PublicTV Explainer: ಕೋವಿಡ್ ಬೆನ್ನಲ್ಲೇ ಭೀತಿ ಹುಟ್ಟಿಸಿದ ಮೆದುಳು ತಿನ್ನುವ ಅಮೀಬಾ – ಏನು ಈ ರೋಗ?

Public TV
3 Min Read

ತ್ತೀಚೆಗಷ್ಟೇ ದಕ್ಷಿಣ ಕೊರಿಯಾದಲ್ಲಿ (South Korea) ವ್ಯಕ್ತಿಯೊಬ್ಬರು ವಿಚಿತ್ರ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಮೆದುಳು ತಿನ್ನುವ ಅಮೀಬಾ (Brain Eating Amoeba) ಎನ್ನಲಾಗುವ ಈ ಸೋಂಕು ಕೋವಿಡ್ ಹೆಚ್ಚಳದ ಭೀತಿಯ ಬೆನ್ನಲ್ಲೇ ಜನರಲ್ಲಿ ಮತ್ತೆ ಆತಂಕ ಮೂಡಿಸಿದೆ. ನೆಗ್ಲೇರಿಯಾ ಫೌಲೆರಿ (Naegleria fowleri) ಹೆಸರಿನ ಈ ರೋಗಕ್ಕೆ ದಕ್ಷಿಣ ಕೋರಿಯಾದಲ್ಲಿ ಮೊದಲ ಬಲಿಯಾಗಿದೆ. ಈ ಮಾರಣಾಂತಿಕ ಸೋಂಕಿನ ಲಕ್ಷಣ ಕಂಡುಬಂದ 10 ದಿನಗಳ ನಂತರ 50 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಏನಿದು ಮೆದುಳು ತಿನ್ನುವ ಅಮೀಬಾ? ಮನುಷ್ಯರಿಗೆ ಇದು ಹೇಗೆ ಹರಡುತ್ತೆ? ಆರೋಗ್ಯದ ಮೇಲೆ ಹೇಗೆ ದುಷ್ಪರಿಣಾಮ ಬೀರುತ್ತೆ ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಘಟನೆಯೇನು?
ಥಾಯ್ಲೆಂಡ್ ಪ್ರವಾಸ ಮುಗಿಸಿ ಬಂದ ಕೊರಿಯಾದ ವ್ಯಕ್ತಿಗೆ ನೆಗ್ಲೇರಿಯಾ ಫೌಲೆರಿ ಸೋಂಕು ತಗುಲಿತ್ತು. ಕೊರಿಯಾ ಆಗಮಿಸಿದ ದಿನವೇ ಅವರಿಗೆ ತೀವ್ರವಾದ ತಲೆನೋವು ಸೇರಿದಂತೆ ಸೋಂಕಿನ ಲಕ್ಷಣಗಳು ಕಂಡುಬಂದಿದ್ದವು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಮಂಗಳವಾರ ಅವರು ಮೃತಪಟ್ಟಿದ್ದಾರೆ.

ನೆಗ್ಲೇರಿಯಾ ಫೌಲೆರಿ ಅಂದ್ರೇನು?
ನೇಗ್ಲೇರಿಯಾ ಫೌಲೆರಿ ಎಂಬುದು ಒಂದು ಬಗೆಯ ಅಮೀಬಾ ರೀತಿಯ ಜೀವಿ. ಇವು ಸಾಮಾನ್ಯವಾಗಿ ಕೊಳಗಳು, ನದಿಗಳು, ಕೆರೆಗಳಂತಹ ನೀರಿನ ಪ್ರದೇಶ ಹಾಗೂ ಮಣ್ಣಿನಲ್ಲಿಯೂ ಕಂಡುಬರುತ್ತವೆ.

ನೆಗ್ಲೇರಿಯಾ ಫೌಲೆರಿ ಹರಡೋದು ಹೇಗೆ?
ಈ ಜೀವಿಗಳಿರುವ ನೀರು ಮನುಷ್ಯನ ಮೂಗಿನಲ್ಲಿ ಸೇರಿಕೊಂಡರೆ, ಆತ ಸೋಂಕಿಗೆ ಒಳಗಾಗುತ್ತಾನೆ. ಇದು ಮೂಗಿನ ಮೂಲಕ ಮೆದುಳನ್ನು ಪ್ರವೇಶ ಮಾಡಿ, ಮೆದುಳಿಗೆ ಹಾನಿಮಾಡಲು ಪ್ರಾರಂಭಿಸುತ್ತದೆ. ಇದು ಮೆದುಳಿನ ಅಂಗಾಂಶಗಳನ್ನು ನಾಶಪಡಿಸುವುದರಿಂದ ಇದಕ್ಕೆ ಮೆದುಳು ತಿನ್ನುವ ಅಮೀಬಾ ಎಂದು ಕರೆಯಲಾಗುತ್ತದೆ.

ರೋಗದ ಲಕ್ಷಣವೇನು?
ನೆಗ್ಲೇರಿಯಾ ಫೌಲೆರಿ ಬಾಧಿತರು ತೀವ್ರವಾದ ತೆಲೆನೋವು, ವಾಂತಿ, ಗಂಟಲಿನಲ್ಲಿ ಬಿಗಿತ ಹಾಗೂ ಮಂದಗೊಂಡ ಮಾತಿನ ಲಕ್ಷಣಗಳನ್ನು ಹೊಂದುತ್ತಾರೆ. ಮನುಷ್ಯನಿಗೆ ಸೋಂಕು ತಗುಲಿದ 1-12 ದಿನಗಳಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ರೋಗದ ಲಕ್ಷಣ ತೀವ್ರವಾಗಿ ಮನುಷ್ಯನಿಗೆ ಜ್ವರ ಬರುವ ಸಾಧ್ಯತೆಯೂ ಇರುತ್ತದೆ. ಇದು ಮುಂದುವರಿದಂತೆ ವ್ಯಕ್ತಿಯಲ್ಲಿ ಸ್ನಾಯು ಸೆಳೆತಗಳು, ಭ್ರಾಂತಿ, ಕೋಮಾಗೂ ಹೋಗುವ ಸಾಧ್ಯತೆಯಿರುತ್ತದೆ. ಇದರ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗಿ ವ್ಯಕ್ತಿ 5 ದಿನಗಳಲ್ಲಿ ಸಾವನ್ನಪ್ಪುತ್ತಾನೆ ಎನ್ನಲಾಗಿದೆ.

ಸೋಂಕಿನ ಇತರ ವರದಿಗಳು:
ವರದಿಗಳ ಪ್ರಕಾರ 1962 ರಿಂದ ಇಲ್ಲಿಯವರೆಗೆ 154 ಜನರಲ್ಲಿ ಈ ಸೋಂಕು ಪತ್ತೆಯಾಗಿದೆ. ಅವುಗಳ ಪೈಕಿ ಇಲ್ಲಿಯವರೆಗೆ ಕೇವಲ 4 ಜನರು ಬದುಕುಳಿದಿದ್ದಾರೆ ಎನ್ನಲಾಗಿದೆ. ಅಮೆರಿಕ ಮೂಲದ 22 ವರ್ಷದ ವ್ಯಕ್ತಿ ಈ ಸೋಂಕಿಗೆ ತುತ್ತಾಗಿ ಬದುಕುಳಿದ ಅದೃಷ್ಟಶಾಲಿಗಳಲ್ಲಿ ಒಬ್ಬರಾಗಿದ್ದಾರೆ. ಸೆಬಾಸ್ಟಿನ್ ಡಿಲಿಯಾನ್ 16 ವರ್ಷದವನಾಗಿದ್ದಾಗ ಫ್ಲೋರಿಡಾದ ಈಜುಕೊಳದಲ್ಲಿ ಈಜಾಡಿದ ಬಳಿಕ ಅಮೀಬಾ ಸೋಂಕಿಗೆ ಒಳಗಾಗಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ ಗುಣಪಡಿಸಲಾಗಿತ್ತು.

ರೋಗದ ಬಗ್ಗೆ ಸೋಂಕಿತರು ಹೇಳೋದೇನು?
ಈ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿರುವ ಸೆಬಾಸ್ಟಿನ್, ಸೋಕಿಗೆ ಒಳಗಾದ ಸಂದರ್ಭ ತೀವ್ರವಾದ ತಲೆನೋವು ಕಾಣಿಸಿಕೊಂಡಿತ್ತು. ಅದರ ತೀವ್ರತೆ ಎಷ್ಟಿತ್ತೆಂದರೆ ನನ್ನ ತಲೆ ಮೇಲೆ ದೊಡ್ಡ ಕಲ್ಲನ್ನು ಇಟ್ಟು ಒತ್ತಿದಂತೆ ಎನಿಸುತ್ತಿತ್ತು ಎಂದು ತಿಳಿಸಿದ್ದಾರೆ.

ಚಿಕಿತ್ಸೆ ಏನು?
ಸೆಬಾಸ್ಟಿನ್ ಅವರನ್ನು ಪರೀಕ್ಷಿಸಿದ ತಕ್ಷಣ ವೈದ್ಯರು ಅದು ಅಮೀಬಾ ಎಂದು ಪತ್ತೆ ಹಚ್ಚಿದ್ದರು. ಈ ಸೋಕಿಗೆ ಇಂಪಾವಿಡೋ ಎಂಬ ಔಷಧಿ ನೀಡಿ ಗುಣಪಡಿಸಲಾಗಿತ್ತು. 72 ಗಂಟೆ ಕೋಮಾದಲ್ಲಿದ್ದ ಸೆಬಾಸ್ಟಿನ್ ಬಳಿಕ ನಿಧಾನವಾಗಿ ಚೇತರಿಸಿಕೊಂಡರು. ಆದರೆ ಅವರು ಸಂಪೂರ್ಣವಾಗಿ ಗುಣಮುಖರಾಗಿರಲಿಲ್ಲ. ಇದೆಲ್ಲದರ ಬಳಿಕ ಅವರ ಮೆದುಳು ಉಬ್ಬಿಕೊಂಡಿದ್ದು, ತಮ್ಮ ಕೆಲ ಸಾಮರ್ಥ್ಯ ಹಾಗೂ ಕೌಶಲ್ಯಗಳನ್ನು ಮರೆತಿದ್ದರು. ಬಳಿಕ ಅವರನ್ನು ಪುನರುಜ್ಜೀವನ ಕೇಂದ್ರಕ್ಕೆ ದಾಖಲಿಸಲಾಯಿತು. ಅಲ್ಲಿ ಅವರು ನಡೆಯುವುದು, ಓಡುವುದು, ಬರೆಯುವುದನ್ನು ಮತ್ತೆ ಕಲಿತುಕೊಂಡರು.

ಭಾರತದಲ್ಲಿ ಭೀತಿ?
ನೆಗ್ಲೇರಿಯಾ ಫೌಲೆರಿ ಅಮೀಬಾ ಜಗತ್ತಿನ ಎಲ್ಲ ಖಂಡಗಳಲ್ಲಿ ಕಂಡುಬರುತ್ತವೆ ಎನ್ನಲಾಗಿದೆ. 2015 ರಲ್ಲಿ ಪ್ರಕಟವಾದ ಸಂಶೋಧನಾ ಅಧ್ಯಯನವೊಂದರ ಪ್ರಕಾರ, ಈ ಅಮೀಬಾ ಹರಿಯಾಣ ರಾಜ್ಯದ ರೋಹ್ತಕ್ ಹಾಗೂ ಝಜ್ಜರ್ ಜಿಲ್ಲೆಯಲ್ಲಿರುವ ನೀರಿನ ಪ್ರದೇಶಗಳಲ್ಲಿ ಕಂಡುಬಂದಿದೆ ಎನ್ನಲಾಗಿದೆ.

ಮುನ್ನೆಚ್ಚರಿಕಾ ಕ್ರಮ:
ಅಮೀಬಾ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಬದಲಿಗೆ ನೀರಿನ ಮೂಲಗಳಿಂದ ಹರಡುವ ಸಾಧ್ಯತೆಯಿದೆ. ಮೂಗಿನ ಮೂಲಕ ಸೋಂಕು ಮನುಷ್ಯನ ದೇಹ ಪ್ರವೇಶಿಸುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸೋಂಕು ವರದಿಯಾದ ಪ್ರದೇಶಗಳಲ್ಲಿ ನೀರಿನಲ್ಲಿ ಈಜಾಡದಂತೆ ಸೂಚಿಸಲಾಗುತ್ತದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *