ್ವೀಟಿನಲ್ಲಿ, ಅಮೆಜಾನ್ ಅರಣ್ಯದಲ್ಲಿ ಕಾಡ್ಗಿಚ್ಚು ಹಚ್ಚಿರುವುದು ಅಂತರಾಷ್ಟ್ರೀಯ ಬಿಕ್ಕಟ್ಟು ಉಂಟಾಗಲು ಕಾರಣವಾಗುತ್ತದೆ. ಹೀಗಾಗಿ ಈ ಬಗ್ಗೆ ಜಿ7 ಶೃಂಗಸಭೆಯಲ್ಲಿ ಉನ್ನತ ಮಟ್ಟದ ಸಭೆ ಮಾಡಿ ಚರ್ಚಿಸಬೇಕಿದೆ ಎಂದು ಬರೆದುಕೊಂಡಿದ್ದರು. ಈ ಟ್ವೀಟ್‍ಗೆ ಬೋಸ್ಲಾನರೊ ಅವರು ರೀ-ಟ್ವೀಟ್ ಮಾಡಿ ಮ್ಯಾಕ್ರಾನ್ ಅವರು ವಸಾಹತುಶಾಹಿ ಮನಸ್ಥಿತಿ ಹೊಂದಿದ್ದಾರೆ ಎಂದು ಗುಡುಗಿದ್ದರು.

ಕಳೆದ ಕೆಲವು ದಿನಗಳಿಂದ ಅಮೆಜಾನ್ ಕಾಡಿನಲ್ಲಿ ಬೃಹತ್ ಪ್ರಮಾಣದ ಕಾಡ್ಗಿಚ್ಚು ಹಬ್ಬಿದ್ದು, ಸರಿಸುಮಾರು 950 ಸಾವಿರ ಹೆಕ್ಟರ್(2.3 ಮಿಲಿಯನ್ ಎಕ್ರೆ) ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿದೆ ಎನ್ನಲಾಗಿದೆ. ಅಮೆಜಾನ್ ಮಳೆಕಾಡಿನ ಕಾಡ್ಗಿಚ್ಚು ಜಾಗತಿಕವಾಗಿ ಆತಂಕವನ್ನು ಸೃಷ್ಟಿಮಾಡಿದೆ.

ಅಮೆಜಾನ್ ಅರಣ್ಯವನ್ನು ಭೂಮಿಯ ಶ್ವಾಸಕೋಶ ಎಂದು ಕರೆಯಲಾಗುತ್ತದೆ. ಯಾಕೆಂದರೆ ಭೂಮಿಗೆ ಬೇಕಾಗುವ ಸುಮಾರು 20% ಆಮ್ಲಾಜನಕವನ್ನು ಅಮೆಜಾನ್ ಅರಣ್ಯ ಒದಗಿಸುತ್ತದೆ. ಅಲ್ಲದೆ ಅಮೆಜಾನ್ ಕಾಡು ವಿಶ್ವದ ಅತೀದೊಡ್ಡ ಅರಣ್ಯವಾಗಿದ್ದು, ಇಲ್ಲಿ ಸರಿಸುಮಾರು 10 ಮಿಲಿಯನ್(1 ಕೋಟಿ) ವಿವಿಧ ಪ್ರಭೇದಗಳ ಗಿಡ, ಮರಗಳು, ಹುಳುಗಳು ಹಾಗೂ ಅಪರೂಪದ ಪ್ರಾಣಿಗಳು ವಾಸವಾಗಿದೆ. ಈಗ ಅರಣ್ಯ ಪ್ರದೇಶ ಕಾಡ್ಗಿಚ್ಚಿಗೆ ಸುಡುತ್ತಿರುವುದರಿಂದ ಬಹುತೇಕ ಪ್ರಾಣಿಗಳು, ಗಿಡ, ಮರಗಳು ಬೆಂಕಿ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *